ಇಂದು ಪಾಶ್ಯಾತ್ಯರು ಪ್ರಾರಂಭಿಸಿದ ಪ್ರೇಮಿಗಳ ದಿನ. ಜೀವನದಲ್ಲಿ ಗಂಟೆ ಗಂಟೆ ದುಡಿತದಲ್ಲಿ ತಾಂತ್ರಿಕ ಜೀವನ ನಡೆಸುವ ಪಾಶ್ಯಾತ್ಯ ಜನರಿಗೆ ತಮ್ಮ ಪ್ರೀತಿ ಪಾತ್ರರಿಗಾಗಿ ಮೀಸಲಿಡಲು ನಿತ್ಯ ಸಮಯ ಸಿಗಲಾರದು. ಅದಕ್ಕಾಗಿ ಅವರು ಫೆಬ್ರವರಿ ತಿಂಗಳಿನ ಹದಿನಾಲ್ಕನೇ ತಾರೀಖಿನ ದಿನವನ್ನು ಪ್ರೇಮಿಗಳ ದಿನವನ್ನಾಗಿ ಪ್ರೀತಿ ಪಾತ್ರರೊಂದಿಗೆ, ತಮ್ಮ ಬಾಳ ಸಂಗಾತಿಯೊಂದಿಗೆ ಕಳೆಯಲಿಚ್ಛಿಸಿದರು.
ನಮ್ಮ ದೇಶದಲ್ಲಿ ಹಾಗಲ್ಲ. ಮದುವೆ ಆದ ಬಳಿಕ ಏನೇ ಕಷ್ಟ ಬಂದರೂ, ಹೇಗಿದ್ದರೂ ಹೊಂದಿಕೊಂಡು ಸತಿಪತಿಗಳು ಬದುಕುತ್ತಾರೆ. ಅಲ್ಲಿ ನ್ಯಾಯ, ಜಗಳ, ಗಲಾಟೆ, ಪ್ರೀತಿ, ಸಹಾಯ ಎಲ್ಲವೂ ಇರುತ್ತದೆ. ನಮ್ಮದು ಪಾಶ್ಚಾತ್ಯರ ಹಾಗಿನ ತಾಂತ್ರಿಕ ಬದುಕಲ್ಲ. ಪ್ರತಿಯೊಬ್ಬರಿಗೂ ನೈಟ್ ಡ್ಯೂಟಿ ಮಾಡುವ ಅನಿವಾರ್ಯ ಇಲ್ಲಿಲ್ಲ. ನಾವು ಕುಟುಂಬ ಜೀವಿಗಳು. ನಿತ್ಯ ಸತ್ಯ ಪ್ರೀತಿ ನಮ್ಮದು. ಅಲ್ಲಿ ಅನೇಕರ ಆಗಮನವಿಲ್ಲ, ಮೋಸ ವಂಚನೆಗಳಿಲ್ಲ. ಬದಲಾಗಿ ನಂಬಿಕೆ ಬಲವಾಗಿರುವ ಕೂಡು ಕುಟುಂಬ. ಪಾಶ್ಯಾತ್ಯರ ಅಂಧಾನುಕರಣೆ, ಅರೆಬರೆ ತಿಳುವಳಿಕೆ, ಅತೃಪ್ತಿ, ಹಣ, ಸಿರಿವಂತಿಕೆ, ದುರಾಸೆ, ದುಷ್ಕೃತ್ಯಗಳು ಮನುಜನನ್ನು ಅವನ ಮಾನಸಿಕ ಮಟ್ಟಕ್ಕೆ ಅನುಗುಣವಾಗಿ ಹಾಳು ಮಾಡಿರಬಹುದೇ ಹೊರತು ಯಾವ ಭಾರತೀಯ ಹುಡುಗಿಯೂ ತನಗೊಬ್ಬ ಉತ್ತಮ, ಅಂದದ, ಒಪ್ಪುವ, ಸಿರಿವಂತ, ತುಂಟ ಗಂಡ, ತನ್ನ ಮಕ್ಕಳು, ಒಂದಿಷ್ಟು ಆಸ್ತಿ, ಒಡವೆ… ಹೀಗೆ ಕನಸು ಕಾಣುವಳೇ ಹೊರತು ತನ್ನ ಬದುಕಲ್ಲಿ ಹಲವಾರು ಗಂಡುಗಳು ಬರಲೆಂಬ ಆಶಯ ಯಾವ ಭಾರತೀಯ ಹುಡುಗಿಯದ್ದೂ ಇರದು.
ಅಂತೆಯೇ ಹುಡುಗರೂ ಸಹ. ಪ್ರತಿ ಕನಸುಗಣ್ಣಿನ ಹುಡುಗನೊಡನೆ ಸುಂದರವಾದ, ನನಗಷ್ಟೆ ಸೀಮಿತವಾದ, ನನಗೊಪ್ಪುವ, ನನ್ನ ಕುಟುಂಬಕ್ಕೆ ಹೊಂದಿಕೊಳ್ಳುವ, ನನ್ನ ಬದುಕನ್ನು ಉನ್ನತ ಮಟ್ಟಕ್ಕೇರಿಸುವ, ಬಾಳ ಜತೆಗಾತಿಯೊಬ್ಬಳು ಬೇಕೆಂಬ ತುಡಿತವಿರುತ್ತದೆ. ಇದು ಭಾರತೀಯ ಲಕ್ಷಣ. ಯಾವ ಪೋಷಕರಾದರೂ ಕಾರಣವಿಲ್ಲದೆ ಕೋಪಗೊಂಡು ಅಹಂಕಾರದಿಂದ ತಮ್ಮ ಮಗನಿಗೋ, ಮಗಳಿಗೋ ಮುಂದೆ ನಿಂತು ಎರಡನೇ ಅಥವಾ ಮೂರನೇ ಮದುವೆ ಮಾಡಲಾರರು.
ಸಮಾಜದ ಜೊತೆ ಹೊಂದಿಕೊಂಡು ಬಾಳುವವರು ನಾವು. ನಮಗೆ ಪಕ್ಕದ ಮನೆ ಅರಮನೆಗೆ ಸಮಾನ. ಆದರೆ ಪಾಶ್ಚಾತ್ಯರು ಹಾಗಲ್ಲ. ಅವರಿಗೆ ಸಮಾಜ ಎಂದರೆ ಜಾಲಿ, ಎಂಟರ್ಟೈನ್. ನಮ್ಮೂರಿನಂಥ ಭಕ್ತಿ ಪ್ರಧಾನ ಜಾತ್ರೆಗಳು ಅಲ್ಲಿಲ್ಲ. ಬದಲಾಗಿ ಫನ್ ಫೇರ್, ಕಿಟ್ಟಿ ಪಾರ್ಟಿ, ಕ್ಯಾಂಡಲ್ ಲೈಟ್ ಡಿನ್ನರ್ ಪಾರ್ಟಿ, ಟೀ ಪಾರ್ಟಿ.. ಹೀಗೆ..
ನಮ್ಮ ಜೀವನಕ್ಕೆ ಬೇಕಾದ ಆಚರಣೆಗಳನ್ನು ಆಚರಿಸೋಣ. ಇದು ಇತರರ ಬದುಕಿಗೆ ಮಾರಕವಾಗಬಾರದು. ನೀವೇನಂತೀರಿ?

 

@ಪ್ರೇಮ್@

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here