


ಬಂಟ್ವಾಳ: ತುಳುನಾಡಿನ ಅಭಿವೃದ್ಧಿ ಹಾಗೂ ಐಕ್ಯ ಪರ ಸಂಘಟನೆಯಾದ ತುಳುನಾಡ ರಕ್ಷಣಾ ವೇದಿಕೆಯ ದಶಮಾನೋತ್ಸವದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ತೌಳವ ಉಚ್ಚಯ (ವಿಶ್ವ ತುಳುವರ ಸಮ್ಮಿಲನ) ಕಾರ್ಯಕ್ರಮ ಮಾ. 29ರಿಂದ ಮಾ. 31ರವರೆಗೆ ಮಂಗಳೂರು ಪುರಭವನದಲ್ಲಿ ಜರಗಲಿದೆ ಎಂದು ತುರವೇ ಬಂಟ್ವಾಳ ತಾಲೂಕು ಘಟಕ ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ ಅವರು ತಿಳಿಸಿದ್ದಾರೆ
ಅವರು ಪತ್ರಿಕಾ ಪ್ರಕಟನೆಯಲ್ಲಿ ಮಾಹಿತಿ ನೀಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ರಾಜಕೀಯೇತರ ಸಂಘಟನೆ ತುಳುನಾಡ ರಕ್ಷಣಾ ವೇದಿಕೆಯಾಗಿದೆ. 2009ರಲ್ಲಿ ಸಂಘಟಕ, ಜನಪರ ಕಾಳಜಿಯ ಯುವ ನಾಯಕ ಯೋಗೀಶ್ ಶೆಟ್ಟಿ ಜೆಪ್ಪು ಇವರ ನೇತೃತ್ವದಲ್ಲಿ ಸ್ಥಾಪನೆಗೊಂಡು ಪ್ರಸ್ತುತ ದಶಮಾನೋತ್ಸವ ಸಂಭ್ರಮದಲ್ಲಿದೆ.
ತುಳುನಾಡ ರಕ್ಷಣಾ ವೇದಿಕೆ ಹತ್ತು ವರ್ಷಗಳಿಂದ ಕಾಸರಗೋಡಿನ ಗಡಿ ಸಮಸ್ಯೆಯಿಂದ ಹಿಡಿದು ಕರಾವಳಿ ಜನರಜಾತಿ-ಮತ-ಭಾಷಾ ಸೌಹಾರ್ದತೆ ಮತ್ತು ಜನರ ನಿತ್ಯ ಆಶೋತ್ತರಗಳಿಗೆ ನಿರಂತರ ಸಹಾಯ-ಹೋರಾಟಗಳನ್ನು ಮಾಡಿದೆ.
ಮಾ.29ರಂದು ಮಧ್ಯಾಹ್ನ 3 ಗಂಟೆಗೆ ಸ್ವಾತಂತ್ರ್ಯ ಹೋರಾಟಗಾರರ ನೆನಪಿಗಾಗಿ ಬಾವುಟ ಗುಡ್ಡೆಯಿಂದ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. 3 ದಿನಗಳ ಕಾಲ ವಿವಿಧ ವೇದಿಕೆಗಳಲ್ಲಿ ನಡೆಯುವ ಬೃಹತ್ ಸಮ್ಮೇಳನದಲ್ಲಿ ತುಳುನಾಡಿನಲ್ಲಿರುವ ವಿವಿಧ ಭಾಷೆಗಳ ಬಹುಭಾಷಾ ಸಂಗಮ, ವಿವಿಧ ಗೋಷ್ಠಿಗಳು, ಜಾನಪದ ಸಾಂಸ್ಕೃತಿಕ ಪ್ರದರ್ಶನಗಳು, ಗುಡಿಕೈಗಾರಿಕೆ, ಕರಕುಶಲ, ಪುಸ್ತಕ ಪ್ರದರ್ಶನಗಳು, ತುಳು ಸಂಸ್ಕೃತಿಯನ್ನು ಬಿಂಬಿಸುವ ತುಳುನಾಡ ದಿಬ್ಬಣ, ತುಳುನಾಡಿನ ಆಹಾರೋತ್ಸವ, ತುಳುನಾಡ ರಾಜದರ್ಬಾರ್, ಜಾನಪದ ಕಲಾ ಪ್ರದರ್ಶನ, ಜನ ಮೈತ್ರಿ ಸಂಗಮ, ತೌಳವ ಪ್ರಶಸ್ತಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ, ತುಳು ಹಾಸ್ಯ ಕಾರ್ಯಕ್ರಮಗಳು, ಯಕ್ಷಗಾನ, ನಾಟಕ, ನೃತ್ಯ, ಕೋಸ್ಟಲ್ ವುಡ್ ಸಿನಿಮಾ ಪರ್ಬ, ಮಹಿಳಾ, ಯುವಜನ, ವಿದ್ಯಾರ್ಥಿ ಸಮ್ಮೇಳನ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ನಾಡಿನ ಗಣ್ಯರನ್ನು ಸೇರಿಸಿಕೊಂಡು ವಿವಿಧ ಸಮಿತಿಗಳನ್ನು ರಚಿಸಲಾಗಿದೆ.
3 ದಿನಗಳಲ್ಲಿ ವಿವಿಧೆಡೆಯಿಂದ ಸಾವಿರಾರು ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಚಾರಿತ್ರಿಕ ವಿಶ್ವ ತೌಳವ ಉಚ್ಚಯಕ್ಕೆ ವಿದ್ವಾಂಸರು, ಯಕ್ಷಗಾನ, ನಾಟಕ, ಚಲನವಿತ್ರ ಕಲಾವಿದರು, ಸಾಹಿತಿಗಳು, ಕವಿಗಳು, ಹಾಗೂ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.


