Wednesday, October 25, 2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-37

Must read

ನಮ್ಮ ಸುತ್ತಮುತ್ತ ಇರುವ ಬಾವಿಗಳೆಲ್ಲ ಬತ್ತಿ ಹೋಗಿವೆ. ನದಿ, ಹೊಳೆ ಬಯಲಾಗಿವೆ. ಭೂಮಿಗೆ ನೀರು ಸೇರಲು ನಮ್ಮ ಸಿಮೆಂಟ್ ಬಿಡುತ್ತಿಲ್ಲ. ಅಂಗಳದಲ್ಲೂ ನೀರಿಂಗುತ್ತಿಲ್ಲ! ದುರಾಸೆಯ ಮಾನವ ಸಿಮೆಂಟಿನ ಗೂಡಿನೊಳಗೆ ದಿನೇ ದಿನೇ ಆರೋಗ್ಯ ಕಳೆದುಕೊಳ್ಳುತ್ತಿದ್ದಾನೆ. ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಕ್ಯಾನ್ಸರ್ ನಿಂದ ಸತ್ತರೆಂದು ತಿಳಿದು ತುಂಬಾ ಬೇಸರವಾಯಿತು. ಕಾರಣ ಅವರ ಖಾಯಿಲೆಗೆ ಬೇಕಾದ ಮದ್ದು ಭಾರತದ ಯಾವ ಫಾರ್ಮಸಿ, ಮೆಡಿಕಲ್ ಗಳಲ್ಲೂ ಇರಲಿಲ್ಲವೇ? ಖರ್ಚು ಮಾಡಲು ಅವರ ಬಳಿ ದುಡ್ಡಿರಲಿಲ್ಲವೇ? ಭಾರತದ ಮೂಲ ಆಯುರ್ವೇದ, ನಾಟಿ, ಯುನಾನಿ, ಹೋಮಿಯೋಪತಿ, ಆಲೋಪತಿ, ನೇಚುರೋಪತಿ , ನೇಚರ್ ಕ್ಯೂರ್, ಯೋಗ, ಧ್ಯಾನ ಯಾವುದರಲ್ಲೂ ಅವರನ್ನು ನಮಗೆ ಬದುಕಿಸಿಕೊಳ್ಳಲಾಗಲಿಲ್ಲ ಅಂದ ಮೇಲೆ ನಮ್ಮಂತಹ ಜನಸಾಮಾನ್ಯರ ಪಾಡೇನು!
ಕ್ಯಾನ್ಸರ್ ನಂತಹ ಮಾರಣಾಂತಿಕ ಖಾಯಿಲೆಗಳಿಗೆ ರಾಮಬಾಣ ನಮ್ಮ ಆಹಾರ. ನಾವು ತಿನ್ನುವ ಅಹಾರ ನಮ್ಮ ಇಡೀ ದೇಹದ ಆರೋಗ್ಯದ ಗುಟ್ಟು! ತದನಂತರ ನೀರು. ಚಿಕ್ಕ ಮಕ್ಕಳಿಗೆ ಪ್ರೀತಿಯಿಂದ ನಾವು ತಿನ್ನಿಸುವುದು ವಿಷವನ್ನೇ! ಅಂಗಡಿಯ ಲೇಸ್, ಚಿಪ್ಸ್, ನೂಡಲ್ಸ್, ಮೊಬೈಲಲ್ಲಿ ಯೂಟ್ಯೂಬ್ ತೋರಿಸಿಕೊಂಡು ಊಟ! ಕೆಲವು ಶಾಲಾ ಮಕ್ಕಳು ಮನೆಯಿಂದ ತರುವ ನೀರಿನ ಬಾಟಲಿಯನ್ನೊಮ್ಮೆ ವೀಕ್ಷಿಸಿದರೆ ತಿಳಿಯುತ್ತದೆ. ಅದು ತೊಳೆಯದೆ ಎಷ್ಟೋ ದಿನವಾಗಿರುತ್ತದೆ! ಬಿಸ್ಲೆರಿ ಬಾಟಲಿಯನ್ನು ಇಂತಿಷ್ಟೇ ದಿನ ಉಪಯೋಗಿಸಬೇಕೆಂದಿದೆ. ಅದನ್ನು ವರ್ಷಗಟ್ಟಲೆ ಬಳಸುವವರೂ ಇದ್ದಾರೆ! ಅದರ ಮುಚ್ಚಳದ ಬದಿಯಲ್ಲಿ, ಗೆರೆಗಳಲ್ಲಿ ಕಸ ಮಡುಗಟ್ಟಿರುತ್ತದೆ! ಅದನ್ನೆ ಬಾಯಿಗಿಟ್ಟು ಕುಡಿಯುವ ಮಕ್ಕಳ ಆರೋಗ್ಯ!!
ಮತ್ತೆ ಹೋದಲ್ಲಿ ಈಗಿನ ಸೆಕೆಗೆ ಬಾಯಾರಿಕೆ ಆದಾಗ ನಮಗೆ ನೀರು ತೆಗೆದುಕೊಂಡು ಹೋಗುವ ಅಭ್ಯಾಸ ಹೇಗೂ ಇಲ್ಲ. ಸಿಕ್ಕಿದ ನೀರು ಕುಡಿದು ಆರೋಗ್ಯ ಹಾಳಾಗಿ, ಗಂಟಲು ನೋವು, ಶೀತ, ಕೆಮ್ಮು ಬಂದು ಡಾಕ್ಟರಿಗೊಂದಷ್ಟು ಖರ್ಚು ಮಾಡಿ “ನೀರು ಜಾಸ್ತಿ ಕುಡಿಯಿರಿ” ಎಂಬ ಮಾತು ಕೇಳಿಸಿಕೊಂಡು ಬರುವ ಕಾರ್ಯವನ್ನು ತಪ್ಪದೇ ಮಾಡುತ್ತೇವೆ.
ಉತ್ತಮ ಜೀವನಕ್ಕೆ ಗಾಳಿ, ಆಹಾರ, ನೆಮ್ಮದಿ ಹೇಗೆ ಬೇಕೋ ಹಾಗೇ ಶುದ್ಧವಾದ ನೀರು ಕೂಡಾ ಅಗತ್ಯವಾಗಿದೆ. ನೀರನ್ನು ಪೋಲು ಮಾಡದಿರಿ. ಎಲ್ಲೇ ನೀರು ಸುರಿದು ಹೋಗುತ್ತಿದ್ದರೂ ಸಂಬಂಧ ಪಟ್ಟವರಿಗೆ ತಿಳಿಸಿ. ಪಕ್ಷಿ, ಪ್ರಾಣಿಗಳಿಗೆಂದು ಸ್ವಲ್ಪ ನೀರು ಮನೆಯ ಹೊರಗಿಡಿ. ನೀರನ್ನು ಮುಂದಿನ ಜನಾಂಗಕ್ಕೂ ಉಳಿಯುವಂತೆ ಹಿತಮಿತವಾಗಿ ಬಳಸೋಣ. ನೀವೇನಂತೀರಿ?

 

@ಪ್ರೇಮ್@

More articles

Latest article