Sunday, October 22, 2023

ಬಿ.ಮೂಡ ಕಾಲೇಜಿನಲ್ಲಿ ತುಳು ಸಾಹಿತ್ಯ ಕಮ್ಮಟ

Must read

ಬಂಟ್ವಾಳ: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘದ ಸಹಯೋಗದೊಂದಿಗೆ ತುಳು ಸಾಹಿತ್ಯ ಕಮ್ಮಟ ಕಾಲೇಜಿನ ಸಭಾಂಗದಲ್ಲಿ ಶನಿವಾರ ನಡೆಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ.ಭಂಡಾರಿ ಅವರು ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿ, ಅಳಿವಿನಂಚಿನಲ್ಲಿರುವ ತುಳು ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಅಕಾಡಮಿ ನಿರಂತರ ಪ್ರಯತ್ನ ಮಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ, ಶಾಲಾ-ಕಾಲೇಜುಗಳಲ್ಲಿ ತುಳು ಸಂಸ್ಕೃತಿಯ ಸೊಗಡನ್ನು ಪರಿಚಯಿಸುವ ಕೆಲಸ ನಡೆಯುತ್ತಿದೆ. ತುಳು ಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ ಸಾಹಿತ್ಯ ಕಮ್ಮಟ, ಪುಸ್ತಕಗಳ ಬಿಡುಗಡೆ, ತುಳು ಕೃತಿಗಳನ್ನು ಇತರ ಭಾಷೆಗೆ ಅನುವಾದಿಸುವ ಕಾರ್ಯ ನಡೆಯುತ್ತಿದೆ. ಮುಂದಿನ ವರ್ಷದಿಂದ ಪದವೀ ತರಗತಿಗಳಲ್ಲಿ ತುಳುವನ್ನು ಐಚ್ಛಿಕ ಭಾಷೆಯಾಗಿ ಬಳಸಲಾಗುವುದು. ಅದಲ್ಲದೆ, ಪದವಿ ಪೂರ್ವ ಕಾಲೇಜುಗಳಲ್ಲಿ ತುಳು ಭಾಷೆಯನ್ನು ಕಲಿಯಲು ಅವಕಾಶ ಕೋರಿ ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಹೇಳಿದರು.


ಕಾಲೇಜಿನ ಪ್ರಾಚಾರ್ಯ ಯೂಸೂಫ್ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಎಸ್‌ವಿಎಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಚೇತನ್ ಮುಂಡಾಜೆ “ತುಳು ಸಾಹಿತ್ಯ”ಎಂಬ ವಿಚಾರದಲ್ಲಿ ವಿಷಯ ಮಂಡಿಸಿದರು.
ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ರಜನಿ ಚಿಕ್ಕಯಮಠ, ಅಕಾಡಮಿಯ ಸದಸ್ಯರಾದ ವಿಜಯ ಶೆಟ್ಟಿ ಸಾಲೆತ್ತೂರು, ಸುಧಾ ನಾಗೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ತುಳು ಕವಿತೆ, ತುಳು ಕತೆ, ತುಳು ಪತ್ರ ಲೇಖನ ಬರೆಯುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ನಡೆಯಿತು.
ಸಂಜೆ ಅಕಾಡಮಿ ಸದಸ್ಯೆ ವಿಜಯ ಶೆಟ್ಟಿ ಸಾಲೆತ್ತೂರು ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಕಮ್ಮಟದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪ್ರತೀ ವಿಭಾಗದಲ್ಲಿ ಅತ್ಯುತ್ತಮ ಬರಹಗಳಿಗೆ ಅಕಾಡಮಿ ಸದಸ್ಯೆ ಸುಧಾ ನಾಗೇಶ್ ಬಹುಮಾನ ವಿತರಿಸಿದರು.
ಅಕಾಡಮಿ ಸದಸ್ಯ ಎ.ಗೋಪಾಲ ಅಂಚನ್ ಪ್ರಸ್ತಾವಿಸಿದರು. ಕಾಲೇಜಿನ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಸ್ವಾಗತಿಸಿ, ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಬಾಲಕೃಷ್ಣ ನಾಯ್ಕ್ ವಂದಿಸಿದರು. ವಿದ್ಯಾರ್ಥಿನಿಯರಾದ ದೀಕ್ಷಿತಾ ಹಾಗೂ ಪ್ರಜ್ಞಾ ನಿರೂಪಿಸಿದರು. ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿದ್ದರು.

More articles

Latest article