ಉಜಿರೆ: ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿ ಮೂರ್ತಿಯ ಪ್ರತಿಷ್ಠಾಪಕರಾದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬದವರಿಂದ ಮಸ್ತಕಾಭಿಷೇಕದ ಮೂರನೆ ದಿನವಾದ ಸೋಮವಾರ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಿತು.
ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಿಂದ ರತ್ನಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ಮಸ್ತಕಾಭಿಷೇಕ ನಡೆಯಿತು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಮಸ್ತಕಾಭಿಷೇಕ ನಡೆಯಿತು.
ಜಲಾಭಿಷೇಕದ ಬಳಿಕ ಬೆಳ್ತಂಗಡಿಯ ಶ್ರೀನಿವಾಸ ಶೆಟ್ಟಿ ಮತ್ತು ಕುಟುಂಬಸ್ಥರು ಇಕ್ಷುರಸದ ಅಭಿಷೇಕ ನಡೆಸಿ ಪುಣ್ಯಭಾಗಿಗಳಾದರು.
ವೇಣೂರಿನ ಸುನಂದಾದೇವಿ ಇಂದ್ರ ಕ್ಷೀರಾಭಿಷೇಕ ನಡೆಸಿದರು.
ಕಳಸದ ಧರಣೇಂದ್ರಯ್ಯ ಕಲ್ಕೋಡು ಕಲ್ಕಚೂರ್ಣ ಅಭಿಷೇಕ ನೆರವೇರಿಸಿದರು.

ಬೆಂಗಳೂರಿನ ಶ್ರೇಷ್ಠ ಜೈನ್ ಕಷಾಯ ಅಭಿಷೇಕ ಮಾಡಿದರೆ ಬೆಂಗಳೂರಿನ ಎಂ.ಎಸ್. ಮೃತ್ಯುಂಜಯ ಕೇಸರಿ ಅಭಿಷೇಕ ನೆರವೇರಿಸಿದರು.
ಮೂಡಬಿದ್ರೆಯ ರೋಹಿಣಿ ಆದಿರಾಜ್ ಕಷಾಯ ಅಭಿಷೇಕ ಮಾಡಿದರು.
ಮಂಗಳೂರಿನ ರತ್ನಾಕರ ಜೈನ್, ಮನ್ಮಥ ಕುಮಾರ್ ನೆಲ್ಲಿಕಾರು, ಬೆಂಗಳೂರಿನ ಸೋಹನ್ ಲಾಲ್ ಜೈನ್ ಮತ್ತು ಹುಬ್ಬಳ್ಳಿಯ ಪಂಕಜ ಜೈನ್ ಚತುಷ್ಕೋನ ಅಭಿಷೇಕ ಮಾಡಿ ಪುಣ್ಯಭಾಗಿಗಳಾದರು.
ಬೆಳ್ತಂಗಡಿಯ ಶಶಿಕಿರಣ ಜೈನ್ ಶ್ರೀಗಂಧದ ಅಭಿಷೇಕ ಮಾಡಿದರೆ, ಮೂಡಬಿದ್ರೆಯ ಸರೋಜ ಗುಣಪಾಲ ಜೈನ್ ಚಂದನದ ಅಭಿಷೇಕ ನೆರವೇರಿಸಿದರು.
ಪೂಜ್ಯ ಪುಷ್ಪದಂತ ಸಾಗರ ಮುನಿಮಹಾರಾಜರು ಮಂಗಲ ಪ್ರವಚನ ನೀಡಿ ಬಾಹುಬಲಿಯ ದರ್ಶನ, ಆರಾಧನೆಯಿಂದ ಪಾಪಕರ್ಮಗಳ ಕೊಳೆ ಕಳೆಯುತ್ತದೆ. ಪುಣ್ಯ ಸಂಚಯವಾಗುತ್ತದೆ. ಬಾಹುಬಲಿಯ ತತ್ವಗಳಾದ ಅಹಿಂಸೆ, ತ್ಯಾಗ, ಸಂಯಮವನ್ನು ನಾವು ಜೀವನದಲ್ಲಿ ಪಾಲಿಸಬೇಕು ಎಂದು ಅವರು ಸಲಹೆ ನೀಡಿದರು.
ಮುನಿ ಸಂಘದವರು ಪಾವನ ಸಾನ್ನಿಧ್ಯ ವಹಿಸಿದರು.
ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಮೂಡಬಿದ್ರೆಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತರಿದ್ದರು.
ಶಾಸಕ ಹರೀಶ್ ಪೂಂಜ, ಮಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಕೆ. ಪ್ರದೀಪ್ ಕುಮಾರ್ ಕಲ್ಕೂರ, ಕೋಟ ಶ್ರೀನಿವಾಸ ಪೂಜಾರಿ ಇದ್ದರು.
ಅಡಿಕೆ ಹಾಳೆಯಿಂದ ತಯಾರಿಸಿದ ಬೀಸಣಿಕೆಯನ್ನು ಉಚಿತವಾಗಿ ವಿತರಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದವರು 5000 ಲೀಟರ್ ಮಜ್ಜಿಗೆಯನ್ನು ಭಕ್ತರಿಗೆ ಉಚಿತವಾಗಿ ವಿತರಿಸಿದರು.
ಬೆಳಗಾವಿಯ ಚೌಗುಲೆ ಹಾಗೂ ಹೊರನಾಡು ಜಯಶ್ರೀ ಮತ್ತು ಬಳಗದವರ ಸುಶ್ರಾವ್ಯ ಜಿನ ಭಕ್ತಿಗೀತೆಗಳ ಗಾಯನ ವಿಶೆಷ ಮೆರುಗನ್ನು ನೀಡಿತು.
ಸಂಜೆ ಧ್ವಜಾರೋಹಣ, ಕುಂಕುಮೋತ್ಸವ, ಕಂಕಣ ವಿಸರ್ಜನೆ ಮತ್ತು ತೋರಣ ವಿಸರ್ಜನೆಯೊಂದಿಗೆ ಮಸ್ತಕಾಭಿಷೇಕ ಸಮಾಪನಗೊಂಡಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here