ವಿಟ್ಲ: ದೇವರ ಕಾರ್‍ಯವೆಂದು ಭಾವಿಸಿ ಮಾಡುವ ಪ್ರತಿಯೊಂದು ಕಾರ್‍ಯವೂ ಭಗವಂತನಿಗೆ ಸಮರ್ಪಣೆಯಾಗುತ್ತದೆ. ಶೂನ್ಯ ಭಾವದಿಂದ ಮಾಡುವ ಸೇವೆಗೆ ದೇವರು ಸಂಪ್ರೀತರಾಗುತ್ತಾರೆ. ಭಗವಂತನ ಸೇವೆಯಲ್ಲಿ ಗ್ರಾಮದ ಪ್ರತಿಯೊಬ್ಬರೂ ಭಾಗವಹಿಸಿದ್ದು ಶ್ರೇಷ್ಟ ವಿಚಾರ ಎಂದು ಕಟಪಾಡಿ ವೇಣುಗಿರಿ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದರು.
ಅವರು ಶುಕ್ರವಾರ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮಾಡ ಶಿಬರಿಕಲ್ಲ ಶ್ರೀ ಮಲರಾಯ – ಮೂವರ್ ದೈವಂಗಳ ದೈವಸ್ಥಾನ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
ಕರಿಂಜೆ ಓಂ ಶ್ರೀ ಶಕ್ತಿಗುರು ಮಠ ಶ್ರೀಕ್ಷೇತ್ರ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿ ತ್ಯಾಗ ಮನೋಭಾವ ಇದ್ದಾಗ ಸಂಪತ್ತು ಕ್ರೋಢೀಕರಣವಾಗುತ್ತದೆ. ಭಕ್ತರ ಸೇವೆ ನಿಜಾರ್ಥದಲ್ಲಿ ಕಾರ್ಯರೂಪವಾಗಿದೆ. ಸನಾತನ ಹಿಂದೂ ಧರ್ಮ ಪ್ರತಿಯೊಬ್ಬರನ್ನೂ ಪ್ರೀತಿಸು ಎಂಬ ಸಂದೇಶವನ್ನು ಸಾರುತ್ತಿದೆ. ದೇವರು, ಧರ್ಮ, ದೇಶಕ್ಕೆ ಕುಂಡಡ್ಕದಲ್ಲಿ ಗೌರವ ಸಂದಿದೆ ಎಂದು ತಿಳಿಸಿದರು.
ಮಂಗಳೂರು ಇಸ್ಕಾನ್ ಅಧ್ಯಕ್ಷ ಶ್ರೀ ಕಾರುಣ್ಯಸಾಗರದಾಸ ಪ್ರಭು ಮಾತನಾಡಿ ಜೀವನದಲ್ಲಿ ಎಲ್ಲವೂ ಭಗವಂತನ ಕೊಡುಗೆಯಾಗಿದೆ. ಬುದ್ಧಿ ತಪ್ಪು ದಾರಿಗೆ ಇಳಿದು ಭಗವಂತನನ್ನು ಮರೆಯುವ ಕಾರ್‍ಯವಾಗುತ್ತಿದೆ. ಸಮಾಜ ಹಾಗೂ ಭಗವಂತ ಯಾವತ್ತೂ ಬೇರ್ಪಡಿಸಲಾಗದ ಸಂಬಂಧವಾಗಿದೆ. ವಸುದೇವ ಕುಟುಂಬವನ್ನು ಬೆಳೆಸಿದಾಗ ವಿಶ್ವವನ್ನು ಶಾಂತಿಯುತವಾಗಿ ನಿರ್ಮಾಣ ಮಾಡಬಹುದು. ಭಗವಂತನನ್ನು ಮುಂದೆ ಇಟ್ಟು ಮಾಡುವ ಕೆಲಸ ಕಾರ್ಯದಲ್ಲಿ ಯಶಸ್ವಿಯನ್ನು ಕಾಣಬಹುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಾಟಿ ವೈದ್ಯ ಬಾಲು ನಾಯ್ಕ ಕುಡುವರಬೆಟ್ಟು, ನಿವೃತ್ತ ಸೈನಿಕರಾದ ರಮೇಶ್ ಬಿ. ಕೆ. ಪಟ್ಲ, ಲಿಂಗಪ್ಪ ಗೌಡ ಆಲಂಗಾರು, ಕ್ರೀಡಾ ಕ್ಷೇತ್ರದ ಶ್ರೇಯಾ ಡಿ. ಶೆಟ್ಟಿ, ಶಿವಪ್ರಸಾದ್ ಭಟ್ ಅವರನ್ನು ಸನ್ಮಾನಿಸಲಾಯಿತು. ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಅನುವಂಶಿಕ ಮೊಕ್ತೇಸರ ರತ್ನಾಕರ ರಾಜ ಕಿನ್ಯಕ್ಕ ಬಲ್ಲಾಳರು ವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಮಾಣಿ, ಪುಣಚ ಶ್ರೀ ಮಹಿಷಮರ್ಧಿನಿ ದೇವಸ್ಥಾನ ಆಡಳಿತ ಮಂಡಳಿ ಕಾರ್‍ಯದರ್ಶಿ ಶ್ರೀಧರ ಶೆಟ್ಟಿ ದೇವರಗುಂಡಿ, ಶ್ರೀ ಕಾಳಿಕಾಂಭ ವಿನಾಯಕ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕಾರ್‍ಯಾಧ್ಯಕ್ಷ ಸದಾಶಿವ ಆಚಾರ್‍ಯ ವಿಟ್ಲ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್‍ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ಕೊಂಕೋಡಿ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಪ್ರಿನ್ಸಿಪಾಲ್ ಡಾ. ಎಂ. ಎಸ್. ಗೋವಿಂದೇ ಗೌಡ, ಬಂಟ್ವಾಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್. ಕೆ. ಶಿವ, ಸುಶ್ರುತ ಆಯುರ್ವೇದ ಆಸ್ಪತ್ರೆಯ ಡಾ. ರವಿಶಂಕರ್ ಪೆರ್ವಾಜೆ, ಡಾ. ಅಶೋಕ್ ಜಿ. ಕೆ., ಮಂಗಳೂರು ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನದ ಸುಂದರ ಆಚಾರ್‍ಯ ಬೆಳುವಾಯಿ, ಯೋಗೀಶ್ ಕುಡ್ವ, ಕೆ. ಟಿ. ವೆಂಕಟೇಶ್ವರ ನೂಜಿ ಉಪಸ್ಥಿತರಿದ್ದರು.
ತಿಮ್ಮಪ್ಪ ಮಂಜಪಾಲು ಸ್ವಾಗತಿಸಿದರು. ಹರೀಶ್ ಪೂಜಾರಿ ನೀರಕೋಡಿ ಪ್ರಸ್ತಾಪನೆಗೈದರು. ಶ್ರೀಪತಿ ನಾಯಕ್, ಸುಮಂತ್ ಆಳ್ವ ಪ್ರತಿಭಾ ಪುರಸ್ಕಾರ ನಡೆಸಿದರು. ನಾರಾಯಣ ಪೂಜಾರಿ ಎಸ್ ಕೆ., ಸುನೀತಾ ಅಡ್ಯಾಲು ಗೌರವಾರ್ಪಣೆ ನಡೆಸಿದರು. ನವೀನ್ ಮೂಡೈಮಾರು ವಂದಿಸಿದರು. ಪೂಜಾ ದರ್ಬೆ ಕಾರ್‍ಯಕ್ರಮ ನಿರೂಪಿದರು.

ಮಾತೃ ಸಮಾವೇಶ:
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಮಾತಾನಂದಮಯೀ ಅವರ ದಿವ್ಯ ಉಪಸ್ಥಿತಿಯಲ್ಲಿ ಮಾತೃ ಸಮಾವೇಶ ನಡೆಯಿತು. ರಾಷ್ಟ್ರಸೇವಿಕಾ ಸಮಿತಿ ಪ್ರಾಂತ ಕಾರ್ಯಕಾರಿಣಿ ಸದಸ್ಯೆ ಕಮಲಾ ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಿದ್ದರು. ಆಲಂಗಾರು ವರ್ಮುಡಿ ಪದ್ಮಿನಿ ರಾಮ ಭಟ್, ಅರಣ್ಯ ಇಲಾಖೆಯ ಶಶಿಕಲಾ ಶಿವಮೊಗ್ಗ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here