Saturday, October 21, 2023

ಧರ್ಮಸ್ಥಳ: ಪಂಚ ಮಹಾ ವೈಭವ: ಭರತನ ಆಸ್ಥಾನ ವೈಭವ, ಚಕ್ರರತ್ನ ಉದಯ, ಸಂಭ್ರಮದ ದಿಗ್ವಿಜಯ ಮೆರವಣಿಗೆ

Must read

ಉಜಿರೆ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಅಂಗವಾಗಿ ಬುಧವಾರ ಪಂಚಮಹಾವೈಭವ ಮಂಟಪದಲ್ಲಿ ಭರತನ ಆಸ್ಥಾನ ವೈಭವ, ಆಯುಧಾಗಾರದಲ್ಲಿ ಚಕ್ರರತ್ನ ಉದಯ ಹಾಗೂ ಧರ್ಮಸ್ಥಳದಿಂದ ಶಾಂತಿವನದ ವರೆಗೆ ದಿಗ್ವಿಜಯ ಮೆರವಣಿಗೆಯ ರೂಪಕ ಪ್ರದರ್ಶನ ಅತ್ಯಂತ ಆಕರ್ಷಕವಾಗಿ ಮೂಡಿ ಬಂತು.
ಭರತನ ಉತ್ತಮ ಆಡಳಿತ ವ್ಯವಸ್ಥೆಯಿಂದಾಗಿ ರಾಜ್ಯದಲ್ಲಿ ಎಲ್ಲೆಲ್ಲೂ ಸುಖ-ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸುತ್ತದೆ.
ಸಾಹಿತಿಗಳಿಗೆ, ಕಲಾವಿದರಿಗೆ, ಕವಿಗಳಿಗೆ, ನೃತ್ಯ ಕಲಾವಿದರಿಗೆ ಸರ್ವ ರೀತಿಯ ಪ್ರೋತ್ಸಾಹ, ಸಹಕಾರ ನೀಡಲಾಗುತ್ತದೆ. ನಿತ್ಯವೂ ಆಸ್ಥಾನದಲ್ಲಿ ಸಂಗೀತ, ಸಾಹಿತ್ಯ, ನೃತ್ಯ ಕಲೆ, ಆಧ್ಯಾತ್ಮ ಚಿಂತನೆಗೆ ಅವಕಾಶವಿದೆ. ಲೌಕಿಕ ಸುಖ-ಭೋಗದೊಂದೊಗೆ ಭರತ ಆಧ್ಯಾತ್ಮಿಕ ಸಾಧಕನೂ ಆಗಿದ್ದಾರೆ. ಆದುದರಿಂದಲೆ ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿ ಎಂದೇ ಆತ ಚಿರಪರಿಚಿತ. ತ್ಯಾಗ-ಭೋಗದ ಸಮನ್ವಯ ಜೀವನ ಆತನದ್ದಾಗಿದೆ.


