ಉಜಿರೆ: ಪೂಜ್ಯ ನಿಸ್ಪೃಹ ಸಾಗರ ಮುನಿಮಹಾರಾಜರು (75) ಮಂಗಳವಾರ ಮುಂಜಾನೆ ಏಳು ಗಂಟೆಗೆ ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಬಳಿ ಮುನಿಗಳು ವಾಸ್ತವ್ಯ ಇರುವ ಕುಟೀರದಲ್ಲಿ ಸಮಾಧಿ ಮರಣ ಹೊಂದಿದರು. ಇದೇ 18 ರಂದು ಸೋಮವಾರ ಅವರು ಸಲ್ಲೇಖನ ವ್ರತ ಧಾರಣೆ ಮಾಡಿದ್ದರು. ಆಮರಣಾಂತ ಉಪವಾಸ ಕೈಗೊಳ್ಳುವುದಕ್ಕೆ ಸಲ್ಲೇಖನ ವ್ರತ ಎನ್ನುತ್ತಾರೆ.
ಜೈನ ಸಂಪ್ರದಾಯದಂತೆ ಮರಣವೇ ಮಹಾನವಮಿ ಎಂದು ಭಾವಿಸಿ ಸಾವನ್ನು ಕೂಡಾ ಮಹೋತ್ಸವ ಆಗಿ ಆಚರಿಸಿ ಸಂಭ್ರಮಿಸುತ್ತಾರೆ. ಏಕೆಂದರೆ ಸಾವು ದೇಹಕ್ಕೆ ಮಾತ್ರ. ಆತ್ಮನಿಗೆ ಸಾವಿಲ್ಲ. ದೇಹ ನಶ್ವರ, ಆತ್ಮ ಶಾಶ್ವತ.
ಪರಿಚಯ: ನಿಸ್ಪೃಹ ಸಾಗರ ಮುನಿ ಮಹಾರಾಜರು ಮೂಲತಃ ರಾಜಸ್ಥಾನದ ಕಿಶನ್‌ಗಡ್ ನಿವಾಸಿ. ಎಸ್.ಎಸ್.ಎಲ್.ಸಿ. ತನಕ ಶಿಕ್ಷಣವನ್ನು ಹುಟ್ಟೂರಲ್ಲಿಯೇ ಪಡೆದಿದ್ದರು. ಬಾಲ್ಯದಿಂದಲೆ ಅವರಿಗೆ ತಪಸ್ಸು, ಧ್ಯಾನ, ಧರ್ಮ, ಅಹಿಂಸೆ, ಸ್ವಾಧ್ಯಾಯದಲ್ಲಿ ವಿಶೇಷ ಆಸಕ್ತಿ, ಅಭಿರುಚಿ. ಅವರ ಪೂರ್ವಾಶ್ರಮದ ಹೆಸರು ಪ್ರೇಮಚಂದ್ ಪಹಾಡಿಯಾ.
2009 ರಲ್ಲಿ ಜೈನರ ಪವಿತ್ರ ತೀರ್ಥಕ್ಷೇತ್ರ ಚಂಪಾಪುರಿಯಲ್ಲಿ ಆಚಾರ್ಯ ಶ್ರೀ ವರ್ಧಮಾನ ಸಾಗರ ಮುನಿ ಮಹಾರಾಜರಿಂದ ಅವರು ಮುನಿ ದೀಕ್ಷೆ ಪಡೆದಿದ್ದರು. ಬಳಿಕ ಅವರ ಮುನಿ ಸಂಘದಲ್ಲಿದ್ದರು.
ಧರ್ಮಸ್ಥಳದಲ್ಲಿ ಫೆ. 9 ರಿಂದ 18 ರ ವರೆಗೆ ನಡೆದ ಭಗವಾನ್ ಬಾಹುಬಲಿ ಮಹಾ ಮಸ್ತಕಾಭಿಷೇಕದಲ್ಲಿ ಪಾವನ ಸಾನ್ನಿಧ್ಯ ನೀಡಲು ಪೂಜ್ಯ ಶ್ರೀ ೧೦೮ ವರ್ಧಮಾನ ಸಾಗರ ಮುನಿಮಹಾರಾಜರ ಸಂಘದಲ್ಲಿ ಪೂಜ್ಯ ನಿಸ್ಪೃಹ ಸಾಗರ ಮುನಿ ಮಹಾರಾಜರು ಕೂಡಾ ಫೆ. 3 ರಂದು ಧರ್ಮಸ್ಥಳ ಪುರ ಪ್ರವೇಶ ಮಾಡಿದ್ದರು.
ಫೆ. 16, 17 ಮತ್ತು 18 ರಂದು ನಡೆದ ಬಾಹುಬಲಿ ಮಸ್ತಕಾಭಿಷೇಕವನ್ನು ಕೂಡಾ ವೀಕ್ಷಿಸಿದ್ದರು. ಧರ್ಮಸ್ಥಳದಲ್ಲಿ ಬಸದಿ ಬಳಿ ಇರುವ ಕುಟೀರದಲ್ಲಿ ಮುನಿ ಸಂಘದೊಂದಿಗೆ ಅವರು ಜಪ, ತಪ, ಧ್ಯಾನ, ಸ್ವಾಧ್ಯಾಯದಲ್ಲಿ ನಿರತರಾಗಿದ್ದರು.
