ಲೇ: ರಮೇಶ ಎಂ. ಬಾಯಾರು ಎಂ.ಎ; ಬಿ.ಎಡ್;
ರಾಜ್ಯ ಪ್ರಶಸ್ತಿ ಪುರಸ್ಕೃತ ಅಧ್ಯಾಪಕರು

ಶಿಕ್ಷಣ ಸಂಸ್ಥೆಗಳು ಪಡೆಯುವ ಉತ್ತೀರ್ಣತೆಯ ಶೇಕಡಾಮಾನವನ್ನಾಧರಿಸಿ ಆ ಶಾಲಾ ಶಿಕ್ಷಣದ ಗುಣ ಮಟ್ಟ ಅಥವಾ ಶಾಲಾ ಶೈಕ್ಷಣಿಕ ಗುಣ ಮಟ್ಟವನ್ನು ತೀರ್ಮಾನಿಸುವುದು ಪ್ರಸ್ತುತ ಜನ ಸಾಮಾನ್ಯರ ಕ್ರಮ. ಶೇಕಡಾ ನೂರಕ್ಕೆ ನೂರು ಉತ್ತೀರ್ಣತೆಯನ್ನು ಪಡೆದ ಸಂಸ್ಥೆಯು ಕಡಿಮೆ ಫಲಿತಾಂಶ ಪಡೆದ ಶಾಲೆಗಿಂತ ಮುಂದಿದೆ ಎನ್ನಲಾಗದು. ಉದಾಹರಣೆಗೆ ಇಪ್ಪತ್ತು ವಿದ್ಯಾರ್ಥಿಗಳಿರುವ ಒಂದು ಶಾಲೆ ಶೇಕಡಾ ನೂರರ ಫಲಿತಾಂಶ ದಾಖಲಿಸಿತು ಎಂದಿಟ್ಟು ಕೊಳ್ಳೋಣ. ಆದರೆ ಆ ಎಲ್ಲ ಮಕ್ಕಳ ಒಟ್ಟು ಅಂಕ ಐದು ಸಾವಿರವಾಗಿದ್ದು ಕಡಿಮೆ ಫಲಿತಾಂಶ ಪಡೆದ ಶಾಲೆಯ ಎಲ್ಲ ಮಕ್ಕಳ ಒಟ್ಟು ಅಂಕ ಆರು ಸಾವಿರವೋ ಎಂಟು ಸಾವಿರವೋ ಆದರೆ ಶೇಕಡಾ ನೂರರ ಫಲಿತಾಂಶ ಎಂಬ ಹಣೆ ಪಟ್ಟಿಗೆ ಬೆಲೆಯಿರದು. ಗರಿಷ್ಠ ಅಂಕಗಳ ಒಟ್ಟು ಆರು ನೂರು ಇದ್ದರೆ, ಇಪ್ಪತ್ತು ವಿದ್ಯಾರ್ಥಿಗಳು ಒಟ್ಟು ಹನ್ನೆರಡು ಸಾವಿರದ ತನಕ ಅಂಕಗಳನ್ನು ಪಡೆಯಬಹುದಾಗಿದೆ. ಯಾವ ಸಂಸ್ಥೆಯ ವಿದ್ಯಾರ್ಥಿಗಳ ಅಂಕವು ಗರಿಷ್ಠ ಅಂಕಗಳಿಗೆ ಸಮೀಪದಲ್ಲಿರುತ್ತದೋ ಆ ಸಂಸ್ಥೆಯು ಗುಣಮಟ್ಟದ ಶಿಕ್ಷಣ ನೀಡುತ್ತದೆ ಎಂದು ಅಂಕಗಳ ಆಧಾರದಲ್ಲಿ ಹೇಳಬೇಕಾಗುತ್ತದೆ.
