


ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಅರ್ಥಮಾಡಿಕೊಂಡು ತಾವು ತಮ್ಮ ಜೀವನದಲ್ಲಿ ಸ್ವಚ್ಛತೆಯನ್ನು ಪಾಲಿಸುವುದಲ್ಲದೆ ಇತರರಲ್ಲಿಯೂ ಜಾಗೃತಿಯನ್ನು ಮೂಡಿಸಬೇಕು. ಕಾಯೇನ ವಾಚಾ ಮನಸಾ ಯುವಜನತೆ ಸ್ವಚ್ಛಭಾರತ ಅಭಿಯಾನದಲ್ಲಿ ಪಾಲ್ಗೊಂಡರೆ ಭಾರತ ಸ್ವಸ್ಥ, ಸ್ವಚ್ಛ ಸುಂದರ ದೇಶವಾಗುವುದು ಕಷ್ಟವಲ್ಲ ಎಂಬುದಾಗಿ ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಬೆಲ್ಲಳ ಶ್ರೀ ಗೋಪಿನಾಥ ರಾವ್ ವಿದ್ಯಾರ್ಥಿಗಳಿಗೆ ಕರೆನೀಡಿದರು. ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನಲ್ಲಿ ಮಂಗಳೂರಿನ ರಾಮಕೃಷ್ಣ ಮಿಶನ್ ಮತ್ತು ವಿವೇಕಾನಂದ ಬಳಗದ ಸಹಯೋಗದಲ್ಲಿ ನಡೆದ ಸ್ವಚ್ಛ್ ಸೋಚ್ ಎಂಬ ವಿಚಾರ ಸಂಕಿರಣದಲ್ಲಿ ಉದ್ಘಾಟನಾ ಸಮಾರಂಭದ ದಿಕ್ಸೂಚಿ ಭಾಷಣದಲ್ಲಿ ಅವರು ಈ ವಿಷಯವನ್ನು ತಿಳಿಸಿದರು. ಎರಡು ಗೋಷ್ಠಿಗಳಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮೊದಲಿಗೆ ಪ್ರಾಣಿಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಭಾರತಿ ಭಟ್ ’ಸ್ವಚ್ಛ ಭಾರತದ ಕಡೆ ಒಂದು ನಡೆ’ ಎಂಬ ವಿಚಾರವನ್ನು ಮಂಡಿಸಿದರು. ಸ್ವಚ್ಛತೆಯ ಅಭಿಯಾನ ಪ್ರತಿಯೊಬ್ಬರ ಮನೆಯಿಂದಲೇ ಆರಂಭವಾಗಬೇಕು, ಮುಂದೆ ಇಡೀ ಸಮಾಜ ಮತ್ತು ದೇಶವನ್ನು ಸ್ವಚ್ಛತೆಯಡೆಗೆ ಕೊಂಡೊಯ್ಯವುದು ಸುಲಭ ಎಂಬುದಾಗಿ ಅವರು ನುಡಿದರು. ಎರಡನೆಯ ಗೋಷ್ಠಿಯಲ್ಲಿ ಮಂಗಳೂರಿನ ರಾಮಕೃಷ್ಣ ಮಿಶನ್ ಇಲ್ಲಿನ ಸ್ವಚ್ಛ್ ಸೋಚ್ ವಿಚಾರ ಸಂಕಿರಣದ ಮುಖ್ಯ ಸಂಯೋಜಕರಾದ ರಂಜನ್ ಬೆಲ್ಲರ್ಪಾಡಿ ಇವರು ’ನಮ್ಮ ಕಸ ನಮ್ಮ ಹೊಣೆ’ ಎಂಬ ಉಕ್ತಿಯಡಿಯಲ್ಲಿ ಕಸವನ್ನು ಸುಲಭವಾಗಿ ಹೇಗೆ ವಿಲೇವಾರಿ ಮಾಡಬಹುದು ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ವಹಿಸಿದ್ದರು. ವಿಚಾರ ಸಂಕಿರಣದ ಸಂಯೋಜಕ ಡಾ| ರಮಾನಂದ ಭಟ್ ಸ್ವಾಗತಿಸಿದರು. ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಪೂರ್ಣಿಮಾ ವಂದನಾರ್ಪಣೆ ಗೈದರು ವಾಣಿಜ್ಯಶಾಸ್ತ್ರ ಉಪನ್ಯಾಸಕ ವೆಂಕಟೇಶ್ ಭಟ್ ಸ್ವಚ್ಛತೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿನಿ ಕೃತಿ ಕಾರ್ಯಕ್ರಮ ನಿರೂಪಿಸಿದರು.


