Wednesday, April 10, 2024

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಧರ್ಮಸ್ಥಳದಲ್ಲಿ ಸಮವಸರಣ ವೈಭವ: ಏನು ರಮ್ಯ ಏನು ಸೌಮ್ಯ !

ಉಜಿರೆ: ಬೆಂಗಳೂರಿನ ಚಿತ್ರಾ ಆರ್ಟ್ಸ್ ಸ್ಟುಡಿಯೊದ ಜಿನೇಂದ್ರ ಅವರ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ರಚಿಸಲಾದ ವರ್ತುಲಾಕಾರದ ಆಕರ್ಷಕ ವಿನ್ಯಾಸದ ಸಮವಸರಣದಲ್ಲಿ ಶುಕ್ರವಾರ ವಿಶೇಷ ಸಂಭ್ರಮ-ಸಡಗರ.
ತೀರ್ಥಂಕರರು ತಮ್ಮ ದಿವ್ಯ ಧ್ವನಿಯಿಂದ ಉಪದೇಶ ನೀಡುವ ಧರ್ಮಸಭೆಗೆ ಸಮವಸರಣ ಎನ್ನುತ್ತಾರೆ. ಇಲ್ಲಿ ಉಪದೇಶಾಮೃತ ಪಡೆಯಲು ಸರ್ವರಿಗೂ ಸಮಾನ ಅವಕಾಶ ಇರುವುದರಿಂದ ಇದಕ್ಕೆ ಸಮವಸರಣ ಎನ್ನುತ್ತಾರೆ.
ಬೀಡಿನಿಂದ (ಹೆಗ್ಗಡೆಯವರ ನಿವಾಸ) ಭವ್ಯ ಮೆರವಣಿಗೆಯಲ್ಲಿ ಧರ್ಮ ಚಕ್ರ ಹೊತ್ತು ಸರ್ವಾಹ್ನ ಯಕ್ಷ ದೇವರ ಮೂತಿಯನ್ನು ಸಮವಸರಣ ವೇದಿಕೆಗೆ ಕರೆ ತರಲಾಯಿತು.

