ಲೇ: ರಮೇಶ ಎಂ ಬಾಯಾರು
ಎಂ.ಎ, ಬಿ.ಇಡಿ
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು

ಅವನು ಭಾರೀ ಜೋರು. ಆಕೆ ಹಾಗೆನೇ, ಬಹಳ ಜೋರು! ಇಂತಹ ಮಾತುಗಳನ್ನು ನಾವು ಪದೇ ಪದೇ ಆಲಿಸುತ್ತಿರುತ್ತೇವೆ. ಆದರೆ ‘ಜೋರು’ ಎಂಬ ಪದವನ್ನು ಬಳಸುವುದರ ಹಿಂದೆ ಯಾವ ಭಾವನೆಗಳು ಅಡಗಿರುತ್ತವೆ ಎಂಬ ಸಂದೇಹ ನಮಗೆ ಎದ್ದೇ ಏಳುತ್ತದೆ.
ಸರಕಾರದಿಂದ ನೇಮಕ ಪಡೆದ ಅಧಿಕಾರಿಯೊಬ್ಬರು ನಮ್ಮೂರಿಗೆ ಬಂದರೆ ‘ಅವರು ಜೋರೋ ಪಾಪವೋ’ ಎಂದು ಹಳ್ಳಿಯ ಮಾತುಗಳಲ್ಲಿ ಕೇಳುವುದುಂಟು. ಲಂಚ ಪಡೆದು ಕೆಲಸ ಮಾಡುವ ಅಧಿಕಾರಿಯನ್ನು ಕೆಲವೊಮ್ಮೆ ಆತ ಜೋರು ಎಂದು ವಿಮರ್ಶಿಸುತ್ತೇವೆ. ಲಂಚಕ್ಕೆ ಬಾಗದೆ ನ್ಯಾಯಯುತವಾಗಿ ಕೆಲಸ ನಿರ್ವಹಿಸುವವರನ್ನೂ ಜೋರು ಎಂದು ಹೇಳುವವರು ಇದ್ದಾರೆ. ಹಾಗಾಗಿಯೇ ‘ಜೋರು’ ಎಂಬ ಪದದ ಬಳಕೆಯ ಹಿಂದೆ ಇರುವ ನಿಜಾರ್ಥ ನಮಗೆ ತಿಳಿಯದೇ ಇರುವುದು. ಜೋರು ಈ ಪದ ಏಕಾರ್ಥಕವಾಗಿ ಎಲ್ಲೂ ಬಳಕೆಯಾಗುವುದಿಲ್ಲ. ಹಾಗೆಂದು ದ್ವಯಾರ್ಥಕವೆಂದೂ ಹೇಳಲಾಗದು. ಬಹು ಅರ್ಥದಲ್ಲಿ ಜೋರು ಈ ಪದಕ್ಕೆ ಬಹು ಅರ್ಥ ನೀಡ ಬಹುದೇನೋ ಎಂದೆನಿಸುತ್ತದೆ.