ಒಂದು ದಿನ ಆತನಿಗೆ ಮೂರು ಶುಭ ಸುದ್ದಿಗಳು ಏಕ ಕಾಲಕ್ಕೆ ಸಿಗುತ್ತವೆ. ತನ್ನ ತಂದೆ ವೃಷಭನಾಥರಿಗೆ ಕೇವಲ ಜ್ಞಾನ ಪ್ರಾಪ್ತಿ, ಆಯುಧಾಗಾರದಲ್ಲಿ ಚಕ್ರರತ್ನ ಉದಯ ಮತ್ತು ಆತನ ರಾಣಿ ಗಂಡು ಮಗುವಿಗೆ ಜನ್ಮ ನೀಡಿರುವುದು.
ಭರತನು ಮೊದಲು ಕೇವಲ ಜ್ಞಾನ ಪ್ರಾಪ್ತಿ ಮಾಡಿದ ವೃಷಭನಾಥರ ದರ್ಶನ ಮಾಡುತ್ತಾನೆ. ಬಳಿಕ ಆಯುಧಾಗಾರಕ್ಕೆ ಹೋಗಿ ಚಕ್ರರತ್ನವನ್ನು ಪೂಜಿಸುತ್ತಾನೆ. ಆಂದಿನಿಂದ ಒಂಬತ್ತು ದಿನಗಳ ವರೆಗೆ ಉತ್ಸವವನ್ನು ನವರಾತ್ರಿ ಉತ್ಸವವಾಗಿ ಆಚರಿಸಬೇಕು ಎಂದು ಪ್ರಜೆಗಳಿಗೆ ಆದೇಶ ನೀಡುತ್ತಾನೆ.
ನಂತರ ಭರತ ರಾಣಿ ಮತ್ತು ಮಗನನ್ನು ನೋಡಲು ಹೋಗುತ್ತಾನೆ. ಮಗನಿಗೆ ಅರ್ಕಕೀರ್ತಿ ಎಂದು ನಾಮಕರಣ ಮಾಡುತ್ತಾನೆ.
ಬಸದಿಯಲ್ಲಿ ದೇವರ ದರ್ಶನ ಮಾಡಿ, ಗುರು-ಹಿರಿಯರಿಗೆ ವಂದಿಸಿ ಭರತ ಕ್ಷತ್ರಿಯ ಧರ್ಮವನ್ನು ರಾಜ ಧರ್ಮವನ್ನಾಗಿ ಮಾಡಿ, ಸತ್ಯ, ಧರ್ಮ, ನ್ಯಾಯ, ನೀತಿಯ ಪಾಲನೆಯೊಂದಿಗೆ ಚಕ್ರರತ್ನವನ್ನು ಮುಂದಿಟ್ಟುಕೊಂಡು ಅಹಿಂಸಾತ್ಮಕ ದಿಗ್ವಿಜಯಕ್ಕೆ ಹೊರಡುತ್ತಾನೆ.
ವೈಭವೋಪೇತ ಮೆರವಣಿಗೆಯೊಂದಿಗೆ ಪಂಚಮಹಾವೈಭವ ಮಂಟಪದಿಂದ ಹೊರಟ ದಿಗ್ವಿಜಯ ಶಾಂತಿವನ ತಲುಪುತ್ತದೆ.
ಮಾರ್ಗ ಇಕ್ಕೆಲಗಳಲ್ಲಿಯೂ ಸಹಸ್ರಾರು ಮಂದಿ ದಿಗ್ವಿಜಯದ ವೈಭವ ನೋಡಿ ಆಶ್ಚರ್ಯ ಚಕಿತರಾದರು.
ಭರತನ ರಾಜಗಾಂಭೀರ್ಯದ ನಡೆ-ನುಡಿ, ಚಕ್ರರತ್ನದ ಸೊಗಡು, ವೇಷ ಭೂಷಣಗಳು, ಕಲಾಮೇಳಗಳು, ಜಾನಪದ ಶೈಲಿಯ ವಾಲಗ, ಕೊಂಬು, ಕಹಳೆ, ನಗಾರಿ, ಡೊಳ್ಳುಕುಣಿತ, ಕೇರಳದ ಚೆಂಡೆವಾದನ, ಸೈನಿಕರು, ನಾಸಿಕ್ ಬ್ಯಾಂಡ್, ಸೈನಿಕರು ದಿಗ್ವಿಜಯ ಮೊರವಣಿಗೆಗೆ ವಿಶೇಷ ಮೆರುಗನ್ನು ನೀಡಿದವು. ಮೂವತ್ತಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿದವು.
ಸೈನಿಕರು (100 ಮಂದಿ), ಜಟ್ಟಿಗಳು (100 ಮಂದಿ) ಕಾಡು ಮನುಷ್ಯರು (102 ಮಂದಿ), ಕೇರಳದ ಚೆಂಡೆ ವಾದನದವರು (200 ಮಂದಿ) ನಾಸಿಕ್ ಬ್ಯಾಂಡ್ (30 ಮಂದಿ), ತಾಲೀಮು (10 ಮಂದಿ), ಕತ್ತಿ, ಗುರಾಣಿ ಹಿಡಿದ ಸೈನಿಕರು (100 ಮಂದಿ) ದೇವರ ಟ್ಯಾಬ್ಲೊ (10 ಮಂದಿ) ಧ್ವಜ (50 ಮಂದಿ) ಇತ್ಯಾದಿ ಚಿತ್ತಾಕರ್ಷಕವಾಗಿದ್ದವು.

More articles

Latest article