Thursday, October 26, 2023

ಅಯೋಧ್ಯೆಯಲ್ಲಿ ಆದಿನಾಥ ಮಹಾರಾಜರಿಂದ ಮಕ್ಕಳಿಗೆ ಶಿಕ್ಷಣ, ಸಾಮೂಹಿಕ ವ್ರತೋಪದೇಶ

Must read

ಧರ್ಮಸ್ಥಳ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಅಂಗವಾಗಿ ಮಂಗಳವಾರ ಅಯೋಧ್ಯೆಯ ಪುಣ್ಯ ಭೂಮಿಯಲ್ಲಿ ಪಂಚ ಮಹಾ ವೈಭವ ಮಂಟಪದಲ್ಲಿ ಆದಿನಾಥ ಮಹಾರಾಜರಿಂದ ತಮ್ಮ ಮಕ್ಕಳಾದ ಬ್ರಾಹ್ಮಿ, ಸುಂದರಿ, ಭರತ, ಬಾಹುಬಲಿಗೆ ಅಕ್ಷರಾಭ್ಯಾಸ ಹಾಗೂ ಸಾಮೂಹಿಕ ಅಕ್ಷರಾಭ್ಯಸದ ರೂಪಕ ಪ್ರದರ್ಶನ ನಡೆಯಿತು.
ಆದಿನಾಥ ಮಹಾರಾಜರು ಬ್ರಾಹ್ಮಿಗೆ ಅಕ್ಷರಾಭ್ಯಾಸದ ಮೂಲಕ ಬ್ರಾಹ್ಮಿ ಲಿಪಿಯನ್ನು ಕಲಿಸುತ್ತಾರೆ. ಮುಂದೆ ಬ್ರಾಹ್ಮಿ ಲಿಪಿಯಿಂದಾಗಿ ನಾಗರಿ ಲಿಪಿ, ಶಾರದಾ ಲಿಪಿ, ದೇವನಾಗರಿ ಲಿಪಿ, ಪಾಲಿ, ಪ್ರಾಕೃತ, ತಮಿಳು ಲಿಪಿ, ತುಳು ಲಿಪಿ, ಕನ್ನಡ ಲಿಪಿ, ತೆಲುಗು ಲಿಪಿ, ಮಲೆಯಾಳಿ ಲಿಪಿ ಮೊದಲಾದ ಲಿಪಿಗಳು ಮೂಡಿ ಬರುತ್ತವೆ.


ಆದಿನಾಥ ಮಹಾರಾಜರು ಸುಂದರಿಗೆ ಗಣಿತ, ಛಂದಶಾಸ್ತ್ರ, ಅಲಂಕಾರ ಶಾಸ್ತ್ರ ಲಲಿತ ಕಲೆ, ಸಾಹಿತ್ಯ, ಸಂಗೀತವನ್ನು ಕಲಿಸುತ್ತಾರೆ.
ಆದಿನಾಥ ಮಹಾರಾಜರು ಭರತನಿಗೆ ಅರ್ಥಶಾಸ್ತ್ರ, ನಾಟ್ಯ ಕಲೆಯನ್ನು ಕಲಿಸುತ್ತಾರೆ. ಇದೇ ನಾಟ್ಯಕಲೆ ಮುಂದೆ ಭರತನಾಟ್ಯವಾಗಿ ಜನಪ್ರಿಯವಾಗುತ್ತದೆ. ತಾನು ಕಲಿತ ವಿದ್ಯೆ ಮತ್ತು ಸಂಸ್ಕಾರವನ್ನು ಲೋಕಹಿತಕ್ಕಾಗಿ ಬಳಸಬೇಕು. ಕೀರ್ತಿ, ಪ್ರತಿಷ್ಠೆಗಾಗಿ ಅಲ್ಲ. ರೈತರನ್ನು ಕಡೆಗಣಿಸಬಾರದು ಎಂದು ಸಲಹೆ ನೀಡುತ್ತಾರೆ.
ಬಾಹುಬಲಿ ಪರಾಕ್ರಮಶಾಲಿಯಾದುದರಿಂದ ಆತನಿಗೆ ಯುದ್ಧ ಕಲೆ, ಆಯುರ್ವೇದ, ವಾಸ್ತು ವಿದ್ಯೆ, ಖಗೋಳ ಶಾಸ್ತ್ರ, ಜ್ಯೋತಿಷ್ಯವನ್ನು ಕಲಿಸುತ್ತಾರೆ. ಸಕಲ ಪ್ರಾಣಿಗಳನ್ನು ಸಮಾನವಾಗಿ ಕಾಣಬೇಕು ಎಂದು ಹಿತವಚನ ಹೇಳುತ್ತಾರೆ.
ಬಳಿಕ ನಡೆದ ಸಾಮೂಹಿಕ ಅಕ್ಷರಾಭ್ಯಾಸದಲ್ಲಿ 46 ಮಕ್ಕಳು ಭಾಗವಹಿಸಿದರು.

