ವಿಟ್ಲ: ಧರ್ಮವೆಂಬ ಕಂಬ ಭದ್ರವಾಗಿ ನೆಲೆವೂರಿ ಆಚರಣೆಯಲ್ಲಿದ್ದಾಗ ಉಳಿದ ಕಂಬಗಳೆಲ್ಲವೂ ಸಮರ್ಪಕವಾಗಿರುತ್ತದೆ. ಅದು ಬದುಕಿನ ಯಶಸ್ಸು ಆಗಿದೆ. ಧರ್ಮದ ಆಧಾರದಲ್ಲಿ ಬದುಕಿನ ರಥ ಸಾಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಗಳವರು ನುಡಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಫೆ.14 ಮತ್ತು 15ರಂದು ನಡೆಯಲಿರುವ ಶ್ರೀಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆ 2019ರ ಪೂರ್ವಭಾವಿ ಸಭೆಯಲ್ಲಿ ಆಶೀರ್ವಚನ ನೀಡಿದರು. ಜಾತ್ರೋತ್ಸವ ಮಾನವೀಯ ಮೌಲ್ಯದ ಕೊಂಡಿಯಾಗಬೇಕು. ಜಾತ್ರೆಯ ಮೂಲಕ ಸಂಘಟನೆ ಗಟ್ಟಿಯಾಗಬೇಕು. ಕಡಲಿನಂತಹ ಕ್ರಿಯಾಶೀಲತೆ, ಗಂಭೀರತೆ ಸಂಘಟನಯೊಳಗಿರಬೇಕು ಎಂದ ಅವರು ತುಳುನಾಡ್ದ ಜಾತ್ರೆಯಲ್ಲಿ ತುಳು ಭಾಷೆ, ಸಂಸ್ಕೃತಿ ಉಳಿವುಬೆಳೆವಿನ ಬಗ್ಗೆ ವಿಚಾರ ಮಂಥನ ನಡೆಯಲಿದೆ ಎಂದರು.

ಅದೃಷ್ಟ ತುಳುವೆ-ಬಂಗಾರ್ ಪೆಜಿವೆ :
ಫೆ.14ರಂದು ತುಳು ಕಾರ್ಯಕ್ರಮದ ಆರಂಭದ ಅಂದರೆ ಬೆಳಗ್ಗೆ ಗಂಟೆ 9.30ರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಅದೃಷ್ಟ ತುಳುವೆ-ಬಂಗಾರ್ ಪೆಜಿವೆ ಎಂಬ ಸ್ಪರ್ಧೆ ಆಯೋಜಿಸಲಾಗಿದೆ. 5 ಮಂದಿ ಅದೃಷ್ಟವಂತರನ್ನು ಆಯ್ಕೆ ಮಾಡಲಾಗುತ್ತದೆ. ಅದೃಷ್ಟರಿಗೆ 1 ಗ್ರಾಂ ಚಿನ್ನದ ನಾಣ್ಯ ಸಿಗಲಿದೆ ಎಂದು ಘೋಷಿಸಿದರು.
ಸಾಧ್ವಿ ಶ್ರೀ ಮಾತಾನಂದಮಯೀ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎ.ಸುರೇಶ್ ರೈ, ಕರೋಪಾಡಿ ಗ್ರಾ.ಪಂ.ಅಧ್ಯಕ್ಷೆ ಬೇಬಿ ಆರ್.ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಮಂಗಳೂರು ಘಟಕದ ಉಪಾಧ್ಯಕ್ಷ ವೇಣುಗೋಪಾಲ ಮಾರ್ಲ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಉಪಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ.ಶೆಟ್ಟಿ, ಒಡಿಯೂರುಶ್ರೀ ಗ್ರಾಮವಿಕಾಸ ಯೋಜನೆಯ ಕನ್ಯಾನ ಗ್ರಾಮ ಸಮಿತಿ ಅಧ್ಯಕ್ಷ ಕೆ.ಪಿ.ರಘುರಾಮ ಶೆಟ್ಟಿ, ಕರೋಪಾಡಿ ಗ್ರಾಮ ಸಮಿತಿ ಅಧ್ಯಕ್ಷ ರಘುನಾಥ ಶೆಟ್ಟಿ ಪಟ್ಲಗುತ್ತು, ಕಾರ್‍ಯನಿರ್ವಾಹಕ ಪದ್ಮನಾಭ ಒಡಿಯೂರು ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾ ಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್ ಅವರು ಮಾತನಾಡಿ, ಫೆ.14 ಮತ್ತು 15ರಂದು ಶ್ರೀ ಗುರುದೇವ ವಿದ್ಯಾ ಸಂಸ್ಥೆಗಳಲ್ಲಿ ವಿಜ್ಞಾನ ವಸ್ತುಪ್ರದರ್ಶನವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. ಒಡಿಯೂರುಶ್ರೀ ಗ್ರಾಮವಿಕಾಸ ಯೋಜನೆಯ ಬಂಟ್ವಾಳ ತಾಲೂಕು ವಿಸ್ತರಣಾಧಿಕಾರಿ ಸದಾಶಿವ ಅಳಿಕೆ ಪ್ರಸ್ತಾಪಿಸಿ, ನಿರೂಪಿಸಿದರು. ಯಶವಂತ ವಿಟ್ಲ ಸ್ವಾಗತಿಸಿದರು. ಮಾತೇಶ್ ಭಂಡಾರಿ ವಂದಿಸಿದರು.