Tuesday, October 24, 2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-38

Must read

ಬೇಸಿಗೆಯ ಬಿಸಿಲು ನಮಗೀಗ ಚುರುಕು ಮುಟ್ಟಿಸುತ್ತಿದೆ. ಮಳೆ ಎಂದು ಬರುವುದೋ ಎಂದು ಕಾಯುವಂತೆ ಮಾಡಿದೆ. ತುಂಬಾ ಸೆಕೆ. ನಡೆಯಲಾಗದು, ಕೂರಲಾಗದು, ಮಲಗಲಾಗದು, ಕೆಲಸ ಮಾಡಲೂ ಕಷ್ಟ! ಕುಡಿಯಲು ತಂಪಾಗಿ ಏನಾದರೂ ಸಿಗಲೆಂದು ಹುಡುಕುತ್ತಿರುತ್ತೇವೆ. ರೆಫ್ರಿಜರೇಟರಿಗೀಗ ಬಾರಿ ಬೇಡಿಕೆ. ಅದರೊಂದಿಗೆ ತಂಪು ಪಾನೀಯಗಳ ಮಾಲೀಕ ಹಾಗೂ ಅಂಗಡಿಯವರಿಗೂ ಬಹಳ ವ್ಯಾಪಾರ! ಆದರೆ ಒಂದು ನೆನಪಿಡಿ. ತಣ್ಣಗಿನ ನೀರನ್ನು ಕುಡಿಯದಿರಲು ವೈದ್ಯರು ಸಲಹೆ ನೀಡುವರು. ನಮ್ಮ ದೇಹಕ್ಕೆ ಅತಿ ಬಿಸಿಯಾದ ಮತ್ತು ಅತಿ ತಂಪಾದ ಆಹಾರ ಸೇವನೆ ಒಳ್ಳೆಯದಲ್ಲ. ರೆಫ್ರಿಜರೇಟರಿಂದ ತೆಗೆದು ಕೂಡಲೇ ನೀರು, ಆಹಾರ ಸೇವಿಸಬಾರದು. ಇದರಿಂದ ನಮ್ಮ ಮೂತ್ರಜನಕಾಂಗ, ಜಠರಗಳಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚು. ಹಾಗೆಯೇ ಗಂಟಲು ಹಾಗೂ ಅನ್ನನಾಳದಲ್ಲಿ ಇನ್ಫೆಕ್ಷನ್ ಆಗುವ ಸಾಧ್ಯತೆ ಕೂಡಾ ಇರುತ್ತದೆ. ಮಕ್ಕಳಿಗೂ ನಿರಂತರ ತಂಪು ನೀರನ್ನು ಕುಡಿಯುವ, ತಂಪು ಪಾನೀಯ ಕುಡಿಯು ಅಭ್ಯಾಸ ಕಲಿಸುವುದು ಬೇಡ. ಹಾಗೆಯೇ ಹಸಿರು, ಕೇಸರಿ, ಗುಲಾಬಿ,ಕಾಫಿ ಬಣ್ಣಗಳಲ್ಲಿ ವಿವಿಧ ಪಾನೀಯಗಳೀಗ ಮಾರುಕಟ್ಟೆಯಲ್ಲಿ ಲಭ್ಯ. ಅವು ಸಿಹಿ ಕೂಡಾ. ತಾವು ಕುಡಿಯುವುದಲ್ಲದೆ ಮಕ್ಕಳಿಗೂ ಕುಡಿಸಿ, ನೆಂಟರ ಮನೆಗೆ ಹೋಗುವಾಗ ಅಲ್ಲಿನ ಮಕ್ಕಳಿಗೂ ಕುಡಿಸಿ ಕಲಿಸುವವರು ನಾವೇ. ಮಕ್ಕಳೋ ಸಿಹಿಯ ಆಸೆಗಾಗಿ ಕುಡಿಯುವರು. ಆದರೆ ನೆನಪಿರಲಿ ಅವು ಆರೋಗ್ಯಕ್ಕೆ ಹಾನಿಕಾರಿ. ಪಾರ್ಟಿಗಳಲ್ಲಿ ಹಿರಿಯರು ಹಾಟ್ ಡ್ರಿಂಕ್ಸ್ ಕುಡಿಯುವಾಗ(ಅದೂ ಆರೋಗ್ಯಕ್ಕೆ ಹಾನಿಕರವೇ) ಮಕ್ಕಳಿಗೆ ಸಾಫ್ಟ್ ಡ್ರಿಂಕ್ಸ್ ಕೊಟ್ಟು ಚಿಕ್ಕಂದಿನಲ್ಲಿಯೇ ಅವರನ್ನು ಪಾರ್ಟಿಯ ಕುಡಿತಕ್ಕೆ ರೆಡಿ ಮಾಡುವ ಕಾರ್ಯ ನಮ್ಮ ನಮ್ಮ ಮನೆಗಳಲ್ಲೆ ನಡೆಯುತ್ತದೆ. ಹಿರಿಯರು ಫ್ಯಾಷನ್ ಎಂದೋ, ಕಾಮನ್ ಎಂದೋ ಸುಮ್ಮನಾಗುತ್ತಾರೆ. ಆದರೆ ಮುಂದೆ ಅದುವೆ ಅಭ್ಯಾಸವಾಗಿ, ಹಠವಾಗಿ, ಚಟವಾದಾಗ ನೊಂದುಕೊಂಡು ಮಕ್ಕಳ ತಪ್ಪೆಂದು ಅವರನ್ನು ದೂರುತ್ತಾರೆ. ಮಕ್ಕಳ ಮುಂದೆಯೇ ಕುಳಿತು, ಅವರ ಬಳಿಯೇ ನೀರು, ಸೋಡಾ ತರಿಸಿ ಕುಡಿದು ಜಗಳವಾಡಿ, ಹೆದರಿಸಿ, ಬೈಯ್ಯುವ ತಂದೆಯರೂ ಇದ್ದಾರೆ. ಅದನ್ನು ನೋಡಿಕೊಂಡು ಬೆಳೆದ ಮಕ್ಕಳ ಮೇಲಾಗುವ ಮನಸ್ಥಿತಿಯನ್ನು ನೆನೆಯುವಾಗ ಭಯವಾಗುತ್ತದೆ! ನಮ್ಮ ಮಕ್ಕಳನ್ನು ಮುಂದಿನ ಜೀವನಕ್ಕೆ ಉತ್ತಮ ತಳಪಾಯ ಹಾಕಿಕೊಡುವ ಬದಲು ತಮ್ಮ ಕೆಟ್ಟ ಅಭ್ಯಾಸಗಳಿಂದ ಮಕ್ಕಳ ಜೀವನಕ್ಕೆ ಕೊಳ್ಳಿ ಇಡುವ ಪೋಷಕರನೇಕರಿದ್ದಾರೆ!
ಬರಗಾಲ ಬರುವುದು ಈಗಲೇ. ನೀರಿನ ತತ್ತರ, ತರಕಾರಿಗಳ ಬೆಲೆ ಗಗನಕ್ಕೆ! ಪ್ರತಿಯೊಂದನ್ನೂ ಜಾಣ್ಮೆಯಿಂದ ಬಳಸಬೇಕು. ಸೆಕೆಯ ಸಮಯದಲ್ಲಿ ಹೆಚ್ಚು ಊಟ ಸೇರದು, ನೀರು, ಪಾನೀಯ ಬೇಕೆನಿಸುವುದು. ಹಾಗಂತ ಸಿಕ್ಕ ಸಿಕ್ಕಲ್ಲೆಲ್ಲಾ ನೀರು ಕುಡಿಯುವುದು ಸಲ್ಲದು. ಕೆಲವೊಮ್ಮೆ ನೀರು ಕುಡಿಯಲು ಯೋಗ್ಯವಿರದೆ ಇದ್ದು ಅದು ಆಮಶಂಕೆಯಂತಹ ರೋಗಗಳನ್ನು ತರುವ ಭೀತಿಯಿದೆ. ಮನೆಯಲ್ಲೆ ತಯಾರಿಸಿದ ಎಳ್ಳು, ಸೌತೆಕಾಯಿ, ಪುದಿನಾ, ಕ್ಯಾರೆಟ್, ಹೆಸರು, ಮೆಂತೆ ಅಥವಾ ಹಣ್ಣುಗಳ ಪಾನೀಯಗಳನ್ನೋ, ಮಿಲ್ಕ್ ಶೇಕ್ ಗಳನ್ನೋ ನಾವೇ ತಯಾರಿಸಿ ಕುಡಿಯುವುದು ಆರೋಗ್ಯಕ್ಕೆ ಹಿತಕಾರಿ. ಒಟ್ಟಾರೆಯಾಗಿ ಈ ಬೇಸಿಗೆಯಲ್ಲಿ ಎಲ್ಲರ ಆರೋಗ್ಯ ಚೆನ್ನಾಗಿರಲಿ. ಮುಂದಿನ ದಿನಗಳಲ್ಲಿ ಮಳೆ ಬರಲಿ, ಆದರೆ ಹಿಂದಿನ ವರುಷದಂತೆ ಪ್ರವಾಹ ಬರದಿರಲಿ. ನೀವೇನಂತೀರಿ?

@ಪ್ರೇಮ್@

More articles

Latest article