ಸಮವಸರಣ ಮಂಟಪದಲ್ಲಿ ಚೆಂಡೆವಾದನದೊಂದಿಗೆ ಸರ್ವಾಹ್ನ ಯಕ್ಷ ಉತ್ಸವ ನಡೆಯಿತು.
ಆದಿನಾಥ ತೀರ್ಥಂಕರರ ಸಮವಸರಣದಲ್ಲಿ ಎಲ್ಲೆಲ್ಲೂ ಸಂಭ್ರಮ, ಸಡಗರ. ಓಂ ಕಾರ ದಿವ್ಯ ಧ್ವನಿ. ಪಂಚ ನಮಸ್ಕಾರ ಮಂತ್ರ ಪಠಣ. ಜಿನ ಭಕ್ತಿಗೀತೆಗಳ ಸುಶ್ರಾವ್ಯ ಗಾಯನ. ನೃತ್ಯ ಸಂಭ್ರಮ, ಯಕ್ಷಗಾನ ಶೈಲಿಯ ಕುಣಿತ.
“ಏನು ರಮ್ಯ, ಏನು ಸೌಮ್ಯ” ಎಂಬ ಯಕ್ಷಗಾನ ಶೈಲಿಯ ಹಾಡಿಗೆ 32 ಮಂದಿ ಹಿರಿಯ ಹಾಗೂ ಕಿರಿಯ ಯಕ್ಷಗಾನ ಕಲಾವಿದರು ಸಮವಸರಣದ ಸುತ್ತ ನರ್ತನ ಮಾಡಿ ಸಮವಸರಣದ ಸೊಗಡನ್ನು ಹೆಚ್ಚಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಬಂದ 250 ಮಂದಿ ಶ್ರಾವಕ -ಶ್ರಾವಕಿಯರು ಜಿನ ಭಜನೆಗಳನ್ನು ಸುಶ್ರಾವ್ಯವಾಗಿ ಹಾಡಿ ಸಮವಸರಣಕ್ಕೆ ವಿಶೇಷ ಮೆರುಗು ನೀಡಿದರು.
ಆಚಾರ್ಯ ಶ್ರೀ 108 ವರ್ಧಮಾನ ಸಾಗರ ಮುನಿಮಹಾರಾಜರು ಮತ್ತು ಆಚಾರ್ಯ ಶ್ರೀ 108 ಪುಷ್ಪದಂತ ಮುನಿಮಹಾರಾಜರು ಹಾಗೂ ಎಪ್ಪತ್ತು ಮಂದಿ ದಿಗಂಬರ ಮುನಿಗಳು, ಕ್ಷುಲ್ಲಕರು, ಮಾತಾಜಿಯವರು ದಿವ್ಯ ಸಾನ್ನಿಧ್ಯ ಒಂದೆಡೆಯಾದರೆ, ಇನ್ನೊಂದೆಡೆ ಶ್ರಾವಕ-ಶ್ರಾವಿಕೆಯರ ಗಡಣ.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಶ್ರದ್ಧಾ ಮತ್ತು ಅಮಿತ್ ಹಾಗೂ ಕುಟುಂಬ ವರ್ಗದವರು ಅಷ್ಟವಿಧಾರ್ಚನೆ ಪೂಜೆಯಲ್ಲಿ ಭಾಗವಹಿಸಿದರು.
ಭರತ ಚಕ್ರವರ್ತಿಯಾಗಿ ಡಿ. ಶ್ರೇಯಸ್ ಕುಮಾರ್ ಮತ್ತು ರಾಣಿ ಸುಭದ್ರ ದೇವಿಯಾಗಿ ಸಂಹಿತಾ ಸಮಾರಂಭದ ಶೊಭೆಯನ್ನು ಹೆಚ್ಚಿಸಿದರು.
ಸಮವಸರಣಕ್ಕೆ ಬಂದ ಭರತ ಚಕ್ರವರ್ತಿ ತನ್ನ ಸಹೋದರ ಬಾಹುಬಲಿ ಕಠಿಣ ತಪಸ್ಸು ಮಾಡಿದರೂ ಕೇವಲಜ್ಞಾನ ಪ್ರಾಪ್ತಿ ಏಕೆ ಆಗಲಿಲ್ಲ ಎಂಬ ತನ್ನ ಮನದ ಶಂಕೆಯನ್ನು ವ್ಯಕ್ತ ಪಡಿಸುತ್ತಾನೆ.
ಆತ ತಪಸ್ಸಿಗೆ ನಿಂತ ನೆಲ ಭರತ ಚಕ್ರವರ್ತಿಗೆ ಸೇರಿದೆ ಎಂಬ ಕಷಾಯ ಆತನ ಮನದಲ್ಲಿದೆ. ನೀನು ಆತನ ಪಾದಕ್ಕೆರಗಿ ಕ್ಷಮೆ ಕೇಳು ಎಂದು ಓಂ ಕಾರ ಧ್ವನಿಯಿಂದ ಕೇಳಿ ಬರುತ್ತದೆ. ಭರತ ಚಕ್ರವರ್ತಿ ಬಾಹುಬಲಿಯ ಪಾದಕ್ಕೆರಗಿ ಕ್ಷಮೆಯಾಚನೆ ಮಾಡಿದಾಗ ಆತನಿಗೆ ಕೇವಲಜ್ಞಾನ ಪ್ರಾಪ್ತಿಯಾಗುತ್ತದೆ.
ಅಷ್ಟ ವಿಧಾರ್ಚನೆ ಪೂಜೆಗೆ ಮೋಹನ್, ಧರ್ಮರಾಜ್, ಭಗೀರಥ, ಸೌಮ್ಯ ಹಾಗೂ ಹೊರನಾಡ ಜಯಶ್ರೀ ಮತ್ತು ಧರಣೇಂದ್ರ ಜೈನ್ ಬಳಗದವರ ಸುಶ್ರಾವ್ಯ ಗಾಯನ ವಿಶೇಷ ಶೋಭೆಯನ್ನು ನೀಡಿತು.
ಗಣಧರರಾಗಿ ಆಚಾರ್ಯ ಶ್ರೀ 108 ವರ್ಧಮಾನ ಸಾಗರ ಮಹಾರಾಜ್ ಮತ್ತು ಆಚಾರ್ಯ ಶ್ರೀ 108 ಪುಷ್ಪದಂತ ಸಾಗರ್ ಮಹಾರಾಜ್ ಶ್ರಾವಕ-ಶ್ರಾವಕಿಯರ ಪ್ರಶ್ನೆಗಳಿಗೆ ಉತ್ತರ ನೀಡಿ ಶಂಕೆ ನಿವಾರಿಸಿದರು.


