Thursday, October 19, 2023

ತಾಲೂಕಾಡಳಿತದ ನಿರ್ಲಕ್ಷ್ಯಕ್ಕೆ ಬಂಟ್ವಾಳ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಸಮಸ್ಯೆ !

Must read

ಬಂಟ್ವಾಳ :  ಬಿ.ಸಿ.ರೋಡಿನ ಮಿನಿವಿಧಾನಸೌಧದಲ್ಲಿ ಕಾರ್ಯಾಚರಿಸುವ  ಅಟಲ್ ಜೀ ಜನಸ್ನೇಹಿ ಕೇಂದ್ರ ಸಮಸ್ಯೆಯಿಂದ ಬಳಲುತ್ತಿದೆ.
ಬಂಟ್ವಾಳ ಮತ್ತು ಪಾಣೆಮಂಗಳೂರು ಹೋಬಳಿ ಅಟಲ್ ಜೀ ಜನಸ್ನೇಹಿ ಕೇಂದ್ರದ ಆಧಾರ್ ಕೇಂದ್ರ, ಪಹಣಿ ಪತ್ರಿಕೆ ವಿತರಣೆ ಹಾಗೂ ಇತರ ಅರ್ಜಿಗಳ ಸ್ವೀಕಾರ ಕೇಂದ್ರಗಳಲ್ಲಿ ಗಣಕಯಂತ್ರಗಳ ತಾಂತ್ರಿಕ ಸಮಸ್ಯೆಗಳಿಂದಾಗಿ ದಿನಂಪ್ರತಿ ನೂರಾರು ಮಂದಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕಳೆದ 6 ತಿಂಗಳಿನಿಂದ ಅಟಲ್ ಜೀ ಕೇಂದ್ರದಲ್ಲಿ ಈ ಸಮಸ್ಯೆ ಉದ್ಬವಿಸಿದರೂ ತಾಲೂಕಾಡಳಿತ, ಜಿಲ್ಲಾಡಳಿತವಾಗಲಿ ಸ್ಪಂದಿಸಲೇ ಇಲ್ಲ.  ಜನಸಾಮಾನ್ಯರ ಸಮಸ್ಯೆಗೆ  ಸ್ಪಂದಿಸುವ ಸಿಬ್ಬಂಧಿಗಳಿದ್ದರೂ ಆಗಾಗ ಇಲ್ಲಿ ಕೈ ಕೊಡುವ  ಕಂಪ್ಯೂಟರ್, ಟೋನರ್, ಪ್ರಿಂಟರ್‌ಗಳನ್ನು ಸರಿಪಡಿಸಲು ಅಥವಾ ಸೂಕ್ತ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತದಿಂದ ಇನ್ನು ಸಾಧ್ಯವಾಗಲಿಲ್ಲ. ಸಿಬ್ಬಂಧಿಗಳಲ್ಲಿ ಕೇಳಿದರೆ ಅಸಹಾಯಕತೆಯಿಂದ ನುಣುಚಿಕೊಳ್ಳುತ್ತಿದ್ದಾರೆ. ತಾಲೂಕು ಕಛೇರಿಯ ಉಪತಹಶೀಲ್ದಾರರಲ್ಲಿ ಪ್ರಶ್ನಿಸಿದರೆ   ಸಮಸ್ಯೆಯ ಅರಿವಿದೆ. ಬಗೆಹರಿಸಲು ಹಣಕಾಸಿನ ಕೊರತೆ ಇದೆ ಎನ್ನುತ್ತಾರೆ. ಕೇಂದ್ರದ ಈ ಸಮಸ್ಯೆಯಿಂದ   ಅಗತ್ಯದ ಕೆಲಸಕ್ಕೆ ಬರುವ ದೂರದೂರ ಗ್ರಾಮದ  ಜನಸಾಮಾನ್ಯ ಕೇಂದ್ರಕ್ಕೆ ಎಡತಾಕುವುದೇ ಕೆಲಸ ಆಗಿದೆ. ತಾಲೂಕಾಡಳಿತ ಮತ್ತು ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ಜನಸಾಮಾನ್ಯರು ಬವಣೆಪಡುವಂತಾಗಿದೆ. ನಿತ್ಯ ಜನರು ತಮ್ಮ ಕೆಲಸವಾಗದೆ ಹಿಡಿಶಾಪ ಹಾಕಿಕೊಂಡು ಬರಿಗೈಯಲ್ಲಿ ವಾಪಾಸುಹೋಗ ಬೇಕಾಗುತ್ತಿದೆ.
ಆಧಾರ್ ಕೇಂದ್ರಕ್ಕೆ ಬೇಕಾದ ಪ್ರಿಂಟರ್ ಇತ್ಯಾದಿ ಸಲಕರಣೆ ಸಮಯಕ್ಕೆ ಸರಿಯಾಗಿ ಪೂರೈಕೆಯಾಗದಿರುವುದೆ ಸಮಸ್ಯೆಗೆ ಮೂಲ ಕಾರಣವಾಗಿದೆ.
ವಿವಿಧ  ಕಾರ್ಯಕ್ರಮಗಳಿಗೆ ಲಕ್ಷಾಂತರ ಹಣ ಖರ್ಚು ಮಾಡಿ ಆಡಂಭರ ಮಾಡುವ ಜಿಲ್ಲಾಡಳಿತ , ತಾಲೂಕು ಆಡಳಿತಕ್ಕೆ ಜನಸ್ನೇಹಿ ಕೇಂದ್ರ, ಅಟಲ್ ಜನಸ್ನೇಹಿ ಕೇಂದ್ರಗಳಿಗೆ  ಅಗತ್ಯವಿರುವ ಪ್ರಿಂಟರ್, ಟೋನರ್, ಗಣಕಯಂತ್ರ  ಸರಿಪಡಿಸಲು ಮುಂದಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ತಾಪಂ ಸದಸ್ಯ ಪ್ರಭಾಕರ ಪ್ರಭು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಆರು ತಿಂಗಳಿನಿಂದ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಈ ಸಮಸ್ಯೆ ಇದ್ದು, ಈ ಬಗ್ಗೆ ತಾಲೂಕಾಡಳಿತದ ಗಮನಕ್ಕೆ ತಂದಿದ್ದರೂ ಸ್ಪಂದಿಸಲಿಲ್ಲ. ಹಾಗಾಗಿ ಜಿಲ್ಲಾಧಿಕಾರಿಯವರಿಗೆ ಸಮಸ್ಯೆಯ ಕುರಿತು ಲಿಖಿತ ಮನವಿ ರವಾನಿಸಿದ್ದು,  ಖುದ್ದಾಗಿ ಸಂಬಂಧಪಟ್ಟ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಈ ಮೂಲಕ ಮನವಿ  ತಾಪಂ ಸದಸ್ಯ ಪ್ರಭಾಕರ ಪ್ರಭು ಒತ್ತಾಯಿಸಿದ್ದಾರೆ. ಹಾಗೆಯೇ ಅಪರ ಜಿಲ್ಲಾಧಿಕಾರಿ, ಮಂಗಳೂರು ಸಹಾಯಕ ಕಮಿಷನರ್ ,ಶಾಸಕ ರಾಜೇಶ್ ನಾಯ್ಕ್ ಅವರಿಗೆ ಮನವಿ ಪ್ರತಿಯನ್ನು ಕಳುಹಿಸಿದ್ದಾರೆ.

More articles

Latest article