Thursday, September 28, 2023

’ಧರ್ಮವನ್ನು ಉಳಿಸುವಾತನೇ ನಿಜ ಅರ್ಥದ ಅರಸ’- ರಾಘವೇಶ್ವರ ಶ್ರೀ ಕುಂಡಡ್ಕದಲ್ಲಿ ರಾಜ ದರ್ಬಾರ್ ವೈಭವ

Must read

ವಿಟ್ಲ: ದೇವರು ಸರ್ವ ಬ್ರಹ್ಮಾಂಡವನ್ನು ಆಳುವ ಅರಸು ಆಗಿದ್ದಾರೆ. ಧರ್ಮವನ್ನು ಉಳಿಸುವಾತನೇ ನಿಜ ಅರ್ಥದ ಅರಸನಾಗಿರುತ್ತಾನೆ. ಧರ್ಮ ಉಳಿದರೆ ಎಲ್ಲವೂ ಉಳಿಯುತ್ತದೆ. ದೇವರು, ಗುರು, ರಾಜರು ಆಸೀನರಾದ ವರ್ತಮಾನ ಕಾಲದ ಅತ್ಯಂತ ವಿಶೇಷ ಸಭೆಯಾಗಿದೆ. ರಾಜದರ್ಬಾರ್ ಮೂಲಕ ಗತ ವೈಭವ ಸ್ಥಿತ ವೈಭವಕ್ಕೆ ಬಂದಿದೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠ ಶ್ರೀ ಸಂಸ್ಥಾನ ಗೋಕರ್ಣದ ಶ್ರೀರಾಘವೇಶ್ವರ ಭಾರತಿ ಮಹಾಸ್ವಾಮಿಗಳವರು ನುಡಿದರು.
ವಿಟ್ಲ ಸಮೀಪದ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಶಿಬರಿಕಲ್ಲಮಾಡ ಶ್ರೀ ಮಲರಾಯ – ಮೂವರ್ ದೈವಂಗಳ ದೈವಸ್ಥಾನ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ’ರಾಜ ದರ್ಬಾರ್’ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮಠ ಮತ್ತು ಅರಮನೆಗೆ ಅವಿನಾಭಾವ ಸಂಬಂಧವಿರುತ್ತದೆ. ಎರಡು ಗ್ರಾಮದ ಭಕ್ತರ ತ್ಯಾಗ ಸಮರ್ಪಣೆಯ ಮೂಲಕ ಕುಂಡಡ್ಕದಲ್ಲಿ ದೇಗುಲ, ಸಮೀಪದಲ್ಲಿ ದೈವಸ್ಥಾನ ಪುನರ್ ನಿರ್‍ಮಾಣಗೊಂಡು ಪುನರ್ ಪ್ರತಿಷ್ಠೆಯ ಪುಣ್ಯ ಕಾರ್‍ಯ ನಡೆದಿದ್ದು, ಇತರ ಗ್ರಾಮಗಳ ಭಕ್ತರಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೋ ಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ, ಬಾಳೆಕೋಡಿ ಶ್ರೀಕಾಶೀಕಾಲಭೈರವೇಶ್ವರ ಕ್ಷೇತ್ರದ ಡಾ. ಶ್ರೀ ಶಶೀಕಾಂತಮಣಿ ಸ್ವಾಮೀಜಿ ಉಪಸ್ಥಿತರಿದ್ದರು.
ವಿಟ್ಲ ಅರಮನೆಯ ವಿ. ಜನಾರ್ದನ ವರ್ಮ ಅರಸರು ರಾಜ ದರ್ಬಾರ್‌ನ ಅಧ್ಯಕ್ಷತೆಯನ್ನು ವಹಿಸಿದ್ದರು.
ಇತಿಹಾಸ ತಜ್ಞ ಪುಂಡಿಕಾ ಗಣಪತಿ ಭಟ್ ವಿಟ್ಲ ಅರಸರ ಇತಿಹಾಸದ ಬಗ್ಗೆ ಉಪನ್ಯಾಸ ನೀಡಿದರು. ರಾಜ ದರ್ಬಾರ್‌ನಲ್ಲಿ ಪುರೋಹಿತ ವರ್ಗ, ಸಂಗೀತ, ನೃತ್ಯ , ವಾದನ, ಯಕ್ಷಗಾನ ಕಲಾವಿದರ ಮೂಲಕ ಅಷ್ಟವಧಾನ ಸೇವೆ ನಡೆಯಿತು.
ಪದ್ಮಯ್ಯ ಗೌಡ ಪೈಸಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ ಪೂಜಾರಿ ವಂದಿಸಿದರು. ನಾಗೇಶ್, ಚಿದಾನಂದ ಗೌಡ ಪೆಲತ್ತಿಂಜ ಸಹಕರಿಸಿದರು.

More articles

Latest article