ಆಸೆಬುರುಕ ನಾಯಿಯೊಂದು
ಅಲ್ಲಿ ಇಲ್ಲಿ ಅಲೆದು ಅಲೆದು
ಊಟ ಸಿಗದೆ ಪೆಚ್ಚು ಮೋರೆ
ಮಾಡಿಕೊಂಡಿತು

ಸಿಕ್ಕರೀಗ ತಿಂದುಬಿಡುವೆ
ಎಂದುಕೊಂಡು ನಡೆಯುವಾಗ
ದಾರಿಯಲ್ಲಿ ಎಲುಬನೊಂದ
ಕಂಡು ಹಿಗ್ಗಿತು
ಖುಷಿಯು ಹೆಚ್ಚಿ ಜಿಗಿದು ನೆಗೆದು
ಒಡನೆ ಹೋಗಿ ಅದನು ಕಚ್ಚಿ
ಓಟಕಿತ್ತ ರಭಸಕೆ ಜನ
ಬೆಚ್ಚಿ ಬಿದ್ದರು
ಎಲ್ಲ ನಾಯಿಗಳನು ದೂಡಿ
ಬಿಡದೆ ತಾನೆ ಓಡಿ ಓಡಿ
ನದಿಯ ದಡದಿ ಹೊರಟ ಅದನು
ನೋಡುತಿದ್ದರು
ಗಿಡದ ಕೆಳಗೆ ನಿಂತ ನಾಯಿ
ನೆರಳ ಸವಿಯನುಣುತ ಒಡನೆ
ನೀರು ಕುಡಿಯಲೆಂದು ನದಿಯ
ಕಡೆಗೆ ನಡೆಯಿತು
ನೀರೊಳಿರುವ ಬಿಂಬ ಕಂಡು
ಬೇರೆ ನಾಯಿ ಇದೆಂದುಕೊಂಡು
ತಪ್ಪು ತಿಳಿದ ಕ್ಷಣವೇ ಅದರ
ಎದೆಯು ಒಡೆಯಿತು
ಮರುಳುತನಕೆ ಮಾರು ಹೋಗಿ
ದುರುಳ ಬುದ್ಧಿ ತಲೆಗೆ ಏರಿ
ಹಸಿವ ಮರೆತು ಬೌ ಬೌ
ಎಂದು ಬೊಗಳಿತು
ತಿನ್ನಲೆಂದು ತಂದ ಎಲುಬು
ನೀರಿನಲ್ಲಿ ಮುಳುಗುತಿರಲು
ಕುಹಕಕಿದುವೆ ಶಿಕ್ಷೆ ಎಂದು
ತನ್ನ ತೆಗಳಿತು
#ನೀ.ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301
🌠9448591167