ಸಾಮೂಹಿಕ ವ್ರತೋಪದೇಶ:
110 ಹುಡುಗರು ಹಾಗೂ 56 ಹುಡುಗಿಯರು ಸೇರಿದಂತೆ 166 ಮಂದಿಗೆ ಸಾಮೂಹಿಕ ವ್ರತೋಪದೇಶ ನೀಡಲಾಯಿತು.
ಆಚಾರ್ಯ ಶ್ರೀ ವರ್ಧಮಾನ ಸಾಗರ ಮುನಿಮಹಾರಾಜರು ಅಕ್ಷತೆಯ ಮೇಲೆ ಸುವರ್ಣ ಶಲಾಕೆಯಿಂದ ಓಂಕಾರ ಬರೆದು ಸಾಮೂಹಿಕ ವ್ರತೋಪದೇಶ ನೀಡಿದರು. ಆಚಾರ್ಯ ಶ್ರೀ ಪುಷ್ಪದಂತ ಸಾಗರ ಮುನಿಮಹಾರಾಜರು ಹಾಗೂ ಮುನಿ ಸಂಘದವರು ಉಪಸ್ಥಿತರಿದ್ದರು.
ನರಸಿಂಹರಾಜಪುರ ಸಿಂಹನಗದ್ದೆ ಜೈನ ಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಜಿನೇಶ್ವರನ ಅನುಯಾಯಿಗಳು ಜೈನರು. ಮೋಕ್ಷ ಪ್ರಾಪ್ತಿಯ ಪ್ರಥಮ ಹಂತವೇ ವ್ರತೋಪದೇಶ. ಜನಿವಾರ ಧಾರಣೆ ಅಂದರೆ ಸಮ್ಯಕ್ ದರ್ಶನ, ಸಮ್ಯಕ್‌ಜ್ಞಾನ ಮತ್ತು ಸಮ್ಯಕ್ ಚಾರಿತ್ರ್ಯ ಎಂಬ ರತ್ನತ್ರಯ ಧರ್ಮವನ್ನು ಅನುಸರಿಸುವುದೇ ಆಗಿದೆ ಎಂದರು. ಜನಿವಾರ ಧಾರಣೆ ಮಾಡದವರು ಬಸದಿಯ ಗರ್ಭಗುಡಿ ಪ್ರವೇಶಿಸಬಾರದು. ವಿವಾಹ ಆಗಬಾರದು ಎಂದು ಅವರು ಸಲಹೆ ನೀಡಿದರು. ಜೈನ ಧರ್ಮದಲ್ಲಿ ನಂಬಿಕೆ ಇಟ್ಟು ವ್ರತ-ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ದೇವರು, ಗುರುಗಳು ಮತ್ತು ಶಾಸ್ತ್ರದ ಮೇಲೆ ಅಚಲ ನಂಬಿಕೆ ಇಡಬೇಕು, ಸ್ವಾಧ್ಯಾಯ ಮಾಡಬೇಕು ಎಂದು ಹೇಳಿದರು.
ಹೊಂಬುಜ ಜೈನ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ವ್ರತ ಸ್ವೀಕಾರ ಮಾಡಿದವರು ಮದ್ಯ, ಮಾಂಸ ಮತ್ತು ಮಧು ತ್ಯಾಗ ಮಾಡಬೇಕು. ರಾತ್ರಿ ಭೋಜನ ಮಾಡಬಾರದು. ಅಹಿಂಸಾ ಧರ್ಮದ ಪಾಲನೆ ಮಾಡಬೇಕು ಎಂದು ಹೇಳಿದರು.
ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಜೈನಧರ್ಮದ ವ್ರತ-ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮತಿ ಸುಧಾರಿಸಿದರೆ ಮಾತ್ರ ಗತಿ ಸುಧಾರಿಸುತ್ತದೆ. ಸಹವಾಸ ದೋಷದಿಂದ ಜೈನರು ಯಾವುದೇ ದುಶ್ಚಟಕ್ಕೆ ಬಲಿಯಾಗಬಾರದು ಎಂದು ಸಲಹೆ ನೀಡಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಶ್ರವಣಬೆಳಗೊಳ ಸ್ವಾಮೀಜಿ ಧರ್ಮಸ್ಥಳಕ್ಕೆ
ಉಜಿರೆ: ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇದೇ 14 ರಂದು ಗುರುವಾರ ಧರ್ಮಸ್ಥಳಕ್ಕೆ ಆಗಮಿಸುವರು.
ಬಳಿಕ ಮಂಗಲ ಪ್ರವಚನ ನೀಡುವರು.

More articles

Latest article