ಶಿಕ್ಷಣವು ಅಂಕಗಳಿಗೆ ಮಾತ್ರವೇ ಮೀಸಲಾಗಿದ್ದರೆ ಸಾಮಾಜಿಕ ಅಸಮತೋಲನಗಳಾಗುತ್ತದೆ. ಶಿಕ್ಷಣವು ಒಬ್ಬ ವ್ಯಕ್ತಿಯನ್ನು ಬಹುಮುಖ ಪ್ರತಿಭಾವಂತನನ್ನಾಗಿ ರೂಪಿಸಬೇಕು. ಅವನು ಕಲಾಕ್ಷೇತ್ರ, ಕ್ರೀಡಾ ಕ್ಷೇತ್ರ, ಉತ್ಪಾದನಾ ಕ್ಷೇತ್ರ, ಅನ್ವೇಷಣಾ ಕ್ಷೇತ್ರ ಅಥವಾ ಯಾವದೇ ಸಮಾಜಕ್ಕೆ ಪೂರಕವಾದ ವಿಭಾಗದಲ್ಲಿ ಅಥವಾ ವಿಭಾಗಗಳಲ್ಲಿ ಪ್ರಯೋಜನಕ್ಕೆ ಬರುವಂತಹ ವ್ಯಕ್ತಿಯಾಗಿ ಮೂಡಿಬರಬೇಕೆಂಬುದೂ ಶಿಕ್ಷಣದ ಧ್ಯೇಯವಾಗಿದೆ. ಆದರೆ, ನೀನು ಓದು.. ಓದು; ಕಲಿ.. ಕಲಿ.. ಎಂದು ಮಕ್ಕಳನ್ನು ಪುಸ್ತಕದ ಬದನೆಕಾಯಿ ಮಾಡುತ್ತೇವೆಯೇ ವಿನಹ, ಅವನ ಮಸ್ತಕದಲ್ಲಿ ವಿಕಸನ ಶೀಲ ಚಿಂತನೆಗಳನ್ನು ಬೆಳೆಸಲು ಅವಕಾಶ ಅಥವಾ ಮಾರ್ಗದರ್ಶನಗಳನ್ನು ಕೊಡುತ್ತಿದ್ದೇವೆಯೇ? ಎಂಬುದರ ಕುರಿತಾಗಿ ಆತ್ಮ ವಿಮರ್ಶೆ ಮಾಡಿಕೊಂಡರೆ ನಾವು ಖಂಡಿತವಾಗಿಯೂ ಅನುತ್ತೀರ್ಣರಾಗುತ್ತೇವೆ.


ಸಮಾಜೋಪಯೋಗಿ ಜ್ಞಾನ ಮತ್ತು ವಿಕಸನ ಶೀಲತೆಯೊಂದಿಗೆ ಭಾವಕೋಶವನ್ನು ತುಂಬಿಸಿಕೊಳ್ಳಬೇಕಾದುದು ಶಿಕ್ಷಣದ ಗುರಿಯೆಂಬುದನ್ನು ನಾವು ಮರೆಯಲೇಬಾರದು. ಭಾವಕೋಶವು ಬರಿದಾಗಿರುವ ವ್ಯಕ್ತಿಗಳಿಂದಾಗಿ ಸಮಾಜದಲ್ಲಿ ಶೋಷಣೆಯೆಂಬ ಪಿಡುಗು ಉಳಿಯಲು ಕಾರಣವಾಗಿದೆ. ಸಮಾನತೆಯ ಕಲ್ಪನೆ ಜನರಲ್ಲಿ ಕಡಿಮೆಯಾಗಿದೆಯೆಂದಾದರೆ, ಪ್ರಕೃತಿಯ ಬಗ್ಗೆ ಮನುಷ್ಯನಲ್ಲಿ ಒಲವಿಲ್ಲವೆಂದಾದರೆ, ಕುಟುಂಬದೊಳಗೆ ಮುಸುಕಿನೊಳಗೆ ಅಥವಾ ಬಹಿರಂಗವಾದ ಗುದ್ದಾಟ ನಡೆಯುತ್ತಿದೆಯೆಂದಾದರೆ, ಸಮಾಜದೊಳಗೆ ಮತ-ಮತ, ಜಾತಿ-ಜಾತಿಗಳ ನಡುವೆ ಸೌಹಾರ್ದತೆ ಕಡಿಮೆಯಾಗಿದೆ ಎಂದಾದರೆ ನಮ್ಮಲ್ಲಿ ಭಾವಕೋಶ ನಿರೀಕ್ಷಿತ ಪ್ರಮಾಣದಲ್ಲಿ ಬಲವಾಗಿಲ್ಲ ಎಂದೇ ಅರ್ಥ. ಸ್ವಾರ್ಥ ಬಲಗೊಂಡು ವ್ಯಾವಹಾರಿಕವಾದ ಚಿಂತನೆಗಳೇ ಅಧಿಕವಿರುವೆಡೆಯಲ್ಲಿ ಭಾವಕೋಶ ನಿಷ್ಕ್ರಿಯವಾಗುತ್ತದೆ. ಸಹನೆ, ತಾಳ್ಮೆ, ಅನುಕಂಪ, ಪ್ರೀತಿ, ವಿಶ್ವಾಸ, ಆದರ, ಸತ್ಯನಿಷ್ಠೆ, ಉದಾರತೆ ಹೀಗೆ ನಾವು ಮಾಡುವ ಗುಣ ವಿಶೇಷಗಳ ಪ್ರತಿಯೊಂದು ಅಂಶವೂ ಭಾವಕೋಶದ ಅಂಗಗಳಾಗಿವೆ. ಇವೆಲ್ಲವೂ ಶಿಕ್ಷಣದೊಳಗಿರಬೇಕು, ಶಿಕ್ಷಣವೇತ್ತರಲ್ಲಿ ಮೈಗೂಡಿರಬೇಕು. ಅದಕ್ಕಾಗಿಯೇ ಅನೇಕ ಹಿರಿಯರು ಹೇಳುವುದು, ವ್ಯಕ್ತಿಗೆ ಶಿಕ್ಷಣವು ರ್‍ಯಾಂಕ್ ಒದಗಿಸುವುದರೊಂದಿಗೆ ಭಾವಕೋಶವು ಬ್ಲಾಂಕ್ ಆಗದಿರುವಂತೆ ಎಚ್ಚರಿಕೆ ವಹಿಸಲಿ ಎಂದು.


ಇಂದು ಹಿರಿಯರೊಂದಿಗೆ ಗೌರವ, ಕಿರಿಯರೊಂದಿಗೆ ಪ್ರೀತಿ ಕಡಿಮೆಯಾಗಿದ್ದರೆ ತನ್ನ ಬಗ್ಗೆ ವ್ಯಕ್ತಿ ಹೊಂದಿರುವ ಶ್ರೇಷ್ಠತೆ- ಜ್ಯೇಷ್ಠತೆಯ ಭಾವನೆಯೇ ಕಾರಣವಾಗಿದೆ. ತಮ್ಮ ಬಗೆಗೆ ಪ್ರತಿಯೊಬ್ಬರಲ್ಲೂ ಅಭಿಮಾನವಿರಲಿ, ಸ್ವಾಭಿಮಾನವಿರಲಿ. ಆದರೆ ಅಹಂ ಅಥವಾ ದುರಭಿಮಾನ ಇರಲೇ ಬಾರದು. ದೈನ್ಯತೆ ಬಾಳಿನ ಮುಖ್ಯ ಗುಣ ವಾಗಿರಬೇಕು. ಶಿಕ್ಷಣವು ಎಲ್ಲ ಉತ್ತಮಾಂಶಗಳನ್ನು ವ್ಯಕ್ತಿಯಲ್ಲಿ ಸೃಷ್ಟಿಸುವುದರೊಂದಿಗೆ ಆತನಲ್ಲಿ ಕೌಶಲ್ಯಗಳು ಮತ್ತು ಜ್ಞಾನವನ್ನು ಬೆಳೆಸುವ ಗುರಿಗಳಿಂದ ವಿಮುಖವಾಗಬಾರದೆಂಬುದೇ ನಮ್ಮಾಸೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here