ಬಂಟ್ವಾಳ: ಶಿಕ್ಷಣ ಸಂಸ್ಥೆ ಯನ್ನು ಸ್ಥಾಪಿಸುವುದು ಸುಲಭ, ಅದನ್ನು ಮುನ್ನಡೆಸಿಕೊಂಡು ಹೋಗುವುದು ಕಷ್ಟ. ಆರಂಭದ ಹಂತದಲ್ಲಿ ಸ್ವಲ್ಪ ನಷ್ಟ ಉಂಟಾದರೂ ನಿರಂತರ ಪರಿಶ್ರಮ ದಿಂದ ಯಶಸ್ಸನ್ನು ಪಡೆಯಲು ಸಾಧ್ಯವಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಎನ್. ವಿನಯ ಹೆಗ್ಡೆ ಅವರು ಹೇಳಿದರು.
ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಗುಡ್ಡೆಯಂಗಡಿಯ ಓಂ ಜನಹಿತಾಯ ಸಂಸ್ಥಾನ ಟ್ರಸ್ಟ್ ಸಂಸ್ಥೆಯ ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇದರ ನೂತನ ಕಟ್ಟಡವನ್ನು ಗುರುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ತಾಯಿಯ ಪ್ರೇರಣೆಯಂತೆ ಗ್ರಾಮದ ಮಕ್ಕಳ ಅಭ್ಯುದಯದ ನಿಟ್ಟಿನಲ್ಲಿ ತಾನು ನಿಟ್ಟೆಯಲ್ಲಿ ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದಾಗ ಇಂದಿನಂತೆ ವ್ಯವಸ್ಥೆ, ಸಹಕಾರಗಳಿರಲಿಲ್ಲ. ಓಂ ಜನಹಿತಾಯ ಸಂಸ್ಥಾನ ಟ್ರಸ್ಟ್ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಭವ್ಯವಾದ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ವಿದ್ಯೆಯಿಂದ ವಂಚಿತರಿಗೆ ಅವಕಾಶ ಒದಗಿಸಿದೆ. ಇದನ್ನು ಎಲ್ಲರೂ ನಮ್ಮ ಶಾಲೆ ಎಂದು ಅನುಸರಿಸಿದಾಗ ಪ್ರಗತಿ ಸಾಧ್ಯ ಎಂದರು.



ಉತ್ತಮ ಶಿಕ್ಷಕರಿರುವ ಶಾಲೆಯಲ್ಲಿ ಮಕ್ಕಳೂ ವಿಕಸನಗೊಳ್ಳುತ್ತಾರೆ. ಶಿಕ್ಷಕರು ಮಕ್ಕಳನ್ನು ತಾಯಿಯ ರೂಪದಲ್ಲಿ ಕಂಡಾಗ ಶ್ರೇಷ್ಠ ವಿದ್ಯಾರ್ಥಿಗಳು ತಯಾರಾಗುತ್ತಾರೆ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಅತಿಥಿಯಾಗಿ ಮಾತನಾಡಿ, ಸ್ವಾತಂತ್ರ್ಯೋತ್ತರದ ಬಳಿಕ ದೇಶದಲ್ಲಿ ಬಹಳಷ್ಟು ಪ್ರಯತ್ನದ ನಂತರ ಸಂಪೂರ್ಣ ಸಾಕ್ಷರತೆ ಸಾಧ್ಯವಾಗಿದೆ. ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವ ಜವಾಬ್ದಾರಿ ಸರಕಾರದ್ದಾದರೂ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸರಕಾರದ ಹೊರೆ ಕಡಿಮೆಯಾಗಿದೆ. ಇದಕ್ಕೆ ಜನಪರ ಹಿತಾಸಕ್ತಿಯ ನಿಟ್ಟೆ ವಿದ್ಯಾ ಸಂಸ್ಥೆ ಮಾದರಿಯಾಗಿದೆ. ಈ ಸಂಸ್ಥೆಯೂ ಅಂತಹ ಮಾದರಿ ಸಂಸ್ಥೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಶ್ರೀ ಕ್ಷೇತ್ರ ಅರಳದ ಆಡಳಿತ ಮೊಕ್ತೇಸರ ಎ. ರಾಜೇಂದ್ರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,ಶಾಲೆಯೆಂಬುವುದು ಬರಿಯ ಕಟ್ಟಡವಲ್ಲ, ಶಾಲೆಗೂ ಒಂದು ಮನಸು, ಚರಿತ್ರೆ ಇರುತ್ತದೆ. ಶಿಕ್ಷಕರ ಪ್ರೀತಿಯ ಉತ್ತಮ ಮನೋಭಾವನೆಯಿಂದ ಮಕ್ಕಳು ಚಾರಿತ್ರ್ಯವಂತರಾಗಿ ವಿಶ್ವ ಮಾನವರಾಗುತ್ತಾರೆ ಎಂದು ಹೇಳಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಶಾಸಕ ಎನ್.ಎಂ.ಅಡ್ಯಂತಾಯ, ಟ್ರಸ್ಟಿ, ಮುಂಬಯಿ ವೈದ್ಯ ಡಾ| ಸತೀಶ್ ಶೆಟ್ಟಿ, ಟ್ರಸ್ಟಿ, ಅಂತಾರಾಷ್ಟ್ರೀಯ ಕ್ರೀಡಾಪಟು ಹರೀಶ್ ಶೆಟ್ಟಿ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಶುಭ ಹಾರೈಸಿದರು.
