Friday, October 20, 2023

ಪೊಳಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ವಿವಿಧ ಇಲಾಖಾಧಿಕಾರಿಗಳ ಜೊತೆ ಪೂರ್ವಭಾವಿ ಸಭೆ

Must read

ಪೊಳಲಿ: ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ- ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ವಿವಿಧ ಇಲಾಖಾಧಿಕಾರಿಗಳ ಜೊತೆ ಶುಕ್ರವಾರ ಸಭೆ ನಡೆಯಿತು. ಈ ಸಭೆಯಲ್ಲಿ ಬಂಟ್ವಾಳ ಹಾಗೂ ಬಜಪೆ ಪೊಲೀಸ್ ನಿರೀಕ್ಷಕರು, ಮೆಸ್ಕಾಂ ಅಧಿಕಾರಿಗಳು, ಬಂಟ್ವಾಳ ತಾಹಶೀಲ್ದಾರ್, ಸಂಚಾರಿ ಪೊಲೀಸ್ ಅಧಿಕಾರಿಗಳು, ಆರೋಗ್ಯಾ ಇಲಾಖಾದಿಕಾರಿಗಳು, ಆಸುಪಾಸಿನ ವಿವಿಧ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ತಾ.ಪಂ.ಸದಸ್ಯರು ಸೇರಿ ಹಲವರು ಭಾಗವಹಿಸಿದ್ದು, ಅವರ ಜೊತೆಯಲ್ಲಿ ಚರ್ಚಿಸಲಾಯಿತು.
ಮಾ.3 ರಿಂದ ಮೊದಲ್ಗೊಂಡು ಮಾ.13 ರಂದು ಬ್ರಹ್ಮಕಲಶೋತ್ಸವ ನಡೆಯಲಿರುವುದರಿಂದ ಇದು ಯಾವುದೇ ರೀತಿಯ ಗೊಂದಲಗಳಿಗೆ ಆಸ್ಪದ ಕೊಡದಂತೆ ಸುಸೂತ್ರವಾಗಿ ನಡೆಯಬೇಕಿದ್ದು, ಇದಕ್ಕೆ ವಿವಿಧ ಇಲಾಖೆಯ ಅಧಿಕಾರಿಗಳು ಕೈಜೋಡಿಸಬೇಕೆಂದು ರಾಜೇಶ್ ನಾಯ್ಕ್ ಸೂಚಿಸಿದರು.


