Thursday, September 28, 2023

ಅಕ್ರಮ ಮರಳುಗಾರಿಕೆಗಾಗಿ ಮುಲ್ಲರಪಟ್ನದಲ್ಲಿ ಕಚ್ಛಾ ರಸ್ತೆ ನಿರ್ಮಾಣ: ಸ್ಥಳೀಯ ಆರೋಪ

Must read

ಬಂಟ್ವಾಳ: ಫಲ್ಗುಣಿ ನದಿಯಲ್ಲಿ ನೀರ ಹರಿವು ಕಡಿಮೆ ಆಗುತ್ತಿದ್ದಂತೆ ಮೂಲರಪಟ್ನ ಕುಸಿತಗೊಂಡ ಸೇತುವೆಗೆ ಪರ್ಯಾಯವಾಗಿ ನದಿಯಲ್ಲಿ ಮಣ್ಣಿನ ರಸ್ತೆ ಸಿದ್ದವಾಗಿದೆ.
ಆದರೆ, ಈ ರಸ್ತೆಯನ್ನು ಸ್ಥಳೀಯರು, ಗುತ್ತಿಗೆದಾರರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ನಿರ್ಮಾಣ ಮಾಡಲಾಗಿದ್ದರೂ ಈ ರಸ್ತೆಯಲ್ಲಿ ಅಕ್ರಮ ಮರಳುಗಾರಿಕೆಯ ಲಾರಿ ಸಾಗಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತವೆ.


ಮೂಲರಪಟ್ನ ಸೇತುವೆಯು 2018 ಜೂ. 25ರಂದು ಕುಸಿತವಾಗಿತ್ತು. ಇದೀಗ ಭರ್ತಿ ಎಂಟು ತಿಂಗಳ ಬಳಿಕ ಪರ್ಯಾಯ ಸಂಚಾರದ ವ್ಯವಸ್ಥೆಯೊಂದು ಆಗಿದೆ.
ಮಂಗಳೂರು ಮತ್ತು ಬಂಟ್ವಾಳ ತಾಲೂಕು ಸಂಪರ್ಕದ ಫಲ್ಗುಣಿ ನದಿ ಮೂಲರಪಟ್ನ ಸೇತುವೆ ಕುಸಿಯುವ ಮೂಲಕ ಎಡಪದವು, ಕುಪ್ಪೆಪದವು,ಮೂಲರಪಟ್ನ ಅರ್ಲ ಸೋರ್ನಾಡು ಸಂಪರ್ಕ ನಿಲುಗಡೆ ಆಗಿತ್ತು. ಇದರಿಂದ ಸಹಸ್ರಾರು ಸಂಖ್ಯೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ವ್ಯಾಪಾರಿಗಳು ತೀವ್ರ ಸಂಚಾರ ಅಡಚಣೆ ಎದುರಿಸಿದ್ದರು.
ಪರ್ಯಾಯವಾಗಿ ಇಲ್ಲಿನ ತೂಗು ಸೇತುವೆಯಲ್ಲಿ ಕಾಲ್ನಡಿಗೆ ಮೂಲಕ ಸಂಚರಿಸುವ ಸಮಸ್ಯೆಯನ್ನು ಜನರು ಎದುರಿಸುವಂತಾಗಿತ್ತು. ಅಂದಿನಿಂದ ನೂತನ ಸೇತುವೆ ನಿರ್ಮಾಣದ ಬಗ್ಗೆ ಪ್ರಯತ್ನಗಳು ನಡೆದಿದ್ದರೂ ಮಳೆಗಾಲದ ಕಾರಣ ಯಾವುದೇ ಕೆಲಸ ಮಾಡಲುಶಕ್ಯವಾಗಿರಲಿಲ್ಲ. ಜನವರಿ ತಿಂಗಳ ಬಳಿಕ ನದಿಯಲ್ಲಿ ನೀರ ಹರಿವು ಕಡಿಮೆ ಆಗಿದ್ದು ಮಣ್ಣಿನ ರಸ್ತೆ ನಿರ್ಮಾಣದ ಪ್ರಯತ್ನಗಳು ಯಶಸ್ವಿಯಾಗಿದೆ.
ಸ್ಥಳೀಯರ ಸಂಪೂರ್ಣ ಸಹಕಾರದಲ್ಲಿ ಶಾಸಕರ ನೇತೃತ್ವದಲ್ಲಿ ಮಣ್ಣಿನ ರಸ್ತೆ ನಿರ್ಮಾಣ ಆಗುವ ಮೂಲಕ ಮಂಗಳೂರು ಮೂಡಬಿದಿರೆಗೆ ಸಂಚರಿಸಲು ಹಿಂದಿನಂತೆ ಮತ್ತೆ ತೀರಾ ಹತ್ತಿರದಿಂದ ಅವಕಾಶ ಕಲ್ಪಿಸಲಾಗಿದೆ. ಸುತ್ತು ಬಳಸಿ ಹೋಗುವ ಸಮಸ್ಯೆಗೆ ಒಂದು ಹಂತದ ವಿರಾಮ ನೀಡಿದಂತಾಗಿದೆ.

