


ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ವಿಠಲ ಪ್ರೌಢಶಾಲೆಯಲ್ಲಿ ತಿಂಗಳ ಚಿತ್ರ ಕಾರ್ಯಾಗಾರ ನಡೆಯಿತು. ಸ್ಥಳೀಯ ಹವ್ಯಾಸಿ ಕಲಾವಿದರಾದ ಸಿರಿ ಎಲ್,ಎಸ್ ಕೂಡೂರು ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮಂತಹ ಕಲಾವಿದರನ್ನು ಗುರುತಿಸಿ ತಮ್ಮ ಕರಕೌಶಲದಿಂದ ಮೂಡಿ ಬಂದ ಬೇರೆ ಬೇರೆ ವಿನ್ಯಾಸದ ನಿಟ್ಟಿಂಗ್ ಮಾದರಿಯನ್ನು ಪ್ರದರ್ಶಿಸಲು ಅವಕಾಶ ಸಿಕ್ಕಿದಂತಾಗಿದೆ ಎಂದರು.
ವಿಠಲ ವಿದ್ಯಾ ಸಂಸ್ಥೆಯ ಕಿರಣ್ ಕುಮಾರ್ ಹಾಗೂ ರಮೇಶ್ ಜನಪದ ಕಲೆಯ ಬಗ್ಗೆ ಮುಖಾಮುಖಿ ಸಂವಾದ ನಡೆಸಿದರು.
ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ತೀರ್ಪುಗಾರರಾಗಿ ನಿರ್ಣಾಯಕ ಮಾಡುವ ಸಂಧರ್ಭದಲ್ಲಿ ಆಗುವ ಕೆಲವೊಂದು ದ್ವಂದ್ವಗಳನ್ನು ಮುಕ್ತವಾಗಿ ಚರ್ಚಿಸಲಾಯಿತು.
ಜನಪದ ಕಲೆಗಳು ನಮ್ಮ ಪೂರ್ವಜರಿಂದ ಬಂದ ಬಳುವಳಿ. ನಮ್ಮ ಸ್ಥಳೀಯ ಪರಂಪರೆಯನ್ನು ತಿಳಿಸುವ ಜೊತೆಗೆ ಮನೋರಂಜನೆಯ ಜೀವಂತ ಮಾಧ್ಯಮವಾಗಿ ನಮ್ಮ ಸಂಸ್ಕೃತಿಯ ಅಸ್ಮಿತೆಯನ್ನು ಕಟ್ಟಿಕೊಡುತ್ತಿದೆ. ಇದರ ಮೂಲಕ್ಕೆ ಧಕ್ಕೆಯಾಗದೇ ಆಧುನಿಕತೆಯತೆಯ ಸ್ಪರ್ಶದೊಂದಿಗೆ ಮುಂದಿನ ಪೀಳಿಗೆಗೆ ನಮ್ಮ ನಂಬಿಕೆಯನ್ನು ಹಸ್ತಾಂತರಿಸುವ ನಿಟ್ಟಿನಲ್ಲಿ ಇದನ್ನು ಬಳಸಿ ಬೆಳೆಸಬೇಕಾಗಿದೆ..ಆ ಕಾರಣಕ್ಕಾಗಿಯೇ ಇಲಾಖೆಯು ಇದನ್ನು ಒಂದು ಪಾರಂಪರಿಕ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಿಸಿಕೊಟ್ಟಿದೆ. ಆದರೆ ಇದರ ತೀರ್ಪುಗಾರಿಕೆ ಮಾಡುವವರಿಗೆ ಯಾವುದೇ ಮಾರ್ಗದರ್ಶನ, ತರಬೇತಿ ಇಲ್ಲದೇ ದ್ವಂದ್ವವಾಗಿಯೇ ನಿರ್ವಹಿಸಲಾಗುತ್ತಿದೆ ಎಂದು ಚರ್ಚಿಸಲ್ಪಟ್ಟಿತು.
ಬಂಟ್ವಾಳ ತಾಲೂಕು ತಂಡದಿಂದ ಕಾರ್ಯಕ್ರಮ ಆಯೋಜನೆ ಮಾಡಲ್ಪಟ್ಟಿತು. ವರ್ಲಿ ಕಲಾವಿದ ತಾರಾನಾಥ ಕೈರಂಗಳರವರ ಕಾರ್ಯಕ್ರಮ ನಿರೂಪಿಸಿದರು.


