Wednesday, October 18, 2023

ಯೇನೆಪೋಯ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ: ಮಾಹಿತಿ-ಸಂವಾದ

Must read

ಮಂಗಳೂರು: ವೈದ್ಯಕೀಯ ಲೋಕಕ್ಕೆ ಸವಾಲು ಎನ್ನುವಂತೆ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಒಂದುಸಾವಿರ ವ್ಯಕ್ತಿಗಳಲ್ಲಿ ಐದು ಜನರು  ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ,  ಜೀವನ ಶೈಲಿಯನ್ನು ಉತ್ತಮ ಪಡಿಸಿಕೊಳ್ಳುವುದೇ ನಿಜವಾದ ಕ್ಯಾನ್ಸರ್ ಜಾಗೃತಿ ಎಂದು ಮಂಗಳೂರಿನ ಕ್ಯಾನ್ಸರ್ ತಜ್ಞ  ಡಾ. ಗುರುಪ್ರಸಾದ್ ಭಟ್ ಹೇಳಿದರು.
ಮಂಗಳೂರು ಕೊಡಿಯಾಲ್ ಬೈಲಿನಲ್ಲಿರುವ ಯೇನಪೋಯ ಸ್ಪೆಷಾಲಿಟಿ ಆಸ್ಪತ್ರೆಯ ಕಾನ್ಪರೆನ್ಸ್ ಹಾಲ್ ನಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ  ಸೋಮವಾರ ಸಂಜೆ ನಡೆದ “ಶೀಘ್ರ ಕ್ಯಾನ್ಸರ್ ಪತ್ತೆ ಹಚ್ಚುವುದು ಹೇಗೆ “ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು.
ಸ್ತನ, ಗಂಟಲು ಹಾಗೂ ಬಾಯಿಯ ಕ್ಯಾನ್ಸರ್ ಭಾರತದಲ್ಲಿ ಅತೀ ಹೆಚ್ಚು ಜನರನ್ನು ಕಾಡುತ್ತಿದೆ. ನಮ್ಮ ಸೇವನೆಯ ಆಹಾರ, ಪರಿಸರದ ಮೇಲೆ ಗಮನ ನೀಡುವುದು, ದೈನಂದಿನ ಕಾರ್ಯಗಳಿಗೆ ಬಳಸುವ ವಸ್ತುಗಳ ಕಡೆಗೆ ಹೆಚ್ಚಿನ ನಿಗಾವಹಿಸುವ ಮೂಲಕ ಜೀವನ ಶೈಲಿಯಲ್ಲಿ ಪ್ರತಿಯೊಬ್ಬರೂ ಸುಧಾರಣೆ ತರಬೇಕಾದ್ದು ಇಂದಿನ ಅಗತ್ಯ ಎಂದ ಅವರು, ಕ್ಯಾನ್ಸರ್ ಗೆ ಮದ್ದೇ ಇಲ್ಲ ಎನ್ನುವ ಕಾಲವೊಂದಿತ್ತು, ಆದರೆ ಈಗ ಹಾಗಿಲ್ಲ ಮೊದಲಹಂತದಲ್ಲೇ ಪತ್ತೆಯಾಗಿ ಚಿಕಿತ್ಸೆ ನೀಡಿದರೆ ಕ್ಯಾನ್ಸರ್ ಎಂಬ ಗುಮ್ಮವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಿದೆ ಎಂದರು.
ಯಾವುದೇ ವ್ಯಕ್ತಿಗೆ ಕ್ಯಾನ್ಸರ್ ಇದೆ ಎಂಬುದು ಖಚಿತವಾದರೆ ಅದನ್ನು  ಚುಚ್ಚುಮದ್ದು, ಶಸ್ತ್ರ ಚಿಕಿತ್ಸೆ, ಕೆಮೋಥೆರಪಿ  ಮತ್ತು ರೆಡಿಯೋ ಥೆರಪಿ  ಮೂಲಕ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಸಂಶೋಧನೆಯ ವಲಯ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದ್ದು,  ವಿವಿಧ ರೀತಿಯ ಕ್ಯಾನ್ಸರ್ ಗಳಿಗೆ ಅದರದೇ ಆದ ವಿಶೇಷ ಚಿಕಿತ್ಸೆಗಳು ಲಭ್ಯವಿದೆ ಎಂದ ಅವರು, ಜನಜಾಗೃತಿಯೊಂದೇ ಕ್ಯಾನ್ಸರ್ ಗೆ ನಿಜವಾದ ಮದ್ದು ಎಂದು ಅಭಿಪ್ರಾಯಿಸಿದರು.
ಕ್ಯಾನ್ಸರ್ ಗೆಡ್ಡೆಯಲ್ಲಿನ ನಿರ್ದಿಷ್ಟ ಕೋಶಗಳನ್ನು ಗುರುತಿಸಿ, ನಿಶ್ಚಿತ ಔಷಧೋಪಚಾರ ಮಾಡುವ,  ಕ್ಯಾನ್ಸರ್ ರೋಗದ ಲಕ್ಷಣ ಕಾಣಿಸಿದ ನಂತರ ಬಹುತೇಕ ರೋಗಿಗಳು ಕಾಯಿಲೆ ಯಾವ ಹಂತದಲ್ಲಿದೆ ಎಂದು ಅರಿತು,ಮುಂಬರುವ ದುಷ್ಪರಿಣಾಮಗಳ ಬಗ್ಗೆ ಪೂರ್ವದಲ್ಲೇ ಗ್ರಹಿಸಿ ಸೂಕ್ತ ಚಿಕಿತ್ಸೆ ಮಾಡುವುದು ಈಗಿನ ಹೊಸ ಸಂಶೋಧನೆಯಾಗಿದ್ದು, ಕ್ಯಾನ್ಸರ್ ಸಹಿತ ಯಾವುದೇ ರೋಗಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದು ಎಂದರು.
  ಯೇನಪೋಯ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮಹಮ್ಮದ್ ತಾಹಿರ್ ಸ್ವಾಗತಿಸಿದರು , ಸಂಪರ್ಕ ಅಧಿಕಾರಿ ಶಾನ್ ಅಕ್ಷಯ್ ವಂದಿಸಿದರು.
ಫಿಸಿಯೋತೆರಪಿ ವಿಭಾಗದ ನೋಡಲ್ ಅಧಿಕಾರಿ ಡಾ.ರಮ್ಯ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸದ ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು.

More articles

Latest article