ಉಜಿರೆ: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ರುದ್ರ ಭೂಮಿ ನಿರ್ಮಾಣವಾಗಿದ್ದು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ರುದ್ರಭೂಮಿಯ ಜಾಗವನ್ನು ಅಕ್ರಮ ಒತ್ತುವರಿ ಮಾಡದಂತೆ ತಡೆಯಬೇಕೆಂದು ಬೆಳ್ತಂಗಡಿ ತಾಲ್ಲೂಕಿನ ಎಲ್ಲಾಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ತಾನು ಈಗಾಗಲೆ ನಿರ್ದೇಶನ ನೀಡಿರುವುದಾಗಿ ಶಾಸಕ ಕೆ. ಹರೀಶ್ ಪೂಂಜ ಹೇಳಿದರು.
ಅವರು ಗುರುವಾರ ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಆಯೋಜಿಸಿದ ಕಾಯಾಗಾರದಲ್ಲಿ ಧರ್ಮಸ್ಥಳದ ವತಿಯಿಂದ ಹಿಂದೂ ರುದ್ರಭೂಮಿಗೆ ಅನುದಾನ ವಿತರಿಸಿ ಮಾತನಾಡಿದರು.
ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಕಳದ ಸಚ್ಚೇರಿಪೇಟೆ, ಮಂಜೇಶ್ವರ ಹಾಗೂ ಬೀದರ್‌ನ ಬಸವ ಕಲ್ಯಾಣದ ರುದ್ರಭೂಮಿ ಸಮಿತಿಯವರನ್ನು ಶಾಸಕರು ಗೌರವಿಸಿ ಅಭಿನಂದಿಸಿದರು.

                

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಜ್ಯದಲ್ಲಿ 501 ರುದ್ರಭೂಮಿ ನಿರ್ಮಾಣಗೊಂಡಿದ್ದು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಧರ್ಮಸ್ಥಳದ ಮೂಲಕವೇ ರುದ್ರಭೂಮಿ ಅಭಿವೃದ್ಧಿಗೆ ಅನುದಾನ ನೀಡುವಂತೆ ಸರ್ಕಾರವನ್ನು ತಾನು ಒತ್ತಾಯಿಸುವುದಾಗಿ ಶಾಸಕರು ಭರವಸೆ ನೀಡಿದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಉದ್ಯೋಗ ಖಾತರಿ ಯೋಜನೆ ಮೂಲಕ ದ.ಕ.ಜಿಲ್ಲಾ ಪಂಚಾಯಿತಿ ವತಿಯಿಂದ ರುದ್ರಭೂಮಿ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ನೀರು ವಿಶ್ರಾಂತಿಕೊಠಡಿ, ಗಿಡ-ಮರ ಬೆಳೆಸುವುದರೊಂದಿಗೆ ಸುಂದರ ಪ್ರಾಕೃತಿಕ ಪರಿಸರ ರೂಪಿಸಿ ರುದ್ರಭೂಮಿಯನ್ನು ಪ್ರವಾಸಿಧಾಮದಂತೆ ಆಕರ್ಷಕವಾಗಿ ರೂಪಿಸಿ ಸಂರಕ್ಷಣೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ರುದ್ರಭೂಮಿ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು.
ಹತ್ಯಡ್ಕ ವೇದಪಾಠ ಶಾಲೆಯ ಅಂಶುಮಾನ್‌ ಅಭ್ಯಂಕರ್, ಕಾರ್ಕಳ ಸಚ್ಚೇರಿಪೇಟೆಯ ಕೆ. ಸತ್ಯಶಂಕರ್ ಶೆಟ್ಟಿ ಮತ್ತು ತೆಕ್ಕಟ್ಟೆಯ ಸುರೇಂದ್ರ ದೇವಾಡಿಗ ಸಂಪನ್ಮೂಲ ವ್ಯಕ್ತಿಗಳಾಗಿ ರುದ್ರಭೂಮಿಯ ಮಹತ್ವದ ಬಗ್ಯೆ ಮಾಹಿತಿ, ಮಾರ್ಗದರ್ಶನ ನೀಡಿದರು.
ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ಸ್ವಾಗತಿಸಿದರು. ಪುಷ್ಪರಾಜ್‌ ಧನ್ಯವಾದವಿತ್ತರು. ಸೋಮಪ್ಪ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here