ಶಾಲಾ ಸಂಸ್ಥಾಪಕ, ಮುಂಬಯಿ ಉದ್ಯಮಿ ಶಾಂತಾರಾಮ ಶೆಟ್ಟಿ, ಬೆಳ್ಳೂರು ಗ್ರಾ.ಪಂ.ಅಧ್ಯಕ್ಷೆ ಜಯಂತಿ, ಅರಳ ಗ್ರಾ.ಪಂ. ಅಧ್ಯಕ್ಷೆ ತುಂಗಮ್ಮ,ಟ್ರಸ್ಟಿಗಳಾದ ಅರುಣಾ ಶೆಟ್ಟಿ, ಭಾಸ್ಕರ ಶೆಟ್ಟಿ, ವಿಶ್ವನಾಥ ಶೆಟ್ಟಿ,ಅತಿತಾ ಶೆಟ್ಟಿ, ವನಿತಾ ಶೆಟ್ಟಿ, ಮನ್ಸೂರ್ ಸಾಹು, ಪ್ರಮುಖರಾದ ಪುಷ್ಪಾ ಶೆಟ್ಟಿ ಕುಂಜಾರು, ವೀಣಾ ಶೆಟ್ಟಿ , ಸಂಚಾಲಕ ರಂಜನ್ ಕುಮಾರ್ ಶೆಟ್ಟಿ ವೇದಿಕೆಯಲ್ಲಿದ್ದರು. ಶಾಲಾ ಆಡಳಿತ ಮಂಡಳಿ ಸದಸ್ಯರು, ಗ್ರಾ.ಪಂ.ಸದಸ್ಯರು, ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲಾ ಸಂಸ್ಥಾಪಕ ಶಾಂತಾರಾಮ ಶೆಟ್ಟಿ ಅವರನ್ನು ಸಾರ್ವಜನಿಕರ ವತಿಯಿಂದ ಸಮ್ಮಾನಿಸಲಾಯಿತು. ಗ್ರಾ.ಪಂ ಸದಸ್ಯ ಡೊಂಬಯ ಅರಳ ಅಭಿನಂದನಾ ಭಾಷಣ ಮಾಡಿದರು. ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಆಡಳಿತ ಮಂಡಳಿ ಅಧ್ಯಕ್ಷ ಜಗದೀಶ ಆಳ್ವ ಅಗ್ಗೊಂಡೆ ಅವರು ಸ್ವಾಗತಿಸಿ, ಪ್ರಸ್ತಾವಿಸಿ ಮಾತನಾಡಿ, ಸಮಾಜ ಸೇವಕ ಶಾಂತಾರಾಮ ಶೆಟ್ಟಿ ಅವರು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ನೀಡುವ ಸದುದ್ದೇಶದಿಂದ ಈ ವಿದ್ಯಾಲಯವನ್ನು ಸ್ಥಾಪಿಸಿದ್ದು, ಮುಂದಕ್ಕೆ ಗ್ರಾಮಸ್ಥರಿಗೆ ಉಚಿತ ವೈದ್ಯಕೀಯ ಸೇವೆ, ಬ್ಯಾಂಕಿಂಗ್ ವ್ಯವಸ್ಥೆ ನೀಡುವ ಚಿಂತನೆ ನಡೆಸಿರುವರು ಎಂದು ಹೇಳಿದರು. ಶಾಲಾ ಪ್ರಬಂಧಕ ಸಂಕಪ್ಪ ಶೆಟ್ಟಿ ವಂದಿಸಿದರು. ಮನ್ಮಥ ಶೆಟ್ಟಿ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.