Thursday, September 28, 2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-31

Must read

‘ಭಕ್ತಿ’ ಈ ಪದವೇ ನಮ್ಮಲ್ಲಿ ಉತ್ತಮ ಗುಣವನ್ನು ಬೆಳೆಸಲು ಸಹಾಯಕ. ಇದೀಗ ಎಲ್ಲಾ ದೇವಸ್ಥಾನಗಳ ಜಾತ್ರೆ, ಬ್ರಹ್ಮ ಕಲಶ, ಪೂಜೆ, ಹೋಮಗಳ ಸಮಯ. ಹಲವಾರು ದೇವಾಲಯಗಳಿಗೆ ಭಕ್ತರು ನಿಜ ಭಕ್ತಿಯಿಂದ ತೆರಳುತ್ತಾರೆ. ಆದರೆ ಅಲ್ಲಿಗೆ ಟೈಮ್ ಪಾಸ್ ಗೆ ಹೋಗುವವರು, ಕೇವಲ ಅಲ್ಲಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೋಗುವವರು, ಚಲನಚಿತ್ರ ಕಲಾವಿದರೋ, ಮಹಾನ್ ವ್ಯಕ್ತಿಗಳೋ ಬರುವವರನ್ನು ನೋಡಲು ಬರುವವರು, ಅಲ್ಲಿನ ಕಾಮಿಡಿ ನಾಟಕ-ಯಕ್ಷಗಾನಕ್ಕಾಗಿ ಬರುವ ಕಲಾಪ್ರಿಯರು, ಸಂಗೀತಗಾರರೂ, ನೃತ್ಯಗಾರರು, ಮಕ್ಕಳ ಪೋಷಕರು, ಶಿಕ್ಷಕರು, ಅದರೊಂದಿಗೆ ಊರಿನ ಗಣ್ಯರು ಹೀಗೆ ಜನರ ಸಾಲು ಬಂದಿರುವಾಗ ಅಲ್ಲಿಗೆ ಸರಗಳ್ಳರು, ವ್ಯಾಪಾರಿಗಳು, ಪಿಕ್ ಪಾಕೆಟ್ ಮಾಡುವವರು, ಮೊದಲಾದವರು ಬಂದಿಳಿಯುತ್ತಾರೆ. ವ್ಯಾಪಾರಿಗಳು ವ್ಯಾಪಾರದ ಆಸೆಗಾಗಿ ಬಂದರೆ ಕಳ್ಳಕಾಕರು ಸಮಯದ ಸದುಪಯೋಗ ಪಡೆದು ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾತರರಾಗಿರುತ್ತಾರೆ.
ಯಾರು ಹೇಗೇ ಬರಲಿ, ಎಲ್ಲರೂ ದೇವರ ಮಕ್ಕಳೇ. ಎಲ್ಲರನ್ನು ಸೃಷ್ಟಿ ಮಾಡಿದವರು ದೇವರೇ. ಜೀವನದಲ್ಲಿ ಯಾರ್ಯಾರು ಯಾವ ಯಾವ ರೀತಿ ಕೆಲಸಗಳನ್ನು ಮಾಡುವರೋ ಆಯಾ ಸ್ತರಗಳಲ್ಲಿ ಜನರನ್ನಿಟ್ಟು, ಏರಿಸಿ, ಇಳಿಸಿ, ಅಳೆದು, ತೂಗಿ ಸಲಹುವ ಕಾರ್ಯವನ್ನು ದೇವರು ಮಾಡುತ್ತಾರೆ. ಕೊಡುವವ, ಕಿತ್ತುಕೊಳ್ಳುವವ, ಮೇಲೇರಿಸುವವ, ಕೆಳ ತಳ್ಳುವವ ಎಲ್ಲವೂ ದೇವರೇ.
ನಮ್ಮ ಮನವು ಹೇಳಿದಂತೆ ಉತ್ತಮ ಕಾರ್ಯವನ್ನು ಮಾಡುತ್ತಾ, ಹೃದಯವು ವೆರಿಗುಡ್ ಎಂದು ಹೇಳುವಂತೆ ಬದುಕಿ ಬಾಳಿದವನೇ ಉತ್ತಮನು. ತನ್ನ ಮನಸ್ಸಿಗೇ ಸುಳ್ಳು ಹೇಳಿಕೊಂಡು, ತಾನು ಮಾಡಿದ್ದೇ ಸರಿಯೆಂದು ತನಗೆ ತಾನೇ ಸವಾಲು ಹಾಕಿಕೊಂಡು ಬದುಕುವವ ಎಂದೂ ಮುಂದೆ ಬರಲಾರ. ಭಕ್ತಿಯೊಂದೇ ನೀತಿ ಮಾರ್ಗಕ್ಕೆ ದಾರಿ. ಪ್ರೀತಿಯೊಂದೇ ಬದುಕಿಗಾಸರೆ. ಮನ, ಹೃದಯ ಚೆನ್ನಾಗಿರುವವರ ಮನದಲ್ಲೆ ದೇವ ನೆಲೆಸಿರುವನು. ನೀವೇನಂತೀರಿ?

 

@ಪ್ರೇಮ್@

More articles

Latest article