Friday, October 20, 2023

ಭಾವುಕ ಭಕ್ತರ ಮೈಮನ ಪುಳಕಗೊಳಿಸಿದ ಒಡಿಯೂರು ಶ್ರೀ ರಥೋತ್ಸವ- ತುಳುನಾಡ್ದ ಜಾತ್ರೆ

Must read

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಒಡಿಯೂರು ರಥೋತ್ಸವ ತುಳುನಾಡ್ದ ಜಾತ್ರೆ ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಎರಡು ಗ್ರಾಮಗಳನ್ನು ಸಂಚರಿಸಿ, ಬೆಸೆಯುವ, ಎರಡೂ ಗ್ರಾಮಗಳ ಭಕ್ತರಲ್ಲಿಗೇ ರಥವೇರಿ ದೇವರು ಸಾಗುವ ಅಪರೂಪವೆನಿಸಿದ, ರೋಚಕ ಚಿತ್ರಣ ಒಡಿಯೂರು ರಥೋತ್ಸವದ ವಿಭಿನ್ನತೆ ಹಾಗೂ ವಿಶೇಷತೆಯೆನಿಸಿದೆ. ನೋಡುವ ಭಕ್ತರ ಪಾಲಿಗೆ ಪುಣ್ಯಪ್ರದ ಕ್ಷಣ!
ರಥೋತ್ಸದಲ್ಲಿ ಪಾಲ್ಗೊಂಡ ಸಹಸ್ರಾರು ಭಕ್ತರು ಶ್ರೀದತ್ತಾಂಜನೇಯ ದೇವರ ಉತ್ಸವಮೂರ್ತಿ, ಸ್ವರ್ಣಪಾದುಕೆಗಳನ್ನು ಸಾಲಂಕೃತ ರಥದಲ್ಲಿ ಇರಿಸಿ, ಗುರುದೇವರನ್ನು ಕುಳ್ಳಿರಿಸಿ ಭಾವುಕರಾಗಿ ’ದಿಗಂಬರಾ ದಿಗಂಬರಾ ಶ್ರೀಪಾದವಲ್ಲಭ ದಿಗಂಬರಾ’-’ಜೈಗುರುದೇವ್’ ಎನ್ನುವ ಮುಗಿಲು ಮುಟ್ಟುವ ಭಕ್ತಿಯ ಉನ್ಮಾದ, ಉದ್ಗಾರದೊಂದಿಗೆ ರಥ ಎಳೆದ್ದೊಯ್ಯುವ ಭಾವುಕ ಕ್ಷಣಗಳು ರೋಮಾಂಚಕವಾಗಿತ್ತು.
ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದಿಂದ ರಾತ್ರಿ 8.30 ಗಂಟೆಗೆ ಕ್ಷೇತ್ರದಲ್ಲಿ ಶ್ರೀಗುರುದೇವದತ್ತಾಂಜನೇಯ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ, ಉತ್ಸವ ಮೂರ್ತಿಗೆ ಕುರೋಮೂಲೆ ವೇ.ಮೂ. ಚಂದ್ರಶೇಖರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಸಕಲ ವೈದಿಕ ವಿಧಿವಿಧಾನಗಳನ್ನು ನೆರವೇರಿಸಿ, ಶ್ರೀಗುರುದೇವಾನಂದ ಸ್ವಾಮೀಜಿಯವರ ಮೂಲಕ ಪೂಜೆ ನಡೆದ ಬಳಿಕ ರಥದಲ್ಲಿ ಇಟ್ಟು, ಮೆರವಣಿಗೆ ಸಾಗಿತು. ಶ್ರೀಕ್ಷೇತ್ರದಿಂದ ಹೊರಟ ರಥಯಾತ್ರೆ ಮಿತ್ತನಡ್ಕ ಗ್ರಾಮ ದೈವಸ್ಥಾನ(ಮಿತ್ತನಡ್ಕ)ಕ್ಕೆ ಹೋಗಿ, ಅಲ್ಲಿ ಗ್ರಾಮ ದೈವದ ಭೇಟಿ ನಡೆದು ಬಳಿಕ ಕನ್ಯಾನದ ಶ್ರೀಗುರುದೇವ ಕಲ್ಯಾಣ ಮಂಟಪಕ್ಕೆ ತೆರಳಿ, ಅಲ್ಲಿ ಸದ್ಗುರು ಶ್ರೀ ನಿತ್ಯಾನಂದ ಮಂದಿರದಲ್ಲಿ ವಿಶೇಷ ಪೂಜೆ ನಡೆಯಿತು. ನಂತರ ಕನ್ಯಾನ ಪೇಟೆ ಸವಾರಿಯಾಗಿ ಶ್ರೀಸಂಸ್ಥಾನಕ್ಕೆ ಹಿಂತಿರುಗಿದ್ದು, ಎರಡೂ ಗ್ರಾಮಗಳಲ್ಲಿ ಒಟ್ಟು 11 ಕಿ.ಮೀ ರಥಯಾತ್ರೆ ನಡೆಯಿತು.
ಚಿತ್ತಾಕರ್ಷಕ ಶೋಭಾಯಾತ್ರೆ: ದೇವರ ರಥದ ಮುಂದೆ ಸಾಗಿದ ಶೋಭಾಯಾತ್ರೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಕಲಾ ತುಣುಕುಗಳ ಹಾಗೂ ಸಾಹಸಮಯ ಕಸರತ್ತುಗಳ ಪ್ರದರ್ಶನವಿತ್ತು. ಭಕ್ತರು ಜೈಕಾರದೊಂದಿಗೆ ರಥವನ್ನು ಎಳೆದೊಯುತ್ತಿದ್ದರೆ, ಕಲಶಧಾರಿ ಸುಮಂಗಲಿಯರು ಸ್ವಾಗತಿಸುತ್ತಾ ಮುಂದಡಿಯಿಡುತ್ತಿದ್ದರು. ಮುಂಭಾಗದಲ್ಲಿ ಚೆಂಡೆ ಮೇಳ, ಬ್ಯಾಂಡ್‌ಮೇಳ, ಬೊಂಬೆ ಪ್ರದರ್ಶನ, ಕಲಾವಿದರ ತಾಳಭರಿತ ಕುಣಿತ ಕಲಾರಸಿಕರ ಮನಸೂರೆಗೊಂಡಿತು. ಮೆರವಣಿಗೆಯ ಮುಂಚೂಣಿಯಲ್ಲಿ ಅಲಂಕೃತವಾದ ವೃಷಭ ರಥಯಾತ್ರೆಗೆ ಹೊಸಕಳೆ ನೀಡಿತು. ಭಜಕರ ಭಕ್ತಿ ಗಾನ, ಬೊಂಬೆ ಬಳಗದ ಕೀಲು ಕುದುರೆ, ನವರಸ ಭಾವಗಳ ಮುಖವಾಡ ಬೊಂಬೆಗಳು ಮುದ ನೀಡಿದವು.

ಮನಸೂರೆಗೊಂಡ ಸ್ತಬ್ಧ ಚಿತ್ರಗಳು: ರಥೋತ್ಸವಕ್ಕೆ ವಿಭಿನ್ನ ಆಕರ್ಷಣೆಯಾಗಿ ಮನಸೂರೆಗೊಂಡದ್ದು ಸ್ತಬ್ಧ ಚಿತ್ರಗಳು. ಒಂದಕ್ಕಿಂತ ಇನ್ನೊಂದು ಆಕರ್ಷಣೀಯವೆನಿಸಿದ ಸ್ತಬ್ದಚಿತ್ರಗಳು ಪುರಾಣೇತಿಹಾಸಗಳನ್ನು ಮತ್ತೆ ನೆನಪಿಸುವ, ಕಥೆಗಳನ್ನು ದೃಶ್ಯಗಳ ಮೂಲಕ ಕಣ್ಣಿಗೆ ಕಟ್ಟುವಂತೆ, ಆಧುನಿಕ ತಾಂತ್ರಿಕತೆಯೊಂದಿಗೆ ಸಂಯೋಜಿಸಲಾಗಿತ್ತು.
ಒಟ್ಟಂದದಲ್ಲಿ ಭಕ್ತಿ ಸ್ಮರಣೆ, ಕಲಾ ಸ್ಫುರಣೆ, ಸಂಸ್ಕೃತಿ ಧಾರಣೆಯೊಂದಿಗೆ ಒಡಿಯೂರುಶ್ರೀರಥೋತ್ಸವ, ತುಳುನಾಡ್ದ ಜಾತ್ರೆ ಸಂಪನ್ನಗೊಂಡಿದ್ದು, ಇವೆಲ್ಲವುಗಳ ಸೊಬಗನ್ನು ನೋಡುಗರು, ಮೈಮನ ತುಂಬಿಸಿಕೊಂಡು ಧನ್ಯತಾಭಾವ ಪಡೆದರು.

 

More articles

Latest article