ಅಕ್ರಮ ಮರಳುಗಾರಿಕೆಗಾಗಿ ರಸ್ತೆ ನಿರ್ಮಾಣ: ಸ್ಥಳೀಯ ಆರೋಪ
ಮುಲ್ಲರಪಟ್ನ ಫಾಲ್ಗಣಿ ನದಿಯಲ್ಲಿ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಇಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದ ಸೇತುವೆ ಶಿಥಿಲಗೊಂಡು ಕುಸಿದುಬಿದ್ದಿದೆ. ಕಾನೂನಿನಂತೆ ಸೇತುವೆಗಳ ಇಕ್ಕೆಲಗಳ ೫೦೦ ಮೀಟರ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸುವಂತಿಲ್ಲ. ಆದರೆ, ಮುಲ್ಲರಪಟ್ನ ಸೇತುವೆಯ ಇಕ್ಕೆಲಗಳಲ್ಲಿ ಅವ್ಯಾಹತವಾಗಿ ಅಕ್ರಮಮರಳುಗಾರಿಕೆಯಿಂದ ಸೇತುವೆ ಕುಸಿತಕ್ಕೆ ಕಾರಣವಾಗಿದೆ.
ಆದರೆ, ಇದೀಗ ಸೇತುವೆ ಸಮೀಪ ಮಣ್ಣು ಹಾಕಿ, ರ‍್ಯಾಂಪ್ ನಿರ್ಮಾಣ ಮಾಡಿ ಅಕ್ರಮ ಮರಳುಗಾರಿಕೆಗಾಗಿ ಕಚ್ಛಾ ರಸ್ತೆ ನಿರ್ಮಾಣ ಮಾಡಲಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಮಾಡುವುದಾಗಿ ಸ್ಥಳೀಯ ವ್ಯಕ್ತಿಯೊಬ್ಬರ ಅನುಮತಿ ಖಾಸಗಿ ಜಾಗದ ಮೂಲಕ ರಸ್ತೆ ಮಾರ್ಗವನ್ನು ಮಾಡಲಾಗಿತ್ತು. ಆದರೆ, ಈ ರಸ್ತೆಯಲ್ಲಿ ಅವ್ಯಾಹತವಾಗಿ ಮರಳು ಲಾರಿಗಳನ್ನು ಸಂಚರಿಸುತ್ತಿರುವುದನ್ನು ಕಂಡ ಜಾಗದ ಮಾಲಕರು ರಸ್ತೆ ತಡೆ ಮಾಡಿದ್ದರು. ಅದಲ್ಲದೆ, ಅಕ್ರಮ ಮರಳುಗಾರಿಕೆಯ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

More articles

Latest article