ಸಭೆಯಲ್ಲಿ ವಿವಿಧ ಮಾರ್ಗಸೂಚಿಗಳನ್ನು ತಿಳಿಸಿದ ರಾಜೇಶ್ ನಾಯ್ಕ್, ಪ್ರತಿದಿನ 200 ಮಂದಿ, ಹೆಚ್ಚುವರಿ 80 ಮಂದಿ ಸ್ವಯಂಸೇವಕರಾಗಿ ಸೇವೆಸಲ್ಲಿಸಲಿದ್ದಾರೆ. ಅಡ್ಡೂರಿನಿಂದ ನೋ ಪಾರ್ಕಿಂಗ್ ಬೋರ್ಡ್ ಅಳವಡಿಸಿ ಟ್ರಾಫಿಕ್ ಜಾಂ ಆಗದಂತೆ, ವಾಹನಗಳು ಅಡ್ಡಾದಿಡ್ಡಿ ನಿಲ್ಲದಂತೆ ನೋಡಿಕೊಳ್ಳಬೇಕು ಇನ್ಸ್‌ಪೆಕ್ಟರ್‌ಗಳಿಗೆ ಸೂಚಿಸಿದರು. ದೇವಸ್ಥಾನದ ಸಮೀಪ ಎರಡು ಕಡೆಗಳಲ್ಲಿ ತಲಾ ಒಂದೊಂದು ಎಕ್ರೆ ಜಾಗದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ನಡೆಯಲಾಗದ ಅಶಕ್ತರಿಗೆ ಪ್ರವೇಶದ್ವಾರದಿಂದ ದೇವಸ್ಥಾನದವರೆಗೆ ಸಣ್ಣ ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ದೇವಸ್ಥಾನದ ವತಿಯಿಂದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸಲಿದೆ. ತಮಿಳುನಾಡು ಹಾಗೂ ಆಂಧ್ರ ಕಡೆಗಳಿಂದ ಪಿಕ್‌ಪಾಕೆಟ್ ಕಳ್ಳರು ಆಗಮಿಸುವ ಸಾಧ್ಯತೆ ಇರುವುದರಿಂದ ಕೈತೊಳೆಯುವ ಕಡೆ ಸೇರಿ ಹೆಚ್ಚು ಜನರು ಸೇರುವಲ್ಲಿ ಸಿಸಿ ಕೆಮರಾ ಅಳವಡಿಸಬೇಕು. ಆಯಕಟ್ಟಿನ ಪ್ರದೇಶಗಳಲ್ಲಿ ಮೈಕ್ ವ್ಯವಸ್ಥೆ ಇದೆ. ದೇವಸ್ಥಾನದ ಸಮೀಪ ಕಾಲ್‌ಸೆಂಟರ್ ವ್ಯವಸ್ಥೆ ಇದ್ದು, ಇದು ಕಂಟ್ರೋಲ್ ರೂಂ ಆಗಿ ಕೆಲಸ ಮಾಡಲಿದೆ. ಯಾವುದೇ ಸಮಸ್ಯೆ ಇದ್ದರೆ ತನ್ನ ಜೊತೆ ಚರ್ಚಿಸಬಹುದು. ಹೆಚ್ಚು ಜನರು ಸೇರುವುದರಿಂದ ಮೊಬೈಲ್ ಟವರ್ ಅಳವಡಿಸಲು ದೂರವಾಣಿ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಸ್ವಯಂಸೇವಕರು, ಪೊಲೀಸರಿಗೆ ಸಂವಹನ ನಡೆಸಲು ವಾಕಿಟಾಕಿ ವ್ಯವಸ್ಥೆ ಮಾಡಲಾಗುವುದು ಎಂದರು.
ಮಾ.10ರಂದು ಬಿಜೆಪಿ ಮುಖಂಡ ಯಡಿಯೂರಪ್ಪ, ಮಾ.12ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸುವ ಸಾಧ್ಯತೆ ಇದ್ದು, ಹೆಚ್ಚಿನ ಮಂತ್ರಿಗಳು ಆಗಮಿಸಲಿದ್ದಾರೆ. ಜೊತೆಗೆ ಲಕ್ಷಕ್ಕೂ ಹೆಚ್ಚು ಮಂದಿ ಜನರ ಆಗಮನದ ನಿರೀಕ್ಷೆ ಇದೆ. ಇದರೊಂದಿಗೆ ನಾನಾ ಭಾಗಗಳಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ ಎಲ್ಲವೂ ಸುಸೂತ್ರವಾಗಿ ನಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರೂಟ್ ಬಸ್‌ಗಳಿಗೆ ಪ್ರಯಾಣಿಕರು ಹತ್ತುವ-ಇಳಿಯುವ ವ್ಯವಸ್ಥೆ ಮಾಡಲಾಗುವುದು. ಎಲ್ಲಿಯೂ ವಿದ್ಯುತ್ ವ್ಯತ್ಯಯ ಆಗದಂತೆ ಮೆಸ್ಕಾಂನ ಸ್ಪೆಷಲ್ ಟೀಮನ್ನು ನಿಯೋಜಿಸಬೇಕು. ಅಂಬ್ಯುಲೆನ್ಸ್ ವ್ಯವಸ್ಥೆಯೂ ಇರಬೇಕೆಂದು ಸೂಚಿಸಲಾಯಿತು. ಮಳಲಿಯಿಂದ ಫಲ್ಗುನಿ ನದಿ ಮುಖಾಂತರ ಪೊಳಲಿಗೆ ಬರುವ ಮಳಲಿಯ ಭಕ್ತರಿಗೆ ನದಿಯಲ್ಲಿ ಸುಮಾರು ೪೦೦ ಬೋಟ್ ಅಳವಡಿಸಿ ಸಂಚರಿಸಲು ವ್ಯವಸ್ಥೆ ಇದೆ. ಭಕ್ತರಿಗೆ ಬೆಳಿಗ್ಗೆ ನಾಷ್ಟ, ಮಧ್ಯಾಹ್ನ ಹಾಗೂ ರಾತ್ರಿ ಊಟೋಪಚಾರದ ವ್ಯವಸ್ಥೆ ಇದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಜವಾಬ್ದಾರಿಯನ್ನು ಆಳ್ವಾಸ್ ಅಧ್ಯಕ್ಷ ಮೋಹನ್ ಆಳ್ವಾ ವಹಿಸಿದ್ದು, ಮಂಗಳವಾದ್ಯ, ಭಜನೆ ಸೇರಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಎರಡು ಚಪ್ಪರಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜೇಶ್ ನಾಯ್ಕ್ ತಿಳಿಸಿದರು.
ಪ್ರಚಾರ ಸಮಿತಿಯ ಪ್ರ.ಕಾರ್ಯದರ್ಶಿ ಯು.ಟಿ ಆಳ್ವಾ, ಆಡಳಿತ ಮೊಕ್ತೇಸರ ಡಾ| ಮಂಜಯ್ಯ ಶೆಟ್ಟಿ, ಮಾಜಿ ಶಾಸಕ ನಾಗರಾಜ ಶೆಟ್ಟಿ, ಮೋಹನ್ ಆಳ್ವಾ, ಸುಬ್ರಾಯ ಕಾರಂತ, ಕೃಷ್ಣರಾಜ ಆಳ್ವ, ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ವೆಂಕಟೇಶ್ ನಾವುಡ ಪೊಳಲಿ, ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ , ಯು.ಪಿ. ಇಬ್ರಾಹಿಂ, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

More articles

Latest article