ಬಂಟ್ವಾಳ: ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಅವರ ಹತ್ಯೆಯನ್ನು ಅಣುಕು ಪ್ರದರ್ಶನ ಮಾಡಿರುವ ಹಿಂದೂ ಸಭಾದ ಕಾರ್ಯಕರ್ತರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಹಾಗೂ ಗೋಡ್ಸೆಯ ಮರುಜನ್ಮ ಅನುಮತಿಸಲಾರೆವು ಎಂಬ ಘೋಷಣೆಯೊಂದಿಗೆ ಎಸ್ಡಿಪಿಐ ಬಂಟ್ವಾಳ ಕ್ಷೇತ್ರದ ವತಿಯಿಂದ ಬಿ.ಸಿ.ರೋಡ್ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಧರಣಿ ನಡೆಯಿತು.
ಎಸ್ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹುಲ್ ಎಸ್.ಎಚ್. ಮಾತನಾಡಿ, ಜಗತ್ತು ಕಂಡ ಅಹಿಂಸಾತ್ಮಕ ಹೋರಾಟಗಾರ ಮಹಾತ್ಮ ಗಾಂಧೀಜಿ ಅವರನ್ನು ನಾಥುರಾಮ್ ಗೋಡ್ಸೆ ಎಂಬ ಕಿರಾತಕ ಹತ್ಯೆ ಮಾಡಿದ್ದು, ಇದೊಂದು ದೇಶದಲ್ಲಿ ನಡೆದ ಮೊದಲ ಭಯೋತ್ಪಾದನಾ ಕೃತ್ಯವಾಗಿದೆ. ಈ ಕೃತ್ಯವನ್ನು ಖಂಡಿಸಿ ದೇಶದಲ್ಲಿ ಕರಾಳ ದಿನ ಹಾಗೂ ಹುತಾತ್ಮರ ದಿನಾಚರಣೆಯನ್ನು ಆಚರಿಸುತ್ತಿದ್ದರೆ, ಉತ್ತರ ಪ್ರದೇಶದಲ್ಲಿ ಹಿಂದೂ ಸಭಾದ ಕಾರ್ಯಕರ್ತರು ಗಾಂಧಿ ಹತ್ಯೆಯನ್ನು ಬೆಂಬಲಿಸಿ ಮತ್ತೊಮ್ಮೆ ಗಾಂಧೀಜಿ ಅವರ ಪ್ರತಿಕೃತಿಗೆ ಗುಂಡುಹಾರಿಸಿ ಹತ್ಯೆಯ ಅಣುಕು ಪ್ರದರ್ಶನ ಮಾಡುವ ಮೂಲಕ ವಿಕೃತ ಮೆರೆದಿದ್ದಾರೆ. ಇದನ್ನು ಎಸ್ಡಿಪಿಐ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಎಸ್ಡಿಪಿಐ ಬಂಟ್ವಾಳ ಕ್ಷೇತ್ರದ ಉಪಾಧ್ಯಕ್ಷ ಖಲಂದರ್ ಪರ್ತಿಪ್ಪಾಡಿ ಮಾತನಾಡಿ, ಇದೊಂದು ದೇಶದ್ರೋಹ ಕೃತ್ಯವಾಗಿದ್ದು, ಹಿಂದೂ ಸಭಾದ ಕಾರ್ಯಕರ್ತರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಘಟನೆಗಳು ಇನ್ನು ಮುಂದೆ ಮರುಕಳಿಸಿದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಸರಕಾವನ್ನು ಒತ್ತಾಯಿಸಿದರು.
ಎಸ್ಡಿಪಿಐ ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕ ಧರಣಿ ನೇತೃತ್ವ ವಹಿಸಿ ಮಾತನಾಡಿ, ಇಂತಹ ವಿಕೃತ ಮನಸ್ಥಿತಿಗಳು ನಮ್ಮ ದೇಶದಲ್ಲಿರುವುದು ದುರದೃಷ್ಟಕರ ಎಂದರು.
ಬಳಿಕ ಬಂಟ್ವಾಳ ತಹಶೀಲ್ದಾರ್ ರಶ್ಮಿ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಮುನೀಶ್ ಅಲಿ, ಇದ್ರೀಸ್ ಪಿ.ಜೆ., ಕ್ಷೇತ್ರ ಕಾರ್ಯದರ್ಶಿ ಇಸ್ಮಾಯಿಲ್, ಇಸಾಕ್ ತಲಪಾಡಿ, ಇಕ್ಬಾಲ್ ಹಾಜರಿದ್ದರು. ಸಮಿತಿ ಸದಸ್ಯ ಮಲಿಕ್ ಕೊಳಕೆ ಸ್ವಾಗತಿಸಿ, ವಂದಿಸಿದರು.