ಭಟ್ಟಾರಕರುಗಳಿಂದ ಮಂಗಲ ಪ್ರವಚನ ಶ್ರಾವಕರ ಗಡಣದ ಜ್ಞಾನದಾಹವನ್ನು ಇಂಗಿಸಿತು.
ಕನಕಗಿರಿಯ ಭುವನಕೀರ್ತಿ ಭಟ್ಟಾರಕರು ಮಾತನಾಡಿ ಭಗವಂತನ ಉಪದೇಶ ಸಾರವನ್ನು ಋಷಿ-ಮುನಿಗಳು ಗ್ರಂಥಗಳಲ್ಲಿ ಸಾದರ ಪಡಿಸಿದ್ದಾರೆ. ಸಮವಸರಣದಲ್ಲಿ ತೀರ್ಥಂಕರರ ಧರ್ಮೋಪದೇಶದಿಂದ ನಾವು ಪಾವನರಾಗುತ್ತೇವೆ. ಧರ್ಮಸ್ಥಳಕ್ಕೆ ಬಂದವರ ದುಃಖ-ದುಮ್ಮಾನಗಳೆಲ್ಲ ದೂರವಾಗಿ ಸಂತೋಷ, ನೆಮ್ಮದಿ ಸಿಗುತ್ತದೆ. ಸಮವಸರಣದಲ್ಲಿದ್ದವರೆಲ್ಲ ಭವ್ಯಾತ್ಮರು, ದಿವ್ಯಾತ್ಮರು ಎಂದು ಅವರು ಅಭಿಪ್ರಾಯ ಪಟ್ಟರು.
ನರಸಿಂಹರಾಜಪುರದ ಲಕ್ಷೀಸೇನ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಧರ್ಮಸ್ಥಳವು ನಾಡಿನ ಜಾಗೃತ ಧರ್ಮಕ್ಷೇತ್ರವಾಗಿದೆ. ತಪ್ಪುಗಳಾಗುವುದು ಸಹಜ. ಆದರೆ ತಪ್ಪನ್ನು ತಿದ್ದಿಕೊಂಡು ಸುಧಾರಣೆ ಮಾಡಿದರೆ ಜೀವನ ಪಾವನವಾಗುತ್ತದೆ. ಸಮವಸರಣದಿಂದ ಧರ್ಮಜಾಗೃತಿಯಾಗಿ ನಮ್ಮ ಜ್ಞಾನ ಕ್ಷಿತಿಜ ವಿಸ್ತಾರವಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.
ಇಂದು ಜನರು ಗುರುಗಳನ್ನು ದೂರ ಮಾಡಿ “ಗೂಗಲ್”ಗೆ ಮೊರೆ ಹೋಗುತ್ತಾರೆ ಎಂದು ಸ್ವಾಮೀಝಿ ಕಳವಳ ವ್ಯಕ್ತ ಪಡಿಸಿದರು.
ಅರಹಂತಗಿರಿ ಜೈನಮಠದ ಧವಳಕೀರ್ತಿ ಭಟ್ಟಾರಕರು ಮಾತನಾಡಿ, ಸಮವಸರಣದಲ್ಲಿ ನಮ್ಮ ಆಧ್ಯಾತ್ಮಿಕ ಶಕ್ತಿ ಹೆಚ್ಚಾಗಿ ಮುಕ್ತಿ ಸಿಗುತ್ತದೆ. ನಂಬಿಕೆಯೇ ಜೀವನವಾಗಿದೆ. ದೇವರ ದರ್ಶನ, ಗುರುಗಳ ಸೇವೆ ಹಾಗೂ ಸ್ವಾಧ್ಯಾಯದಿಂದ ಪಾಪಕರ್ಮಗಳ ನಾಶವಾಗುತ್ತದೆ ಎಂದು ಅವರು ಹೇಳಿದರು.
ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿ ಜೈನ ಮಠದ ಭಾನುಕೀರ್ತಿ ಭಟ್ಟಾರಕರು ಉಪಸ್ಥಿತರಿದ್ದರು.

