ಕಲ್ಲಡ್ಕ: ಜಗತ್ತಿನ ಹಿಂದುಯೇತರ ಮತ ಪಂಥಗಳು ಉದಾರತೆಯನ್ನು ಒಪ್ಪಿಕೊಂಡವುಗಳಲ್ಲ. ಒಂದು ಪ್ರವಾದಿ, ಒಬ್ಬ ದೇವರು ಅವರು ಹೇಳಿದ್ದೇ ಸತ್ಯ ಎಂಬ ವಿಚಾರಗಳಿಂದ ಹೊರಬಂದು ಎಲ್ಲರೂ ಸುಖಿಗಳಾಗಿರಲಿ, ವಿಶ್ವವೇ ಶಾಂತಿಯುತವಾಗಿ ಬಾಳಲಿ. ಅದಕ್ಕಾಗಿ ಯಾವುದೇ ಮಾರ್ಗಗಳನ್ನಾದರೂ ಅನುಸರಿಸಬಹುದು ಎಂಬ ಉದಾರವಾದಿಗಳು ಭಾರತೀಯರು. ಈ ಕಾರಣಕ್ಕೆ ನಾವು ಜಗತ್ತನ್ನು ಗೆದ್ದೆವು. ಜಗತ್ತನ್ನು ಗೆಲ್ಲುವುದೆಂದರೆ ಕೇವಲ ವಾಣಿಜ್ಯ ವ್ಯವಹಾರಗಳ, ಆರ್ಥಿಕತೆಯ ಮೇಲೆ ಹಾಗೂ ರಾಜಕೀಯವಾಗಿ ಹತೋಟಿಯನ್ನು ಹೊರತುಪಡಿಸಿ ಈ ಚಿಂತನೆಯ ದಾರಿಯಲ್ಲಿ ನಡೆದ ನಮ್ಮ ಹಿರಿಯರು ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳನ್ನು ಮುಟ್ಟಿದರು, ತಟ್ಟಿದರು ಎಂದು ಪ್ರಜ್ಞಾಪ್ರವಾಹ ಇದರ ಸಂಯೋಜಕ  ರಘನಂದನ್ ನುಡಿದರು.


ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಪದವಿ ಕಾಲೇಜಿನ ವಿಚಾರಸಂಕಿರಣದ ಸಮಾರೋಪ ಭಾಷಣ ಮಾಡುತ್ತಾ ಹೀಗೆಂದರು. ಭಾರತೀಯರ ವಿಶ್ವಸಂಚಾರ ಎಲ್ಲರಿಗೂ ಒಳ್ಳೆಯದನ್ನೇ ಮಾಡಿದೆ. ಯೋಗಾಸನ, ಪ್ರಾಣಾಯಾಮ, ಸಂಸ್ಕೃತಿ, ಕಲೆ, ಸಂಗೀತ, ಜೋತಿಷ್ಯ, ಆಯುರ್ವೇದ ಮುಂತಾದ ಎಲ್ಲಾ ಸಂಗತಿಗಳನ್ನು ಇಡೀ ಜಗತ್ತಿಗೆ ಪಸರಿಸಿದ ಹೆಮ್ಮೆ ಭಾರತೀಯರದು. ಯಾವ ರಾಷ್ಟ್ರ ಜಗತ್ತಿಗೆ ಮಂಗಳವನ್ನು ಬಯಸಿತೊ ಆ ರಾಷ್ಟ್ರದಲ್ಲಿರುವ ಶಸ್ತ್ರ ವಿಶ್ವಮಂಗಲದ ಉದ್ದೇಶಕ್ಕಾಗಿಯೆ ಹೊರತು ಅದೆಂದಿಗೂ ವಿಶ್ವವಿನಾಶದೆಡೆಗೆ ಸಾಗಲಾರದು. ಇಂತಹ ಪರಂಪರೆಯ ವಾರಸುದಾರರು ನಾವು ಎಂಬುದನ್ನು ನೆನಪಿನಲ್ಲಿಟ್ಟು ವ್ಯವಹರಿಸೋಣ ಎಂದರು.
ವೇದಿಕೆಯಲ್ಲಿ ಶತಾವಧಾನಿ ಡಾ| ಆರ್ ಗಣೇಶ್, ಮಹಾರಾಷ್ಟ್ರದ ಔರಂಗಬಾದ್ ವಿಶ್ವವಿದ್ಯಾನಿಲಯದ ಡಾ| ಶರದ್ ಹೆಬ್ಬಾಳ್ಕರ್, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಹಾಗೂ ಕ್ಯಾ. ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ 35 ಕಾಲೇಜುಗಳಿಂದ 152 ವಿದ್ಯಾರ್ಥಿಗಳು, 46 ಉಪನ್ಯಾಸಕರು, ಅಲ್ಲದೇ ತುಮಕೂರು, ಬೆಂಗಳೂರು, ರಾಣಿಚೆನ್ನಮ್ಮ, ಮೈಸೂರು, ಶಿವಮೊಗ್ಗ, ಗುಲ್ಬರ್ಗ, ಕರ್ನಾಟಕ ವಿಶ್ವವಿದ್ಯಾನಿಲಯ ಈ ರೀತಿ ಇತರೇ 13 ವಿಶ್ವವಿದ್ಯಾನಿಲಯಗಳ 53 ವಿದ್ಯಾರ್ಥಿಗಳು, 14 ಉಪನ್ಯಾಸಕರು ಅಲ್ಲದೇ 39 ಪ್ರತಿನಿಧಿಗಳು ಹಾಗೂ ಶ್ರೀರಾಮ ವಿದ್ಯಾಸಂಸ್ಥೆಯ 135 ಉಪನ್ಯಾಸಕರು, 260 ವಿದ್ಯಾರ್ಥಿಗಳನ್ನೊಳಗೊಂಡು ಒಟ್ಟು 847 ಮಂದಿ ಭಾಗವಹಿಸಿದ್ದಾರೆ.
ವಿವಿಧ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಮುಕ್ತಚಿಂತನ-ಪ್ರಶ್ನೋತ್ತರದಲ್ಲಿ ಒಟ್ಟು ಕಾರ್ಯಕ್ರಮದ ಅನುಭವವನ್ನು ಹಂಚಿಕೊಂಡರು.
ಪ್ರಥಮ ವರ್ಷದ ವಾಣಿಜ್ಯ ವಿದ್ಯಾರ್ಥಿನಿ ತೇಜಸ್ವಿನಿ ಪ್ರೇರಣಾ ಗೀತೆ ಹಾಡಿದರು.
ಅತಿಥಿಗಳನ್ನು ರಸಾಯನಶಾಸ್ತ್ರ ಉಪನ್ಯಾಸಕಿ ಕವಿತಾ ಸ್ವಾಗತಿಸಿ, ಪದವಿ ಪ್ರಾಚಾರ್ಯ ಕೃಷ್ಣಪ್ರಸಾದ ಕಾಯರ್‌ಕಟ್ಟೆ ವಂದಿಸಿ, ವಾಣಿಜ್ಯ ಉಪನ್ಯಾಸಕಿ ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here