Sunday, October 22, 2023

ಸ್ಕೌಟ್ಸ್, ಗೈಡ್ಸ್ ಸಂಸ್ಥೆಗಳ ಕಾರ್ಯ ಶ್ಲಾಘನೀಯ: ಡಾ. ಮಾರ್ಕ್ ಕ್ಯಾಸ್ತೆಲಿನೊ

Must read

ಬಂಟ್ವಾಳ: ಗ್ರಾಮೀಣ ಪ್ರದೇಶದಲ್ಲಿ ಜನ ಜಾಗೃತಿ ಮೂಡಿಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗಳ ಸೇವಾ ಕಾರ್ಯ ಶ್ಘಾಘನೀಯ ಎಂದು ಅಮ್ಟೂರು ಚರ್ಚ್ ಧರ್ಮಗುರು ರೆ.ಫಾ.ಡಾ. ಮಾರ್ಕ್ ಕ್ಯಾಸ್ತೆಲಿನೊ ಅವರು ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಪಾಣೆಮಂಗಳೂರು ವತಿಯಿಂದ ಪಾಣೆಮಂಗಳೂರು ಸುಮಂಗಲ ಕಲ್ಯಾಣ ಮಂಟಪದಲ್ಲಿ ನಡೆದ ಸ್ಥಳೀಯ ಸಂಸ್ಥೆಯ ವಾರ್ಷಿಕ ರ್‍ಯಾಲಿ ಉತ್ಸವ-2018-19 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವ ಪೀಳಿಗೆಯಲ್ಲಿ ರಾಷ್ಟ್ರ ಭಕ್ತಿ ಮೂಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಗಳ ಸೇವಾ ಕಾರ್ಯವನ್ನು ಪ್ರೋತ್ಸಾಹಿಸುವ ಕೆಲಸ ನಡೆಯಬೇಕಿದೆ ಎಂದರು.
ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲೆಯ ಅಧ್ಯಕ್ಷ ಎನ್.ಶ್ರೀನಿವಾಸ ಕುಡ್ವ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ತಾ.ಪಂ. ಸದಸ್ಯೆ  ಚಂದ್ರಾವತಿ ನಾಯ್ಕ, ಬಜಾರು ಸಮೂಹ ಸಂಸ್ಥೆಗಳ ಮುಖ್ಯಸ್ಥ ಎಸ್.ಎಂ.ಗೋಪಾಲಕೃಷ್ಣ ಆಚಾರ್ಯ ಮಾರ್ನಬೈಲು, ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ, ಶಿಕ್ಷಣ ಸಮನ್ವಯ ಅಧಿಕಾರಿ ರಾಧಾಕೃಷ್ಣ ಭಟ್.ಕೆ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಶ್ರೀಮತಿ ರತ್ನಾವತಿ ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ:
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರುಗಳಾದ ರಾಯಪ್ಪಕೋಡಿ ಕೆ.ಕೃಷ್ಣ ಕಾರಂತ ಅಮ್ಟೂರು, ಕೆ.ಎನ್.ಗಂಗಾಧರ್ ಆಳ್ವ ತುಂಬೆ, ಪಿ.ಪಾಂಡುರಂಗ ಪ್ರಭು, ಬಿ.ರಾಮಚಂದ್ರ ರಾವ್, ಡಾ.ಎಂ.ಎಂ.ಶರೀಫ್, ಕೆ.ಕೃಷ್ಣ ಕುಮಾರ್ ಪೂಂಜ, ಕಲ್ಯಾರು ಪದ್ಮನಾಭ ಭಂಡಾರಿ ನರಿಕೊಂಬು, ಡಿ.ಎ.ರಹ್ಮಾನ್ ಪಟೇಲ್ ಬಿ.ಸಿ.ರೋಡ್, ಯಮುನಾ ಅಕ್ಕ ನರಿಕೊಂಬು, ದಾಮೋದರ ಎ.ಸಂಚಯಗಿರಿ, ನಾರಾಯಣ ಸಪಲ್ಯ ನರಿಕೊಂಬು, ಕೃಷ್ಣ ನಾಯ್ಕ ಕೊಪ್ಪಳಕೋಡಿ ನರಿಕೊಂಬು, ಬಿ.ಎಚ್.ಉದಯ ಪೈ ಮೆಲ್ಕಾರ್, ಸುರೇಶ್ ಜಿ, ಶಿವಪ್ಪ ನಾಯ್ಕ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಸ್ಥಳೀಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ. ಜಯಂತ ನಾಯಕ್ ಸ್ವಾಗತಿಸಿ, ಜತೆ ಕಾರ್ಯದರ್ಶಿ  ಸುಧಾ ವಂದಿಸಿದರು. ಸ್ಕೌಟರ್ ರಾಜೇಂದ್ರ ಗೌಡ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷೆ ವಸಂತಿ ಗಂಗಾಧರ ಬೋಳಂಗಡಿ, ಸ್ಕೌಟರ್‌ಗಳಾದ ನೂರುದ್ದೀನ್ ಜಿ.ಎಂ., ಸುರೇಶ್ ಜೆ, ಪ್ರೇಮಚಂದ್ರ ಸಹಕರಿಸಿದರು.

More articles

Latest article