ಸೋಮವಾರ ಸಂಜೆ ಸಲ್ಲೇಖನ ವ್ರತಧಾರಣೆ ಮಾಡಿ ಮಂಗಳವಾರ ಮುಜಾನೆ ಏಳು ಗಂಟೆಗೆ ಸಮಾಧಿ ಮರಣ ಹೊಂದಿದರು.
ತ್ಯಾಗಿಗಳ ಉಪವಾಸ: ಮುನಿ ಸಂಘದವರೆಲ್ಲರೂ ಹಾಗೂ ಮಾತಾಜಿಯವರು ಕೂಡಾ ಮಂಗಳವಾರ ಉಪವಾಸ ವ್ರತ ಆಚರಿಸಿದರು. ಜಪ, ತಪ, ಧ್ಯಾನದಲ್ಲಿ ನಿರತರಾದರು.
ಸೋಮವಾರ ಚತುರ್ದಶಿ ನಿಮಿತ್ತ ಹೆಚ್ಚಿನವರು ಉಪವಾಸ ವ್ರತ ಮಾಡಿದ್ದರು. ಹಾಗಾಗಿ ಕೆಲವರು ಸತತ ಎರಡು ದಿನ ಉಪವಾಸ ವ್ರತ ಮಾಡಿದರು.

ಅಂತ್ಯ ಸಂಸ್ಕಾರ: ಪೂಜ್ಯ ಶ್ರೀ 108 ಆಚಾರ್ಯ ಶ್ರೀ ವರ್ಧಮಾನ ಸಾಗರ ಮುನಿ ಮಹಾರಾಜರು ಮತ್ತು ಪೂಜ್ಯ ಶ್ರೀ 108 ಪುಷ್ಪದಂತ ಸಾಗರ ಮುನಿ ಮಹಾರಾಜರ ನೇತೃತ್ವದಲ್ಲಿ ಬಸದಿಯ ಬಳಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಹಾಗೂ ಡಾ. ಬಿ. ಯಶೋವರ್ಮ ಅಂತಿಮ ಗೌರವ ಸಲ್ಲಿಸಿದರು.
ಸಕಲ ವೈಭವದ ಮೆರವಣಿಗೆಯೊಂದಿಗೆ ಪಂಚನಮಸ್ಕಾರ ಮಂತ್ರ ಪಠಣ ಮಾಡುತ್ತಾ, ಕುಟೀರದಿಂದ ಅಲಂಕೃತ ಆಸನದಲ್ಲಿ ಕೊಂಡು ಹೋಗಿ ಬಸದಿಯ ಬಳಿ ಇರುವ ಜಾಗದಲ್ಲಿ ತ್ರಿಕೋನಾಕಾರದಲ್ಲಿ ಚಿತೆಯನ್ನು ರೂಪಿಸಿ, ದೇಹವನ್ನು ಪದ್ಮಾಸನದಲ್ಲಿ ಕುಳ್ಳಿರಿಸಿ, ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.
ಮುನಿಗಳು ಮೃತ ದೇಹಕ್ಕೆ ನೀರು, ಹಾಲು, ತುಪ್ಪ ಮತ್ತು ಸಕ್ಕರೆಯ ಸೇಚನದೊಂದಿಗೆ ಅಭಿಷೇಕ ಮಾಡಿದರು.
ಎಲ್ಲಾ ಮುನಿಗಳು ಮತ್ತು ಮಾತಾಜಿಯವರು ಪಂಚ ನಮಸ್ಕಾರ ಮಂತ್ರ ಪಠಣದೊಂದಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದರು.
ನಿಸ್ಪೃಹ ಸಾಗರ ಮುನಿ ಮಹಾರಾಜರ ಪೂರ್ವಾಶ್ರಮದ ಮಕ್ಕಳಾದ ಸಂಜಯಕುಮಾರ್ ಮತ್ತು ಪುನೀತ್ ಕುಮಾರ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಚಿತೆಗೆ ಗಂಧ ಮತ್ತು ಚಂದನದ ಕೊರಡುಗಳನ್ನು ಬಳಸಿ ಮೇಲೆ ತುಪ್ಪ ಸುರಿಯಲಾಯಿತು.
ಚಿತೆಯ ಸನಿಹದಲ್ಲಿ ಮುನಿ ಸಂಘದವರು ಮತ್ತು ಮಾತಾಜಿಯವರು ಸಾಮೂಹಿಕ ಪ್ರತಿಕ್ರಮಣ ಮಾಡಿದರು. (ಪ್ರಾಯಶ್ಚಿತ್ತ ಮಾಡಿಕೊಳ್ಳುವುದಕ್ಕೆ ಪ್ರತಿ ಕ್ರಮಣ ಎನ್ನುತ್ತಾರೆ. ಮುನಿಗಳು ಪ್ರತಿ ದಿನ ಮೂರು ಬಾರಿ ಪ್ರತಿಕ್ರಮಣ ಮಾಡುತ್ತಾರೆ.)

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here