ಬಂಟ್ವಾಳ: ಮಂಗಳವಾರ ಬಂಟ್ವಾಳ ತಾಲೂಕು ಪಂಚಾಯತ್‌ನ ಎಸ್‌ಜಿಎಸ್‌ವೈ ಸಭಾಂಗಂಣದಲ್ಲಿ ನಡೆದ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಉಜ್ವಲ ಯೋಜನೆ ಹಾಗೂ ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಗದ್ದಲ, ಆಡಳಿತ ಹಾಗೂ ಪ್ರತಿಪಕ್ಷಗಳ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗಿ ರಾಜಕೀಯ ಮೇಲಾಟವೇ ನಡೆಯಿತು.
ಸಭೆ ಆರಂಭವಾಗುತ್ತಿದ್ದಂತೆ ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾವೆ ಮಾತನಾಡಿ, ಉಜ್ವಲ ಯೋಜನೆಯು ಖಾಸಗಿ ಕಾರ್ಯಕ್ರಮವೋ ಅಥವಾ ಸರಕಾರಿ ಕಾರ್ಯಕ್ರಮವೋ? ಈ ಯೋಜನೆ ಯಾವ ಇಲಾಖೆಗೆ ಸಂಬಂಧಿಸಿದ್ದು? ಎಂದು ಸಭೆಯನ್ನು ಪ್ರಶ್ನಿಸಿ, ಈ ಬಗ್ಗೆ ಮಾಹಿತಿ ನೀಡುವಂತೆ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿ ಪ್ರತಿಯಿಸಿ ಈ ಯೋಜನೆ ನಮ್ಮ ಇಲಾಖಾ ವ್ಯಾಪ್ತಿಗೆ ಬಾರದಿದ್ದು, ಗ್ಯಾಸ್ ಏಜನ್ಸಿಗಳೇ ನೇರವಾಗಿ ಅಡುಗೆ ಅನಿಲ ವಿತರಿಸುತ್ತಿದೆ. ಮುಖ್ಯಮಂತ್ರಿಗಳ ಅನಿಲ ಯೋಜನೆಯಲ್ಲಿ ಮಾತ್ರ ತಮ್ಮ ಇಲಾಖೆಯಿಂದ ಫಲಾನುಭವಿಗಳನ್ನು ಆಯ್ಕೆಗೊಳಿಸಿ ಅಡುಗೆ ಅನಿಲ ವಿತರಿಸಲಾಗುತ್ತಿದೆ ಎಂದರು.


ಇದಕ್ಕೆ ಸದಸ್ಯ ಪ್ರಭಾಕರ ಪ್ರಭು ಆಕ್ಷೇಪ ವ್ಯಕ್ತಪಡಿಸಿ, ತಾಪಂ ಸಭೆಯಲ್ಲಿ ಜಿಪಂ ಸದಸ್ಯರು ಭಾಗವಹಿಸಿ ಸಲಹೆ ಮಾತ್ರ ನೀಡಬೇಕೆ ವಿನಹ ಪ್ರಶ್ನೆ ಕೇಳಲು ಅವಕಾಶವಿಲ್ಲ. ಜಿಪಂ ಸದಸ್ಯರ ಮಾತನ್ನು ತಾಪಂನಲ್ಲಿ ನಿರ್ಣಯ ಮಾಡಲು ಆಗುವುದಿಲ್ಲ ಎಂದರು.
ಕರೋಪಾಡಿ ಹಾಗೂ ಸಂಗಬೆಟ್ಟು ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಟ್ಯಾಂಕ್‌ಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ಇದರಿಂದ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ತಾಪಂ ಸದಸ್ಯ ಉಸ್ಮಾನ್ ಕರೋಪಾಡಿ ಗಂಭೀರ ಆರೋಪ ಮಾಡಿದರು.
ಸಂಗಬೆಟ್ಟುವಿನ ಕರಿಮಳೆ ಎಂಬಲ್ಲಿ ಹೊಸಪಂಪು ಕಾಮಗಾರಿ ಪ್ರಗತಿಯಲ್ಲಿದ್ದು, ಈ ತಿಂಗಳ ಕೊನೆಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅದೇ ರೀತಿ ಕರೋಪಾಡಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆಯಿಂದ ತೊಟ್ಟಿಗಳಿಗೆ ನೀರನ್ನು ತುಂಬಿಸುವ ಪ್ರಕ್ರಿಯೆ ನಿಧಾನವಾಗಿರುತ್ತದೆ ಎಂದು ಮೆಸ್ಕಾಂ ಅಧಿಕಾರಿಗಳು ಸಭೆಗೆ ತಿಳಿಸಿದಾಗ, ಶೀಘ್ರವಾಗಿ ಸಮಸ್ಯೆ ಪರಿಹಾರ ಮಾಡುವಂತೆ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು ಸೂಚನೆ ನೀಡಿದರು.
ತಾಲೂಕಿನಲ್ಲಿ 40,393 ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಬಂದಿದ್ದು, ಈ ಪೈಕಿ 3,800 ವಿದ್ಯಾರ್ಥಿಗಳನ್ನು ಹೊರತು ಪಡಿಸಿ, ಉಳಿದ ಎಲ್ಲರಿಗೂ ವಿದ್ಯಾರ್ಥಿ ವೇತನವನ್ನು ವಿತರಣೆ ಮಾಡಲಾಗಿದೆ. ಬ್ಯಾಂಕ್‌ನಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡದ ಕಾರಣ 3,800 ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ತಡೆಹಿಡಿಯಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಸಭೆಗೆ ಮಾಹಿತಿ ನಿಡಿದರು.
ಮಾರ್ಚ್ ತಿಂಗಳಲ್ಲಿ ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಆ ತಿಂಗಳಲ್ಲಿ ಕ್ರಿಕೆಟ್ ಸಹಿತ ಇನ್ನಿತರ ಪಂದ್ಯಾಟಗಳಿಗೆ ಅನುಮತಿ ನೀಡಬಾರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೀವಪ್ರಕಾಶ್ ಸಭೆಯನ್ನು ಒತ್ತಾಯಿಸಿದಾಗ, ಈ ವಿಚಾರವನ್ನು ಸ್ವಾಗತಿಸಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಮಾರ್ಚ್ ೧೦ರಂದು ಪಲ್ಸ್ ಪೋಲಿಯೋ, ಪೋಡಿಮುಕ್ತ ಗ್ರಾಮ, ಅಕ್ರಮ ಸಕ್ರಮ, ಹಕ್ಕುಪತ್ರ ವಿತರಣೆ, ಭೂ ಮಂಜೂರಾತಿಯಾದ ಜಮೀನಿನ ಪರಭಾರೆ, ಶಾಲೆಗಳಿಗೆ ಆವರಣ ಗೋಡೆ ನಿರ್ಮಾಣ, ಕರೋಪಾಡಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಂಗನವಾಡಿ ಕಾರ್ಯಕರ್ತರ ಬಳಕೆ ಹಾಗೂ ಇತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು.
ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ, ತಹಶೀಲ್ದಾರ್ ರಶ್ಮಿ ಕಿಶೋರ್ ಹಾಜರಿದ್ದರು. ತಾಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here