ವಿಟ್ಲ : ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಅನೇಕ ಅವಕಾಶಗಳಿವೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮಾಡಿದ ಸಾಧನೆಗೆ ಜೀವನವೆಂಬ ಶಾಲೆಯಲ್ಲಿ ವಿಶೇಷ ಮೌಲ್ಯವಿದೆ. ವಾರ್ಷಿಕೋತ್ಸವದಲ್ಲಿ ಅವರ ಪ್ರತಿಭಾ ದರ್ಶನ ಪ್ರಕಟವಾಗುತ್ತದೆ. ಯುವಜನತೆಗೆ ದೇಶಕಟ್ಟುವ ಜವಾಬ್ದಾರಿಯಿದೆ. ಕಾಲೇಜಿಗೆ ಪ್ರವೇಶಿಸುವ ರಸ್ತೆ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಅವರು ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದರು.
ಮಂಗಳೂರು ಮಹಾನಗರಪಾಲಿಕೆ ಸದಸ್ಯೆ ರೂಪಾ ಬಂಗೇರ ಅವರು ಮಾತನಾಡಿ, ಸಂಸ್ಕಾರಯುತ ಶಿಕ್ಷಣ ನೀಡುವ ಶ್ರೀ ಭಾರತೀ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸಲು ಮಾರ್ಗದರ್ಶನ ಮಾಡುತ್ತಿದೆ. ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಅನುಗ್ರಹವೂ ಸಿಗುತ್ತಿರುವುದು ಶ್ರೇಯಸ್ಕರವಾಗಿದೆ. ಸಂಸ್ಥೆಯ ಅಭಿವೃದ್ಧಿಗೆ ಕೈಜೋಡಿಸಲು ನಾವು ಸದಾ ಸಿದ್ಧರಾಗಿದ್ದೇವೆ ಎಂದು ಹೇಳಿದರು.
ತುಳು ಚಿತ್ರ ನಟ ಭೋಜರಾಜ ವಾಮಂಜೂರು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿ ಓದುವುದರಲ್ಲಿ ಹಿಂದೆ ಇದ್ದವರು ಕಲಾಸಕ್ತಿ ಹೊಂದಿದ್ದರೆ ಅವರನ್ನು ಪ್ರೋತ್ಸಾಹಿಸಬೇಕು. ಅವರಿಗೆ ಆ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯವಿದೆ ಎಂದು ಹೇಳಿದರು.
ಆಡಳಿತಾಧಿಕಾರಿ ಪ್ರೊ.ಕೆ.ಶಂಕರ ಭಟ್ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ಶೈಕ್ಷಣಿಕ, ರಾಜಕೀಯ, ಕಲಾವಿದರು ಕಾರ್‍ಯಕ್ರಮದಲ್ಲಿ ಭಾಗವಹಿಸಿ, ಕಾರ್‍ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂದಿದೆ. ಪದವಿ ಕಾಲೇಜಿನಲ್ಲಿ ಉತ್ತಮ ಫಲಿತಾಂಶವನ್ನು ದಾಖಲಿಸಿರುವುದು ಶ್ಲಾಘನೀಯ. ಈ ಸಂಸ್ಥೆಯಲ್ಲಿ ೧೦ ಮಂದಿ ಅರ್ಹ ಬಡ ಫಲಾನುಭವಿ ವಿದ್ಯಾರ್ಥಿನಿಯರ ಬೋಧನಾ ಶುಲ್ಕವನ್ನು ಪಾವತಿಸಲು ಬೋಧಕ ಮತ್ತು ಬೋಧಕೇತರ ವೃಂದ ಮುಂದೆ ಬಂದಿರುವುದು ಗಮನಾರ್ಹವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಸರಸ್ವತಿ ಎಜುಕೇಶನ್ ಸೊಸೈಟಿ ಕಾರ್‍ಯದರ್ಶಿ ಮಹೇಶ್‌ಲಕ್ಷ್ಮಣ್ ಬೋಂಡಾಲ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿತೇಶ್ ದೇವಾಂಗ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭ ಪ್ರತಿಭಾನ್ವಿತರಾದ ಪ್ರಕೃತಿ ಡಿ.ಅಮೀನ್, ಅತೀಶ್ ಎಸ್.ಶೆಟ್ಟಿ, ಶ್ಯಮಂತ್‌ಕೃಷ್ಣ ಅವರನ್ನು ಸಮ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ದತ್ತಿ ಬಹುಮಾನ ಮತ್ತು ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಂಸ್ಥೆಯ ಕಾರ್‍ಯಾಲಯ ಕಾರ್‍ಯದರ್ಶಿ ಎಂ.ಟಿ.ಭಟ್ ಸ್ವಾಗತಿಸಿದರು. ಪದವಿ ಕಾಲೇಜಿನ ಪ್ರಿನ್ಸಿಪಾಲ್ ಡಾ.ಈಶ್ವರಪ್ರಸಾದ್ ಎ. ಅವರು ಮತ್ತು ಪಿಯುಸಿ, ಪ್ರೌಢಶಾಲೆ ಪ್ರಿನ್ಸಿಪಾಲ್ ವಿದ್ಯಾ ಭಟ್ ಅವರು ವರದಿ ಮಂಡಿಸಿದರು. ಹಿರಿಯ ಉಪನ್ಯಾಸಕಿ ಸುಭದ್ರಾ ಭಟ್ ವಂದಿಸಿದರು. ಉಪನ್ಯಾಸಕರಾದ ಗಂಗಾರತ್ನ ಮುಗುಳಿ, ಪ್ರವೀಣ್ ಪಿ., ಅನಂತನಾರಾಯಣ ಪದಕಣ್ಣಾಯ, ಸಾಧನಾ, ರಮ್ಯಾ ಸ್ಪರ್ಧೆಗಳ ವಿಜೇತರ ಪಟ್ಟಿ ವಾಚಿಸಿದರು. ಉಪನ್ಯಾಸಕ ಸೂರ್ಯನಾರಾಯಣ ಎಸ್. ಅವರು ಸಮ್ಮಾನಿತರನ್ನು ಪರಿಚಯಿಸಿದರು. ಉಪನ್ಯಾಸಕ ಅಶೋಕ್ ಎಸ್. ಮತ್ತು ಶಿಕ್ಷಕಿ ದಿವ್ಯಲತಾ ಶೆಟ್ಟಿ ಕಾರ್‍ಯಕ್ರಮ ನಿರ್ವಹಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here