ವಿಟ್ಲ: ಈಸ್ಲೇರಿ ಕರವೀರ ಮತ್ತು ಸರಕಾರಿ ಪ್ರೌಢ ಶಾಲೆ ಕಲ್ಲಂಗಳ ಕೇಪು ಸಹಯೋಗದ ಯಕ್ಷರಂಗ ಇದರ ವತಿಯಿಂದ ಜರಗಿದ ಉಚಿತ ಯಕ್ಷಗಾನ ತರಬೇತಿಯ ಮೊದಲ ತಂಡದ ಸಮಾರೋಪ ಮತ್ತು ಗಜ್ಜೆಹೆಜ್ಜೆ ಕಾರ್ಯಕ್ರಮವು ವಿಟ್ಲದ ಶ್ರೀ ಭಗವತೀ ದೇವಸ್ಥಾನದ ವಠಾರದಲ್ಲಿ ಯಶಸ್ವಿಯಾಗಿ ಜರಗಿತು. ಎಳೆಯ ನೂತನ ಕಲಾವಿದರು ಸುದರ್ಶನ ವಿಜಯ ಎಂಬ ಕಥಾ ಪ್ರಸಂಗವನ್ನು ಪ್ರದರ್ಶಿಸಿದರು.
ಪಾತ್ರಧಾರಿಗಳಾಗಿ ಕುಮಾರಿಯರಾದ ಸ್ವಾತಿ ಕೆ, ತ್ರಿಶಾಲಿ ವಿ, ವಿದ್ಯಾಶ್ರೀ ವೈ, ಸೌಜನ್ಯ ಸಿ.ಎಚ್, ಚಾರ್ವಿ ಪಿ. ರೈ, ಯಶಿಕಾ ಕೆ, ಹಸ್ತಾ ಕೆ, ಸಮೀಕ್ಷಾ ರೈ, ಕುಮಾರ ಸಂದೀಪ ನಾಯಕ್ ಮತ್ತು ಅತಿಥಿ ಕಲಾವಿದ ನಿತಿನ್ ಕುಮಾರ್ ಯೆರುಂಬು ಪಾಲ್ಗೊಂಡರು. ಹಿಮ್ಮೇಳದಲ್ಲಿ ಭಾಗವತರಾಗಿ ಉಂಡೆ ಮನೆ ಕೃಷ್ಣ ಭಟ್ ನೇರಳ ಕಟ್ಟೆ, ಮೃದಂಗವಾದಕರಾಗಿ ರಾಜಗೋಪಾಲ ಜೋಷಿ ಮೈರ, ಚೆಂಡೆ ವಾದಕರಾಗಿ ಅಭಿಷೇಕ್ ಚನಿಲ ಮತ್ತು ಕುಮಾರಸ್ವಾಮಿ ವಿಟ್ಲ ಸಹಕರಿಸಿದರು. ಪ್ರ್ರಸಾದನ ಮತ್ತು ವಸ್ತ್ರವಿನ್ಯಾಸದಲ್ಲಿ ಪುತ್ತೂರು ಗುರು ನರಸಿಂಹ ಯಕ್ಷಗಾನ ಮಂಡಳಿಯು ಸಹಕರಿಸಿತು.
ನಾಟ್ಯ, ಅಭಿನಯ ಮತ್ತು ಅರ್ಥಗಾರಿಕೆಯಲ್ಲಿ ಗುಣ ಮಟ್ಟವನ್ನು ಕಾಯ್ದುಕೊಂಡ ವಿದ್ಯಾರ್ಥಿಗಳನ್ನು ಪ್ರೇಕ್ಷಕ ವರ್ಗ ಮುಕ್ತ ಕಂಠದಿಂದ ಶ್ಲಾಘಿಸಿದುದು ಮತ್ತು ಎಳೆಯ ಪ್ರತಿಭೆಗಳಿಗೆ ಚೊಚ್ಚಲ ಪ್ರದರ್ಶನದಲ್ಲಿಯೇ ಅಭೂತಪೂರ್ವ ಕರತಾಡನ ದೊರೆತುದು ತರಬೇತಿಯ ಸಂಘಟಕರನ್ನು ಭಾವುಕರನ್ನಾಗಿಸಿತು. ನಲುವತ್ತು ಅವಧಿಗಳ ತರಬೇತಿಯನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿಯೇ ನೀಡಲಾಗಿದ್ದು ಸಹಕರಿಸಿದ ಎಲ್ಲ ಕಲಾಭಿಮಾನಿಗಳನ್ನು ಈಸ್ಲೇರಿಯ ಸಂಚಾಲಕ ಭಾಸ್ಕರ ಅಡ್ವಳ ವಂದಿಸಿದರಲ್ಲದೆ ಗೆಜ್ಜೆಹೆಜ್ಜೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಮತ್ತು ಹಿಮ್ಮೇಳದವರನ್ನು ಸ್ಮರಣಿಕೆ ನೀಡಿ ಗೌರವಿಸಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಅಧ್ಯಾಪಕ ಜನತಾ ಎಜುಕೇಷನ್ ಸೊಸೈಟಿಯ ಆಡಳಿತಾಧಿಕಾರಿ ರಮೇಶ ಎಂ ಬಾಯಾರ್ ಮತ್ತು ಕಲ್ಲಂಗಳ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಮಾಲತಿ ಕೆ ಎಳೆಯ ಕಲಾವಿದರಿಗೆ ಶುಭ ಹಾರೈಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here