ವಿಟ್ಲ: ಗ್ರಾಮ ಸಭೆಯ ಮಾಹಿತಿ ಗ್ರಾಮಸ್ಥರಿಗೆ ಹಾಗೂ ಸದಸ್ಯರಿಗೇ ಸರಿಯಾಗಿ ಮುಟ್ಟಿಲ್ಲ.. ಸಭೆಯ ಉಸ್ತುವಾರಿ ವಹಿಸಬೇಕಾದ ಪಿಡಿಒ ಅವರೇ ಸಭೆಗೆ ಇಲ್ಲ. ಗ್ರಾಮಸ್ಥರು ಸಮಯಕ್ಕೆ ಸಭೆಗೆ ಬಂದರೂ ಇಲಾಖಾಧಿಕಾರಿಗಳು ಸಭೆಗೆ ಬರುವುದಿಲ್ಲ.. ಪಂಚಾಯಿತಿ ಆಡಳಿತದಲ್ಲಿ ಅಕ್ರಮಗಳು ನಡೆಯುತ್ತಿದ್ದರು ಕೇಳುವವರೇ ಇಲ್ಲ ಎಂದು ಪೆರುವಾಯಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರಿಂದ ಆಕ್ಷೇಪಗಳು ಕೇಳಿ ಬಂದವು.
ಪೆರುವಾಯಿ ಗ್ರಾಮ ಸಭೆಯ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ಸಮರ್ಪಕವಾಗಿ ನೀಡಿಲ್ಲ ಹಾಗೂ ಸದಸ್ಯರಿಗೂ ನೋಟೀಸ್ ಒಂದು ದಿನದ ಮೊದಲು ನೀಡಲಾಗಿದೆ ಎಂದು ಸಭೆಯ ಆರಂಭಕ್ಕೂ ಮೊದಲೇ ಚರ್ಚೆ ಆರಂಭವಾಗಿತ್ತು. ಸಭೆಯ ಉಸ್ತುವಾರಿ ತೆಗೆದುಕೊಳ್ಳಬೇಕಾದ ಪಂಚಾಯಿತಿ ಪಿಡಿಒ ಸಮಯದಲ್ಲಿ ಬರಲಿಲ್ಲ ಎಂಬ ವಿಚಾರವನ್ನು ಇಟ್ಟುಕೊಂಡ ನಾಗರೀಕರು ಪಂಚಾಯಿತಿ ಆಸುಪಾಸಿನಲ್ಲೇ ವಾಸ್ತವ್ಯ ಇರಬೇಕಾದ ಪಿಡಿಒ ನಿತ್ಯ ಸಮಯಕ್ಕೆ ಪಂಚಾಯಿತಿಗೆ ತಲುಪುತ್ತಿಲ್ಲ ಮತ್ತು ಜನರಿಗೆ ಸಮಸ್ಯೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಸಮಯ 10.30ಕ್ಕೆ ಆರಂಭವಾಗಬೇಕಾದ ಸಭೆಗೆ 11 ಗಂಟೆಯಾದರೂ ನೋಡಲ್ ಅಧಿಕಾರಿ ಆಗಮಿಸಿರಲಿಲ್ಲ. ಗ್ರಾಮಸ್ಥರು ಬಂದು ಅಧಿಕಾರಿಗಳನ್ನು ಕಾಯಬೇಕಾದ ದುಸ್ಥಿತಿ ಬಂದಿದೆ. ಇಲಾಖೆಯ ಅಧಿಕಾರಿಗಳು ಬರಬೇಕೆಂದು ಹೇಳಿದರೂ ಹಲವು ಸಭೆಯಿಂದ ಕಾಣಿಸುತ್ತಿಲ್ಲ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಮತ್ತೆ ಆಕ್ರೋಶಗೊಂಡ ನಾಗರೀಕರು ಸಭೆಯನ್ನು ಅಧಿಕಾರಿಗಳು ಬರುವ ದಿನವೇ ನಿಗದಿ ಪಡಿಸಿ ಮುಂದೂಡಿ ಎಂದು ಆಗ್ರಹಿಸಿದರು.
ತಡವಾಗಿ ಬಂದ ಪಿಡಿಒ ಅಶೋಕ್ ಮಾತನಾಡಿ ಕಳೆದ ಆರು ವರ್ಷಗಳಿಂದ ಇದೇ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ತಡವಾಗಿ ಬಂದರೂ ಸಭೆಯಲ್ಲಿ ಈ ರೀತಿಯ ಸಮಸ್ಯೆಗಳು ಆಗಿಲ್ಲ. ಸಭೆಗೆ ಬಾರದ ಅಧಿಕಾರಿಗಳ ಬಗ್ಗೆ ಹಿಂದೆಯೂ ತಾಲೂಕು ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಈಗಲೂ ಮಾಹಿತಿ ನೀಡಿ ಶೋಕಾಸ್ ನೋಟಿಸ್ ನೀಡುವಂತೆ ಕೋರಲಾಗುವುದು ಎಂದರು.
ನೋಡಲ್ ಅಧಿಕಾರಿ ಮಹೇಶ್ ಮಾತನಾಡಿ ಕಚೇರಿಗೆ ಬಂದು ಸಭೆಗೆ ಆಗಮಿಸುವಾಗ ತಡವಾಗಿದೆ. ಸಾರ್ವಜನಿಕರಿಂದ ಮೊದಲು ಬಂದು ಸಭೆಗೆ ತಯಾರಿ ನಡೆಸಬೇಕಾದ್ದು ನಮ್ಮ ಕರ್ತವ್ಯ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಲ್ಫ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.
ಸಭಾತ್ಯಾಗ!
ಗ್ರಾಮಸ್ಥರೊಬ್ಬರು ಸೋಲರ್ ಬೀದಿ ದೀಪ ಅಳವಡಿಕೆಯಲ್ಲಿ ಅವ್ಯವಹಾರ ಆಗಿರುವ ಬಗ್ಗೆ ಮಾಹಿತಿ ಕೇಳಿದ್ದಕ್ಕೆ ಸಮಪರ್ಕ ಉತ್ತರ ಸಿಕ್ಕಿರಲಿಲ್ಲ. ನೋಡಲ್ ಅಧಿಕಾರಿಯಲ್ಲಿ ಚರ್ಚಿಸುತ್ತಿದ್ದ ಸಮಯದಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ. ಪೊಲೀಸರು ಧಾರ್ಮಿಕ ಕೇಂದ್ರದ ಒಳಗೆ ಪಾದರಕ್ಷೆ ಹಾಕಿಕೊಂಡು ಬಂದರೆಂದು ಮಾತು ಆರಂಭವಾಗಿ ತಾರಕ್ಕೇರಿತು. ಈ ಸಂದರ್ಭ ಪೊಲೀಸರು ಅನುಚಿತವಾಗಿ ನಡೆದುಕೊಂಡರು ಎಂದು ಆರೋಪಿಸಿದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಬೆಂಬಲಿತ ನಾಗರೀಕರು ಸಭೆಗೆ ಬಹಿಷ್ಕಾರ ಹಾಕಿ ಸಭೆಯಿಂದ ಹೊರ ನಡೆದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here