ವಿಟ್ಲ: ವೇದವೆಂಬ ಜ್ಞಾನದ ವಿಜ್ಞಾನ, ಯೋಗವೆಂಬ ಜೀವನ ವಿಜ್ಞಾನ, ಭಗವದ್ಗೀತೆ ಎಂಬ ಮನೋವಿಜ್ಞಾನ, ಸಂಸ್ಕೃತ ಭಾಷೆ ಎಂಬ ಭಾಷಾ ವಿಜ್ಞಾನ, ಆಯುರ್ವೇದ ಎಂಬ ಆರೋಗ್ಯ ವಿಜ್ಞಾನ, ಕೃಷಿ ಎಂಬ ಭಾರತದ ಬದುಕಿನ ವಿಜ್ಞಾನ ಈ ಎಲ್ಲಾ ವಿಚಾರಗಳನ್ನು ಜಗತ್ತು ಭಾರತದಿಂದ ಬಯಸುತ್ತಿದೆ. ಇದರಿಂದ ನಮ್ಮ ಹೊಣೆ ಹೆಚ್ಚಾಗಿದ್ದು, ಜಗತ್ತಿನ ಹಸಿವನ್ನು ಇಂಗಿಸುವುದಕ್ಕಾಗಿ ಭಾರತ ಸಿದ್ದಗೊಳ್ಳಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಸೀತಾರಾಮ ಕದಿಲಾಯ ಹೇಳಿದರು.
ಅವರು ಮಂಗಳವಾರ ಮೂರುಕಜೆ ಅಜೇಯ ಟ್ರಸ್ಟ್ ಮೈತ್ರೇಯೀ ಗುರುಕುಲಮ್ ಅರ್ಧಮಂಡಲೋತ್ಸವ ನಿಮಿತ್ತ ಕೃಷಿಕರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಜಗತ್ತಿನ ಜನ ಆಧ್ಯಾತ್ಮಿಕ, ಧಾರ್ಮಿಕ  ಸಂಘಟನೆಗಳ ಹಿಂದೆ ಸಹಸ್ರಾರು ಸಂಖ್ಯೆಯಲ್ಲಿ ಓಡಿ ಬರುತ್ತಿದ್ದಾರೆ. ಸೌದಿ ಅರೇಬಿಯಾದ 60ಮಂದಿ ಮುಸಲ್ಮಾನ ಹೆಣ್ಣುಮಕ್ಕಳು ಭಾರತವನ್ನು ತಿಳಿಯುವ ಉದ್ದೇಶದಿಂದ ಭಾರತದ ಯುವತಿಯೊಬ್ಬರನ್ನು ಕರೆಸಿಕೊಂಡಿದ್ದಾರೆ. ಭಾರತ ವಿಶ್ವ ಗುರುವಾಗುವ ದಿನ ಹತ್ತಿರ ಬರುತ್ತಿದೆ ಎಂಬುದಕ್ಕೆ ಇದು ಪೂರಕವಾಗಿದೆ. ಇದಕ್ಕೆ ತಕ್ಕ ಹಾಗೆ ಯುವಕ ಯುವತಿಯರನ್ನು ಸಜ್ಜುಗೊಳಿಸುವ, ಸಿದ್ದಗೊಳಿಸುವ ಕಾರ್ಯ ಆಗಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ದ. ಕ. ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾ. ಕೊಂಕೋಡಿ ಕೃಷ್ಣ ಭಟ್ ಮಾತನಾಡಿ ಜಮೀನು ಮಾರುವ ಮೂಲಕ ಕೃಷಿಯ ನಾಶಕ್ಕೆ ಮುಂದಾಗುತ್ತಿದ್ದೇವೆ. ಗೋವು ಆಧಾರಿತ ಕೃಷಿ – ಕೃಷಿ ಆಧಾರಿತ ಗ್ರಾಮ – ಗ್ರಾಮಾಧಾರಿತ ದೇಶ ಮತ್ತು ಜಗತ್ತಿನಲ್ಲಿ ಶಾಂತಿ ಈ ಕಲ್ಪನೆಯ ದೇಶವನ್ನು ಕಟ್ಟಬೇಕಾಗಿದೆ. ಕೃಷಿ ದೇಶದ ಜೀವಾಳವಾಗಿದ್ದು, ಹಳ್ಳಿಯ ಇತಿಹಾಸ ಪರಂಪರೆ ನಾಶವಾಗುತ್ತಿದೆ. ಹಳ್ಳಿಗಳಲ್ಲಿರುವ ಯುವಕರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ಸಾವಯವ ಕೃಷಿ ಮತ್ತು ನರ್ಸರಿ ಮಾಡುತ್ತಿರುವ ಅಂಗನವಾಡಿ ಶಿಕ್ಷಕಿ ಹೇಮಾಮಾಲಿನಿ, ಉದ್ಯಮದಲ್ಲಿ ಸಾಧನೆಗೆ ಶುಭ ಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.
ಅರ್ಧಮಂಡಲೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಪಿ. ಸ್ವಾಗತಿಸಿದರು. ಶೃತಿ ಸನ್ಮಾನಿತರ ಪರಿಚಯ ಮಾಡಿದರು. ಗುರುಕುಲಮ್ನ ಕೃಷಿ ಪ್ರಮುಖ್ ಸಿದ್ದಪ್ಪ ವಂದಿಸಿದರು. ಪೂರ್ಣಿಮಾ ಕಾರ್ಯಕ್ರಮ ನಿರೂಪಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here