ಬಂಟ್ವಾಳ : ನೇತ್ರಾವತಿ ನದಿಯಲ್ಲಿ ನೀರಿನ ಒಳಹರಿವು ನಿಂತಿದ್ದು ಜನರಿಗೆ ಕುಡಿಯವ ನೀರಿನ ಸಮಸ್ಯೆಯ ಭಯ ಹೆಚ್ಚಾಗಿದೆ.
ಸುಬ್ರಹ್ಮಣ್ಯ ದಿಂದ ಬಿಸಿರೋಡ್ ವರೆಗೆ ಅಧಿಕಾರಿಗಳ ತಂಡ ನದಿ ಒಳಹರಿವಿನ ಬಗ್ಗೆ ವೀಕ್ಷಣೆ ನಡೆಸಿದ್ದು ಅತಂಕ ವ್ಯಕ್ತವಾಗಿದೆ.
ಬಿಸಿಲಿನ ಝಳವು ಹೆಚ್ಚುತ್ತಿದ್ದು ನೇತ್ರಾವತಿ ನದಿ ತುಂಬೆ ಮತ್ತು ಶಂಭೂರು ಎಎಂಆರ್ ಡ್ಯಾಂನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಂಚುಗಳ ಲೆಕ್ಕಾಚಾರದಲ್ಲಿ ಕುಸಿಯುತ್ತಿದೆ. ಆದರೆ, ಕುಡಿಯುವ ನೀರಿನ ಸಮಸ್ಯೆ ಉಂಟಾಗದು.
ವಾರದ ಹಿಂದೆ 5.6 ಮೀಟರ್‌ನಲ್ಲಿದ್ದ ತುಂಬೆ ಡ್ಯಾಂ ನೀರಿನ ಮಟ್ಟ ಮಾ. 18 ರಂದು 5 ಮೀಟರ್‌ಗೆ ಕುಸಿದಿದೆ. ಶಂಭೂರು ಡ್ಯಾಂನಲ್ಲಿ ಸಮುದ್ರ ಮಟ್ಟದಿಂದ 48.40 (5.8 ಮೀಟರ್) ನೀರು ದಾಸ್ತಾನು ಹೊಂದಿದೆ.


ಒಂದು ಅಂದಾಜು ಪ್ರಕಾರ ತುಂಬೆ ಡ್ಯಾಂ ಕುಡಿಯುವ ನೀರಿನ ಸಂಗ್ರಹ ಮುಂದಿನ 40 ದಿನಗಳಿಗೆ ಸಾಕು. ಶಂಭೂರು ಎಎಂಆರ್ ಡ್ಯಾಂ ನೀರಿನಿಂದ ಮುಂದಿನ 15 ದಿನಗಳಷ್ಟು ಕಾಲ ಸುಧಾರಿಸಹುದು ಎನ್ನುವುದು ಅಧಿಕಾರಿ ವರ್ಗದ ಅಭಿಪ್ರಾಯವಾಗಿದೆ.
ಎಎಂಆರ್ ಡ್ಯಾಂನಲ್ಲಿ ತಳದ ಒಂದೂವರೆ ಮೀಟರ್ ನೀರು ಕೂಡಾ ಬಳಕೆಗೆ ದೊರೆಯುವುದಿಲ್ಲ. ಈಗಾಗಲೇ ಸುಮಾರು ಒಂದು ಮೀಟರ್‌ನಷ್ಟು ಹೂಳು ತುಂಬಿದ್ದಾಗಿ ಮಾಹಿತಿ ಮೂಲಗಳು ಹೇಳಿದ್ದು ಅಲ್ಲಿಯೂ 4.3 ಮೀಟರ್ ನೀರು ಬಳಕೆಗೆ ಸಿಗುವುದು. ಆದರೆ ಅದನ್ನು ತುಂಬೆ ಡ್ಯಾಂಗೆ ಹರಿಸಿ ಅಲ್ಲಿಂದ ಎತ್ತಬೇಕು. ನೀರು ತುಂಬೆಗೆ ಹರಿದು ಅಲ್ಲಿ ದಾಸ್ತಾನಾಗಲು ಕನಿಷ್ಟ 24 ಗಂಟೆಗೆ ಅವಧಿ ಬೇಕು.
ಉರಿ ಬಿಸಿಲಿಗೆ ದಿನಕ್ಕೆ ಕನಿಷ್ಟ 1 ರಿಂದ 2ಇಂಚು ನೀರು ಅವಿಯಾಗುವುದಾಗಿ ಹೇಳಲಾಗುತ್ತದೆ.
ಇದರ ನಡುವೆ ಮಳೆಯ ಲಕ್ಷಣ ಇರುವುದರಿಂದ ಒಂದೆರಡು ಮಳೆಯಾದರೂ ನದಿ ನೀರಿನ ಸಂಗ್ರಹದಲ್ಲಿ ಕೊರತೆ ಬಾರದು ಎನ್ನುವ ಲೆಕ್ಕಾಚಾರವಿದೆ.
ಕಳೆದ ಎರಡು ವರ್ಷಗಳ ಹಿಂದೆ ಹೊಸ ವೆಂಟೆಡ್ ಡ್ಯಾಂ ಮೂಲಕ ಆರು ಮೀಟರ್ ಎತ್ತರಕ್ಕೆ ನೀರು ಸಂಗ್ರಹಣೆ ಮಾಡಲಾಗುತ್ತಿದ್ದು , ನೀರಿನ ಸಮಸ್ಯೆ ಎದುರಾಗದು ಎಂಬ ನಿರೀಕ್ಷೆ ಅಧಿಕಾರಿಗಳಾಗಿತ್ತು, ಇನ್ನೊಂದು ಕಡೆ ಯಿಂದ ಕಳೆದ ಬಾರಿ ಸಾಕಷ್ಟು ಮಳೆ ಕೂಡ ಬಂದಿತ್ತು . ಇತ್ತೀಚಿನ ಕೆಲ ದಿನಗಳಿಂದ ವಿಪರೀತ ತಾಪದಿಂದ ನೀರು ಆವಿಯಾಗುತ್ತಿದ್ದು ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿದೆ.

ಹೀಗಾಗಿ ಮಂಗಳೂರು ಮಹಾಜನತೆಗೆ ನೀರು ಕಡಿಮೆಯಾಗುವ ಸಾಧ್ಯತೆ ಗಳು ಹೆಚ್ಚಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಇದೇ ರೀತಿ ನೀರಿನ ಭವಣೆ ಉಂಟಾಗಿ ಮಂಗಳೂರಿಗೆ ಮೂರು ದಿಗಗಳಿಗೊಮ್ಮೆ ನೀರು ಕೊಡುವ ಮೂಲಕ ಬಹಳ ಸಮಸ್ಯೆ ಉಂಟಾಗಿತ್ತು. ಹಾಗಾಗಿ ಇಲಾಖೆ ಈ ಬಾರಿ ಮೊದಲೆ ಎಚ್ಚೆತ್ತುಕೊಂಡು ನೀರಿನ ಸಮಸ್ಯೆ ಯಾಗದಂತೆ ಎಚ್ಚರಿಕೆ ವಹಿಸುತ್ತಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here