ರತ್ನಗಿರಿಯಲ್ಲಿ:

ಉಜಿರೆ: ರತ್ನಗಿರಿಯಲ್ಲಿ (ಬಾಹುಬಲಿ ಬೆಟ್ಟ) ಶುಕ್ರವಾರ ಬಿಂಬ ಶುದ್ಧಿ ವಿಧಾನ, 216 ಕಲಶಗಳಿಂದ ಬಾಹುಬಲಿ ಮೂರ್ತಿಗೆ ಪಾದಾಭಿಷೇಕ, ಸಿದ್ಧಚಕ್ರ ಆರಾಧನೆ, ಧ್ವಜ ಪೂಜೆ, ಶ್ರೀ ಬಲಿ ವಿಧಾನ ಮತ್ತು ಮಹಾ ಮಂಗಳಾರತಿ ನಡೆಯಿತು.
ಇಂದು ಮಹಾಮಸ್ತಕಾಭಿಷೇಕ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬಸ್ಥರಿಂದ ಶನಿವಾರ ಬೆಳಿಗ್ಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ 8.45ರ ಮೀನ ಲಗ್ನದಲ್ಲಿ ಬಾಹುಬಲಿ ಸ್ವಾಮಿಗೆ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯುತ್ತದೆ.
ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಿದ್ದು, ರತ್ನಗಿರಿಗೆ ಹೋಗಿ ಮಸ್ತಕಾಭಿಷೇಕ ನೋಡಲು ಉಚಿತ ವಾಹನ ಸೌಲಭ್ಯವಿದೆ.

ಮೆರವಣಿಗೆಯಲ್ಲಿ ಭಾಗವಹಿಸಿದ ಚೆನ್ನದಾಸರ ಗಡಣ

ಉಜಿರೆ: ಭರತ ಚಕ್ರವರ್ತಿಯ ದಿಗ್ವಿಜಯ ಮೆರವಣಿಗೆಯಲ್ಲಿ 150 ಮಂದಿ ಚೆನ್ನದಾಸರು ಶಂಖ ಮತ್ತು ಜಾಗಟೆಯೊಂದಿಗೆ ಭಾಗವಹಿಸಿ, ಮೆರವಣಿಗೆಯ ಸೊಗಡು ಹೆಚ್ಚಿಸಿದರು.

More from the blog

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಏ.10ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ…. ರಿಸಲ್ಟ್​ ಚೆಕ್ ಮಾಡೋದು ಹೇಗೆ?

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ನಾಳೆ ಪ್ರಕಟಿಸಲಾಗುತ್ತಿದೆ. ಎಲ್ಲ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಕ್ತಾಯವಾದ ಹಿನ್ನಲೆ ನಾಳೆ ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಂದಾಗಿದೆ. ನಾಳೆ...

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...

ಅಕ್ರಮ ಮರಳು ಸಾಗಾಟ: ವಾಹನ ಸಹಿತ ಆರೋಪಿ ಅರೆಸ್ಟ್

ಬೆಳ್ತಂಗಡಿ: ಅಕ್ರಮ ಮರಳು ಸಾಗಾಟದ ಎರಡು ಪಿಕಪ್‌ ವಾಹನ ಹಾಗೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ವೇಣೂರು ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವೇಣೂರಿನ ಪಲ್ಗುಣಿ ನದಿಯಲ್ಲಿ ಅಕ್ರಮವಾಗಿ ಮರಳು ಕಳ್ಳತನ ಮಾಡಿ ಸಾಗಾಟ ಮಾಡುತ್ತಿರುವುದಾಗಿ...