ತನ್ನೊಂದಿಗಿರುವವರನ್ನು ಹದ್ದುಬಸ್ತಿನಲ್ಲಿರಿಸಿಕೊಂಡು ಅತೀ ಉತ್ತಮವಾಗಿ ಕಾರ್ಯನಿರ್ವಹಿಸುವವರನ್ನು ಸಜ್ಜನರೆಂದು ಯಾರೂ ಹೇಳರು. ಅವನು ಭಾರಿ ಜೋರೆಂದೇ ಪ್ರಚಾರ ಪಡೆಯುತ್ತಾನೆ. ವ್ಯಕ್ತಿಯೊಬ್ಬನ ಸಹಚರರಲ್ಲಿ ಒಬ್ಬೊಬ್ಬರೇ ಕಳಚುತ್ತಿದ್ದಂತೆ ಜನರು ಹೇಳುವ ಮಾತು : ಆ ವ್ಯಕ್ತಿ ತುಂಬ ಜೋರು, ಅವನಿಗೆ ಯಾರೂ ಹಿಡಿಯುವುದಿಲ್ಲ. ಅವನನ್ನು ಒಬ್ಬೊಬ್ಬರೇ ಬಿಟ್ಟು ಹೋಗುತ್ತಿದ್ದಾರೆ ಎಂದಲ್ಲವೇ? ಈ ಎರಡು ಸಂದರ್ಭಗಳಲ್ಲಿ ನಾವು ಗಮನಿಸಬೇಕಾದ ಪ್ರಮುಖವಾದ ಅಂಶ : ಒಂದೆಡೆ ಎಲ್ಲರನ್ನೂ ಹದ್ದು ಬಸ್ತಿನಲ್ಲಿರಿಸ ಬಲ್ಲವ ಜೋರಾದರೆ ಇನ್ನೊಂದೆಡೆ ಜನರು ವ್ಯಕ್ತಿಯಿಂದ ಕಳಚಲ್ಪಟ್ಟಾಗ ಆ ವ್ಯಕ್ತಿ ಜೋರು. ಹಾಗಿರುವಾಗ ಜೋರು ಎಂಬ ಪದಕ್ಕಿರುವ ನಿಜವಾದ ಒಳಾರ್ಥವೇನು?


ದಿಟ್ಟತನ ಅಥವಾ ಎದೆಗಾರಿಕೆಗಾಗಿ ನಮಗೆ ‘ಜೋರು’ ಎಂಬ ಬಿರುದು ದೊರೆಯುವುದಿದ್ದರೆ ದೊರೆಯಲಿ. ಆದರೆ ಸ್ವಜನ ಪಕ್ಷಪಾತ, ಸ್ವಾರ್ಥ ಈ ಕಾರಣಗಳಿಂದಾಗಿ ನಮ್ಮ್ಮನ್ನು ಯಾರೂ ಜೋರೆಂದು ಗುರುತಿಸುವಂತೆ ಅಥವಾ ಹೀಗಳೆಯುವಂತಾಗಬಾರದು. ಇದರಿಂದಾಗಿ ಬರುವ ‘ಜೋರು’ ಎಂಬ ಬಿರುದು ಅಗೌರವವನ್ನು ತರುತ್ತದೆ. ನಾವು ಗೌರವ ಗಳಿಸಲು ಹೆಣಗ ಬೇಕೇ ಹೊರತು ಅಗೌರವಗಳಿಸಲು ಅಲ್ಲ.
ಜೋರು ಎಂಬ ಪದದ ಅರ್ಥವು ಕ್ರೂರ ಅಥವಾ ಬಾಯಿ ಹರುಕತನಗಳಿಗೆ ಮೀಸಲಾಗಿರದೆ ಶಿಸ್ತು, ಪ್ರಾಮಾಣಿಕತೆ, ನ್ಯಾಯಪರತೆಗಳಿಗೆ ಅನ್ವಯವಾಗುವುದಾದರೆ ಜೋರೆಂಬುದು ಒಳಿತಾದ ಗುಣವೇ ಆಗುವುದು. ಹಾಗಾದಾಗ ಜೋರು ಎಂಬ ಪದವು ಗೌರವಸೂಚಕವಾಗುತ್ತದೆ ಮತ್ತು ಪುರಸ್ಕಾರ ಯೋಗ್ಯವಾಗುತ್ತದೆ. ಆದುದರಿಂದ ಜೋರು ಎಂಬ ಪದವನ್ನು ಕೀಳುತನವನ್ನು ಗುರುತಿಸುವುದಕ್ಕಾಗಿ ಬಳಸದೆ ಸಭ್ಯತೆಯ ಸಂಕೇತವಾಗಿ ಬಳಸುವಂತಾಗಬೇಕು. ಧನಾತ್ಮಕವಾದ ಜೋರೆನಿಸಿಕೊಳ್ಳುವ ಗುಣಗಳು ನಮ್ಮದಾಗುವಂತಾಗಲಿ. ಸಮಾಜದ ಹಿತಕ್ಕೆ ಪೂರಕವಾಗುವಂತೆ ನಾವೆಲ್ಲರೂ ಜೋರೇ ಆಗಿರೋಣ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here