Wednesday, October 18, 2023

’ಮಗಳಿಗೊಂದು ಪತ್ರ ಭಾಗ -2’ ಹಾಗೂ ಬಾಹುಬಲಿಯ ಕುರಿತ ’ಮಹಾಯಾನ’ ಕೃತಿಗಳ ಬಿಡುಗಡೆ

Must read

ಧರ್ಮಸ್ಥಳ: ಹೇಮಾವತಿ ಹೆಗ್ಗಡೆಯವರು ’ಮಂಜುವಾಣಿ’ ಮಾಸಪತ್ರಿಕೆಗಾಗಿ ಬರೆಯುವ ಅಂಕಣ ಬರಹಗಳ ಸಂಗ್ರಹ ’ಮಗಳಿಗೊಂದು ಪತ್ರ – ಭಾಗ 2’ ಮತ್ತು ಧರ್ಮಸ್ಥಳದ ಭಗವಾನ್ ಬಾಹುಬಲಿಯ ಕುರಿತಾದ ಕಥೆ-ಚಿತ್ರಗಳ ಸಂಗ್ರಹವಿರುವ ’ಮಹಾಯಾನ – ಇದು ಕಲ್ಲು ಹೇಳಿದ ಕಥೆ’ ಎಂಬ ಎರಡು ಕೃತಿಗಳು ಧರ್ಮಸ್ಥಳದಲ್ಲಿ ಫೆಬ್ರುವರಿ 15 ರಂದು ಬಿಡುಗಡೆಗೊಂಡವು.
ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಆಯೋಜಿತವಾಗಿದ್ದ ಸಮವಸರಣ ಪೂಜೆಯ ವೇಳೆ ಪರಮಪೂಜ್ಯ ಆಚಾರ್ಯ ಶ್ರೀ 108 ವರ್ಧಮಾನ ಸಾಗರ್‌ಜೀ ಮುನಿಮಹಾರಾಜ್ ಅವರು ’ಮಹಾಯಾನ’ ಹಾಗೂ ಆಚಾರ್ಯ ಶ್ರೀ ವಾತ್ಸಲ್ಯವಾರಿಧಿ 108 ಪುಷ್ಪದಂತ ಸಾಗರ ಮುನಿಮಹಾರಾಜ್ ಅವರು ’ಮಗಳಿಗೊಂದು ಪತ್ರ ಭಾಗ-2’ ಕೃತಿಗಳನ್ನು ಲೋಕಾರ್ಪಣೆ ಮಾಡಿದರು.


’ಮಗಳಿಗೊಂದು ಪತ್ರ ಭಾಗ – 2’ ಕೃತಿಯನ್ನು ಡಾ. ಬಿ. ಯಶೋವರ್ಮ ಅವರು ಸಂಪಾದಿಸಿದ್ದು, ಇದರಲ್ಲಿ ಹೇಮಾವತಿ ಹೆಗ್ಗಡೆಯವರು ಬರೆದಿರುವ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಧಾರ್ಮಿಕ ಹೀಗೆ ಅನೇಕ ಸಕಾಲಿಕ ವಿಷಯಗಳ ಕುರಿತಾದ ಅಂಕಗಳ ಸಂಗ್ರಹವಿದೆ. ಒಟ್ಟು ೪೨ ಬರಹಗಳ ಈ ಮಾಲಿಕೆಯಲ್ಲಿ ಮೌಲಿಕ ವಿಷಯಗಳನ್ನು ಸರಳ ಭಾಷೆಯಲ್ಲಿ ಎಲ್ಲಾ ವರ್ಗದವರಿಗೂ ಅರ್ಥವಾಗುವ ರೀತಿಯಲ್ಲಿ ನಿರೂಪಣೆ ಮಾಡಲಾಗಿದೆ.
’ಮಹಾಯಾನ – ಇದು ಕಲ್ಲು ಹೇಳಿದ ಕಥೆ’ ಎಂಬ ಪುಸ್ತಕದಲ್ಲಿ ಧರ್ಮಸ್ಥಳದ ಬಾಹುಬಲಿ ಕಾರ್ಕಳದಿಂದ ಧರ್ಮಸ್ಥಳಕ್ಕೆ ಬಂದ ಬಗೆಯನ್ನು ಸಣ್ಣ-ಸಣ್ಣ ಕಥೆಯ ರೂಪದಲ್ಲಿ ನಿರೂಪಿಸಲಾಗಿದೆ. ಶ್ರೀಮತಿ ಸೋನಿಯಾ ಯಶೋವರ್ಮ ಅವರ ಪರಿಕಲ್ಪನೆಯಲ್ಲಿ, ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾದ ಸುನಿಲ್ ಹೆಗ್ಡೆ ಹಾಗು ಮಾಧವ ಹೊಳ್ಳ ಅವರ ನಿರೂಪಣೆಯಲ್ಲಿ ’ಮಹಾಯಾನ’ ಪ್ರಕಟವಾಗಿದೆ. ಪುಸ್ತಕದಲ್ಲಿ ಕಥೆ ಹಾಗೂ ಅದಕ್ಕೊಪ್ಪುವ ಅಪರೂಪದ ಛಾಯಾಚಿತ್ರಗಳನ್ನು ನೀಡಲಾಗಿದೆ.
ಡಿ. ವೀರೇಂದ್ರ ಹೆಗ್ಗಡೆಯವರು ಬಾಹುಬಲಿಯನ್ನು ಕಾರ್ಕಳದಿಂದ ಸಾಗಿಸಿದ ಸಾಧನೆಯ ಕುರಿತ ೫೦ ಐತಿಹಾಸಿಕ ಘಟನೆಗಳನ್ನು ’ಮಹಾಯಾನ’ ಪುಸ್ತಕ ಐತಿಹಾಸಿಕ ಘಟನೆಗಳನ್ನು ಕಥೆಯ ರೂಪದಲ್ಲಿ ಕಟ್ಟಿಕೊಡುವುದರಿಂದ ಇಂದಿನ ಹಾಗೂ ಮುಂದಿನ ತಲೆಮಾರಿನ ಎಲ್ಲರಿಗೂ ಧರ್ಮಸ್ಥಳ ಬಾಹುಬಲಿಯ ಕಥೆ ತಲುಪುತ್ತದೆ ಎಂದು ’ಮಹಾಯಾನ’ಕ್ಕೆ ಬರೆದ ಮುನ್ನುಡಿಯಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಉಲ್ಲೇಖಿಸಿದ್ದಾರೆ.
ಕಾರ್ಯಕ್ರಮದಲ್ಲಿ ಹೆಗ್ಗಡೆ ಕುಟುಂಬಸ್ಥರು, ಮುನಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ: ಧೃತಿ ಅಂಚನ್, ಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ, ಎಸ್.ಡಿ.ಎಂ ಕಾಲೇಜು, ಉಜಿರೆ
ಚಿತ್ರ: ಧನ್ಯಾ ಹೊಳ್ಳ, ದ್ವಿತೀಯ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ, ಎಸ್.ಡಿ.ಎಂ ಕಾಲೇಜು, ಉಜಿರೆ

More articles

Latest article