Tuesday, September 26, 2023

ಒಡಿಯೂರು ತುಳುಬದ್ಕ್‌ದ ಉಲತಿರ್‍ಲ್ ವಿಚಾರಗೋಷ್ಠಿ

Must read

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಗುರುವಾರ ನಡೆದ ಶ್ರೀ ಒಡಿಯೂರು ರಥೋತ್ಸವ – ತುಳುನಾಡ್ದ ಜಾತ್ರೆ 2019ರ ಅಂಗವಾಗಿ ತುಳು ಭಾಷೆ-ಸಂಸ್ಕೃತಿ ಜಾಗೃತಿಗಾಗಿ ತುಳು ಬದ್ಕ್‌ದ ನಿಲೆ-ಬಲೆ ಎಂಬ ಹೆಸರಿನ 19ನೇ ತುಳು ಸಾಹಿತ್ಯ ಸಮ್ಮೇಳನದಲ್ಲಿ ತುಳು ಬದ್ಕ್‌ದ ಉಲತಿರ್‍ಲ್ ಎಂಬ ವಿಚಾರಗೋಷ್ಠಿ ನಡೆಯಿತು.
ಸಾಧ್ವಿ ಶ್ರೀ ಮಾತಾನಂದಮಯೀ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಸಮ್ಮೇಳನಾಧ್ಯಕ್ಷೆ ಬೆಂಗಳೂರು ಸಾಹಿತಿ, ಸಂಶೋಧಕಿ ಡಾ.ಇಂದಿರಾ ಹೆಗ್ಡೆ, ಸಂಚಾಲಕ ಡಾ.ವಸಂತ ಕುಮಾರ್ ಪೆರ್ಲ ಉಪಸ್ಥಿತರಿದ್ದರು.
ಮಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಸುರೇಂದ್ರ ರಾವ್ ಅಧ್ಯಕ್ಷತೆ ವಹಿಸಿ, ಮಾತನಾಡಿ, ಬುದ್ಧಿವಂತರ ಜಿಲ್ಲೆ ಎಂಬ ಹೆಗ್ಗಳಿಕೆಯ ತುಳುನಾಡಲ್ಲಿ ತುಳು ಭಾಷೆಯ ಅವಗಣನೆಗೆ ಭಾಷಿಗರೇ ಕಾರಣ ಹೊರತು ಇಂಗ್ಲೀಷ್ ಭಾಷೆಯ ಪ್ರಭಾವ ಕಾರಣವಲ್ಲ. ತುಳುವರ ಸಂಖ್ಯೆ ದೊಡ್ಡದಲ್ಲ. ತುಳು-ಕನ್ನಡ ಭಾಷೆಗಳ ನಡುವೆ ಉತ್ತಮ ಹೊಂದಾಣಿಕೆಯಿದೆ. ಇಂಗ್ಲಿಷ್ ಭಾಷೆಯಿಂದ ತುಳು ಮೂಲೆಗುಂಪಾಗಿಲ್ಲ. ಕಳೆದ ಕೆಲ ವರ್ಷಗಳಿಂದ ಪುಸ್ತಕಗಳು ಹೊರಬಂದಿವೆ. ಅವುಗಳನ್ನು ಓದುವವರ ಸಂಖ್ಯೆ ಹೆಚ್ಚಾಗಬೇಕಾಗಿದೆ ಎಂದರು.
ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ಸಂಶೋಧಕ ಡಾ.ಎಸ್.ಆರ್.ವಿಘ್ನರಾಜ್ ಅವರು ತುಳು ಭಾಷೆ ಸಂಶೋಧನೆ ಬಗ್ಗೆ ಮಾತನಾಡಿ, ತುಳು ಭಾಷೆಗೆ ಪ್ರಾಚೀನ ಇತಿಹಾಸವಿದೆ. ತುಳುವಿನಲ್ಲಿ ೧೫ ಸಾವಿರ ಗ್ರಂಥಗಳಿವೆ. ೯ನೇ ಶತಮಾನದಲ್ಲಿಯೇ ತುಳು ಭಾಷೆಯ ಲಿಪಿಯನ್ನು ಗುರುತಿಸಲಾಗಿದೆ. ತುಳು ಭಾಗವತ ಪ್ರಥಮ ಶಿಷ್ಟ ಸಾಹಿತ್ಯವಾಗಿ ಗುರುತಿಸಲ್ಪಟ್ಟಿದೆ. ವಿದೇಶದಲ್ಲಿ 1 ಲಕ್ಷ ತುಳು ಗ್ರಂಥಗಳ ಸಂಗ್ರಹವಿರುವುದು ತುಳು ಭಾಷಾ ಸಮೃದ್ಧತೆಗೆ ಸಾಕ್ಷಿಯಾಗಿದೆ. ತುಳು ಗ್ರಂಥಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮದಾಗಬೇಕು ಎಂದರು.
ಸುಳ್ಯದ ಸಾಹಿತಿ ಡಾ.ಸುಂದರ ಕೇನಾಜೆ ತುಳು ಸಾಹಿತ್ಯದ ಬಗ್ಗೆ ಮಾತನಾಡಿ, ತುಳು ಭಾಷೆಗೆ ರಾಜಾಶ್ರಯವಿರಲಿಲ್ಲ. ಬಾಸೆಲ್ ಮಿಷನ್ ಮತ್ತು ಬ್ರಿಟಿಷರ ಜನಪದ ಸಾಹಿತ್ಯ ಅಧ್ಯಯನ ತುಳು ಶಿಷ್ಟ ಸಾಹಿತ್ಯಕ್ಕೆ ಬಲು ದೊಡ್ಡ ಕೊಡುಗೆಯಾಗಿದೆ. ಸಂಕಯ್ಯ ಭಾಗವತರು ಪ್ರಥಮವಾಗಿ ತುಳು ಕೃತಿಯನ್ನು ಪ್ರಕಟಿಸಿದರು. ಚರಿತ್ರೆ, ಕವಿತೆ, ನಾಟಕ, ಸಾಹಿತ್ಯದಿಂದ ತುಳು ಭಾಷೆಗೆ ಮಹತ್ವ ಸಿಕ್ಕಿದೆ. ತುಳು ಪ್ರವಾಸ ಸಾಹಿತ್ಯ ಕಡಿಮೆ. ಜೀವನಚರಿತ್ರೆ ವಿಭಾಗದಲ್ಲಿ ಅನೇಕ ಕೃತಿಗಳು ಬಂದಿವೆ. ಸಾಂಪ್ರದಾಯಿಕ ದಾಖಲೆಗಳಿದ್ದರೂ ಅದರ ಅಧ್ಯಯನವಾಗಬೇಕು ಎಂದರು.
ಕುಂಬಳೆ ಪತ್ರಕರ್ತ ಎಂ.ನಾ.ಚಂಬಲ್ತಿಮಾರ್ ಅವರು ವ್ಯಾಪಾರ ಮತ್ತು ವಾಣಿಜ್ಯ ಎಂಬ ವಿಷಯದಲ್ಲಿ ಮಾತನಾಡಿ, ಹಿಂದೆ ತುಳುನಾಡಿನಲ್ಲಿ ಗುಣಮಟ್ಟದ ಕೃಷ್ಯುತ್ಪನ್ನಗಗಳಿದ್ದವು. ತುಳುವರು ಸಾಧನಾಶೀಲರಾಗಿ ಪರಊರಿನಲ್ಲಿ ಬೇರೆ ಬೇರೆ ಉದ್ಯಮಗಳನ್ನು ಆರಂಭಿಸಿದರು. ಅನೇಕ ಸಾಹಸಗಳನ್ನು ಪ್ರದರ್ಶಿಸಿದರು. ದೇಶ ವಿದೇಶಗಳಲ್ಲಿ ಇಂತಹ ಚರಿತ್ರೆಯಿದೆ ಎಂದು ಹೇಳಿದರು.
ಶ್ರೀ ಗುರುದೇವಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಯಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಯಶವಂತ ವಿಟ್ಲ ಕಾರ್‍ಯಕ್ರಮ ನಿರೂಪಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಉಡುಪಿ ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ವಂದಿಸಿದರು.

More articles

Latest article