Tuesday, September 26, 2023

ಗೆಳೆಯನ ಹುಟ್ಟುಹಬ್ಬ ಆಚರಿಸಲು ತೆರಳಿದ ಮೂವರು ವಿದ್ಯಾರ್ಥಿಗಳು ನೀರು ಪಾಲು

Must read

ಉಪ್ಪಿನಂಗಡಿ: ಗೆಳೆಯನ ಹುಟ್ಟುಹಬ್ಬ ಆಚರಿಸಲು ನೇತ್ರಾವತಿ ನದಿಯ ಬದಿಗೆ ತೆರಳಿದ ಮೂವರು ಕಾಲೇಜು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಉಪ್ಪಿನಂಗಡಿಯಲ್ಲಿ ಮಂಗಳವಾರ ವರದಿಯಾಗಿದೆ. 34ನೇ ನೆಕ್ಕಿಲಾಡಿ ಆದರ್ಶ ನಗರ ನಿವಾಸಿ ಫಿರ್ಝಾನ್, ಪೆರ್ನೆ ಬಿಳಿಯೂರು ನಿವಾಸಿ ಮುಹಮ್ಮದ್ ಶಹೀರ್, ನೆಲ್ಯಾಡಿ ನಿವಾಸಿ ಮುಹಮ್ಮದ್ ಸುಹೈಲ್ ಮೃತ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.

ಇವರು ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾಗಿದ್ದು, ಫಿರ್ಝಾನ್ ನ ಹುಟ್ಟುಹಬ್ಬ ಪಾರ್ಟಿ ಆಚರಿಸಲು ಕಾಲೇಜಿನ ಸನಿಹದಲ್ಲಿರುವ ನೇತ್ರಾವತಿ ನದಿಗೆ ಸೋಮವಾರ ಸಂಜೆ ತೆರಳಿದ್ದರು ಎನ್ನಲಾಗಿದೆ.
ಉಪ್ಪಿನಂಗಡಿ ಜ್ಯೂನಿಯರ್‌ ಕಾಲೇಜ್‌ನ ಒಟ್ಟು 18 ಮಂದಿ ವಿದ್ಯಾರ್ಥಿಗಳು ನೇತ್ರಾವತಿ ನದಿ ತೀರಕ್ಕೆಂದು ತೆರಳಿ ಕೇಕ್ ಕತ್ತರಿಸಿ ಜನ್ಮದಿನಾಚರಣೆ ಸಂಭ್ರಮ ಆಚರಿಸಿಕೊಂಡಿದ್ದಾರೆ. ಆ ಬಳಿಕ 15 ಮಂದಿ ವಾಪಸಾಗಿದ್ದಾರೆ.

ಸಂಜೆ ಮೂವರು ವಿದ್ಯಾರ್ಥಿಗಳು ಮನೆಗೆ ಬಾರದಿದ್ದಾಗ ವಿದ್ಯಾರ್ಥಿಗಳ ಬಗ್ಗೆ ಪೋಷಕರು ವಿಚಾರಿಸಿದ್ದು, ಆಗಲೂ ಅವರ ಬಗ್ಗೆ ಯಾವುದೇ ಮಾಹಿತಿ ದೊರಕಿರಲಿಲ್ಲ. ಅವರು ನಾಪತ್ತೆಯಾಗಿರುವ ಬಗ್ಗೆ ಮನೆಯವರು ಮತ್ತಷ್ಟು ವಿಚಾರಿಸಿದಾಗ ಅವರು ನದಿ ಬದಿ ಕೇಕ್ ಹಿಡಿದುಕೊಂಡು ತೆರಳಿದ ವಿಚಾರ ವಿದ್ಯಾರ್ಥಿಯೋರ್ವ ಬಾಯ್ಬಿಟ್ಟ ಎನ್ನಲಾಗಿದೆ. ಮತ್ತೆ ಮನೆಯವರು ಮಧ್ಯರಾತ್ರಿ ನದಿಯತ್ತ ತೆರಳಿ ಇವರಿಗಾಗಿ ಹುಡುಕಾಟ ನಡೆಸಿದಾಗ ನದಿಯ ಸನ್ಯಾಸಿ ಕಯದಲ್ಲಿ ವಿದ್ಯಾರ್ಥಿಯೋರ್ವನ ಮೃತದೇಹ ರಾತ್ರಿ ಒಂದರ ಸುಮಾರಿಗೆ ಪತ್ತೆಯಾಗಿದೆ. ಅದೇ ಜಾಗದಲ್ಲಿ ಮತ್ತಿಬ್ಬರ ಮೃತದೇಹವೂ ಪತ್ತೆಯಾಗಿವೆ.

ಪುತ್ತೂರಿನ ಶವಾಗಾರಕ್ಕೆ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ, ಮೃತರ ಕುಟುಂಬಿಕರಿಗೆ ಸಾಂತ್ವಾನ ಹೇಳಿದರು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More articles

Latest article