ವಿಟ್ಲ: ನಾಗಾರಾಧನೆ, ದೈವಾರಾಧನೆ ತುಳು ಜಿಲ್ಲೆಯ ಸಂಸ್ಕೃತಿಯ ಜೀವಾಳವಾಗಿದೆ. ಹಿರಿಯರು ನಡೆಸಿಕೊಂಡು ಬರುತ್ತಿದ್ದ ಕುಟುಂಬ ಪದ್ಧತಿಯೊಳಗೆ ಸಹ್ಯ ಜೀವನ ಕ್ರಮ, ರೀತಿರಿವಾಜುಗಳ ಮಹತ್ವ ಅಡಗಿದೆ. ಕುಟುಂಬದ ದೈವಪ್ರತಿಷ್ಠೆಯೊಂದಿಗೆ ವೈಮನಸ್ಸು, ಮನಸ್ತಾಪಗಳು ದೂರವಾಗಿ ಏಕ ಚಿಂತನೆ ಮೂಡಬೇಕೆಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಅವರು ಪುಣಚ ಗ್ರಾಮದ ಮೂಡಂಬೈಲು ಶ್ರೀಮಲರಾಯ, ಮಹಿಷಾಂತಯ, ಧೂಮಾವತಿ, ಪಂಜುರ್ಲಿ, ಕಲ್ಲುರ್ಟಿ, ಕಲ್ಕುಡ, ನೆತ್ತರ್‌ಕಣ ಮತ್ತು ಪರಿವಾರ ದೈವಗಳ ದೈವಸ್ಥಾನದ ಶಿಲಾನ್ಯಾಸ ಕಾರ್‍ಯಕ್ರಮದಲ್ಲಿ ವಿಜ್ಞಾಪನಾ ಪತ್ರ ಅನಾವರಣಗೊಳಿಸಿ ಆಶೀರ್ವಚನ ನೀಡಿದರು. ನಮ್ಮ ಹಿರಿಯರು ಅವಿದ್ಯಾವಂತರಾದರೂ ಸಭ್ಯ ಬದುಕಿನ ಸೂತ್ರಗಳನ್ನು ತಿಳಿದಿದ್ದರು. ಸಂಸ್ಕಾರವನ್ನು ನಿಯಮದಂತೆ ಪಾಲಿಸುತ್ತಿದ್ದರು ಮತ್ತು ಮನೆ ಸದಸ್ಯರಿಗೆ ಮಾದರಿಯಾಗುತ್ತಿದ್ದರು. ಆಧುನಿಕತೆಯ ನೆಪದಲ್ಲಿ ಸಾತ್ವಿಕ ಪದ್ಧತಿ ಕಡಿಮೆಯಾಗಿ ತಾಮಸ ಎಲ್ಲೆ ಮೀರುತ್ತಿದೆ. ಮುಂದೆ ಈ ಕ್ಷೇತ್ರದಲ್ಲಿ ಸಾತ್ವಿಕ ರೀತಿಯ ಆಚರಣೆಗೆ ಸಂಕಲ್ಪ ಮಾಡಬೇಕೆಂದು ತಿಳಿಸಿದರು.
ಮಾಜಿ ಶಾಸಕ ರುಕ್ಮಯ್ಯ ಪೂಜಾರಿ ಮಾತನಾಡಿ ದೈವರಾಧನೆ ಎಂದೂ ಸಹ ಮೂಢನಂಬಿಕೆಯಾಗಲು ಸಾಧ್ಯವಿಲ್ಲ. ಮೂಢನಂಬಿಕೆ ಎಂದು ಬಿಂಬಿಸಲು ಹೊರಟರೆ ಅನಾಹುತಕ್ಕೆ ದಾರಿಯಾಗ ಬಹುದು. ಕುಟುಂಬದ ದೈವಗಳ ಆರಾಧನೆಯ ಮೂಲಕ ಸಂಘಟನೆ, ಸಾಮರಸ್ಯತೆ, ನೆಂಟಸ್ತಿಕೆ ಸಂಬಂಧಗಳಿಗೆ ಮಹತ್ವ ನೀಡಲಾಗಿದೆ. ಹಿರಿಯರು ಗೌರವಿಸಲ್ಪಡುತ್ತಿದ್ದರು ಎಂದು ತಿಳಿಸಿದರು.
ಕುಂಟುಕುಡೇಲು ವೇ.ಮೂ. ರಘುರಾಮ ತಂತ್ರಿಗಳು ಶಿಲಾನ್ಯಾಸ ನೆರವೇರಿಸಿ ಸಭಾ ಕಾರ್‍ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹರಿಕೃಷ್ಣ ಶೆಟ್ಟಿ, ಉದ್ಯಮಿ ಮಂಜುನಾಥ ವಿಟ್ಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಪು ವಲಯ ಮೇಲ್ವೀಚಾರಕ ಸಂದೇಶ್ ಪಿ., ಪುಣಚ ಗ್ರಾ.ಪಂ. ಮಾಜಿ ಅಧ್ಯಕ್ಷ ರಾಮಕೃಷ್ಣ ಭಟ್ ಬಳಂತಿಮೊಗರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗಣೇಶ್ ಪೂಜಾರಿ ಬಳಂತಿಮೊಗರು ಉಪಸ್ಥಿತರಿದ್ದರು.
ರಾಮಕೃಷ್ಣ ಮೂಡಂಬೈಲು ಸ್ವಾಗತಿಸಿದರು. ರವಿಚಂದ್ರ ವಂದಿಸಿದರು. ಪ್ರಕಾಶ್ ಬಳಂತಿಮೊಗರು ಕಾರ್‍ಯಕ್ರಮ ನಿರೂಪಿಸಿದರು.
