Wednesday, October 25, 2023

ಮನುಷ್ಯನ ಸಾಧನೆ ಬದುಕಿಗೆ ದಾರಿ: ಅರವಿಂದ ಕೆ. ಬೋಳಾರ್

Must read

ಬಂಟ್ವಾಳ: ವ್ಯಕ್ತಿಯೊಬ್ಬ ಎಷ್ಟು ಬದುಕಿದ್ದಾನೆ ಎನ್ನುವುದು ಮುಖ್ಯವಲ್ಲ. ಹೇಗೆ ಬದುಕಿದ್ದಾನೆ ಎನ್ನುವುದು ಪ್ರಧಾನವಾಗುತ್ತದೆ. ಬದುಕಿನ ವಿವಿಧ ಹಂತಗಳಲ್ಲಿ ಆತ ಮಾಡುವ ಸಾಧನೆಗಳು ಆತನ ಭವಿಷ್ಯಕ್ಕೆ ದಾರಿಯಾಗುತ್ತದೆ. ಎಂದು ಖ್ಯಾತ ಚಲನ ಚಿತ್ರ ಮತ್ತು ನಾಟಕ ಕಲಾವಿದ ಅರವಿಂದ ಕೆ. ಬೋಳರ್ ಹೇಳಿದರು.
ಅವರು ಇಂದು ಬಂಟ್ವಾಳದ ಶ್ರೀ ವಂಕಟರಮಣ ಸ್ವಾಮಿ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು ಜನನಿ ಮತ್ತು ಜನ್ಮಭೂಮಿಯನ್ನು ಗೌರವಿಸುವ ಭಾವನೆ ನಮ್ಮದಾಗಬೇಕು. ಮನೆಯೇ ಮೊದಲ ಪಾಠಶಾಲೆ. ಅಲ್ಲಿ ಸಿಗುವ ಪ್ರೀತಿ, ವಿಶ್ವಾಸ ಮೊದಲಾದವು ನಮ್ಮ ಬದುಕನ್ನು ರೂಪಿಸುತ್ತದೆ ಎಂದವರು ಹೇಳಿದರು.
ಸಮಾರಂಭದ ಗೌರವ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ಚಲನಚಿತ್ರ ಕಲಾವಿದ ಪ್ರಣವ್ ಹೆಗ್ಡೆಯವರು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯು ಸರಳತೆಯನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಾದವರು ಶಿಸ್ತು, ಸರಳತೆಯನ್ನು ಅಳವಡಿಸಿಕೊಂಡಾಗ ವಿದ್ಯಾರ್ಥಿಯು ಅತ್ಯುನ್ನತ ಸ್ಥಾನಕ್ಕೆ ಏರಲು ಸಾಧ್ಯ ಎಂದರು.
ಸಮಾರಂಭದಲ್ಲಿ ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಅಖಿಲಾ ಪೈ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಿದ್ದಪಡಿಸಿದ ಕಾಲೇಜಿನ ಮೋಡೆಲ್‌ನ್ನು ಮುಖ್ಯ ಅತಿಥಿಗಳು ಬಿಡುಗಡೆಗೊಳಿಸಿದರು.
ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕೈಬರಹದಿಂದ ಬಿಡಿಸಿದ ಅರವಿಂದ ಬೋಳಾರ್ ಮತ್ತು ಪ್ರಣವ್ ಹೆಗ್ಡೆಯವರ ಚಿತ್ರಗಳನ್ನು ಮುಖ್ಯ ಅತಿಥಿಗಳಿಗೆ ನೀಡಲಾಯಿತು. ಕ್ರೀಡೆ, ಎನ್‌ಸಿಸಿ, ಯಕ್ಷಗಾನ ಮೊದಲಾದವುಗಳಲ್ಲಿ ವಿಶೇಷ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳು ಬಹುಮಾನ ನೀಡಿ ಗೌರವಿಸಿದರು.

ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಾಂಡುರಂಗ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶಶಿಕಲಾ ಕೆ. ಮತ್ತು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪದವಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲತೀಶ್ ಎಮ್. ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀವತ್ಸ ಅತಿಥಿಗಳ ಪರಿಚಯ ಮಾಡಿದರು. ಪದವಿ ಕಾಲೇಜಿನ ವಿದಾರ್ಥಿ ಸಂಘದ ಕಾರ್ಯದರ್ಶಿ ಕುಮಾರಿ ತೇಜಸ್ವಿ ಪಿ. ಮತ್ತು ಪದವಿ ಪೂರ್ವ ಕಾಲೇಜಿನ ವಿದಾರ್ಥಿ ಸಂಘದ ಕಾರ್ಯದರ್ಶಿ  ಶ್ರೀವಿದ್ಯಾ ಎ. ಇವರು ಸಂಘಗಳ ವರದಿಯನ್ನು ಮಂಡಿಸಿದರು. ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ.ಮಂಜುನಾಥ ಉಡುಪ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಲೆ| ಸುಂದರ್ ಬಹುಮಾನ ವಿತರಣಾ ಕಾರ್ಯಕ್ರಮ ನಿರ್ವಹಿಸಿದರು. ಪದವಿ ಕಾಲೇಜಿನ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಕುಮಾರಿ ಸೌಂದರ್ಯ ವಂದಿಸಿದರು. ವಿದ್ಯಾರ್ಥಿನಿ ಪಂಚಶ್ರೀ ಕಾರ್ಯಕ್ರಮ ನಿರೂಪಿಸಿದರು. ವಿದಾರ್ಥಿನಿ  ಮಾನಸ ಪ್ರಾರ್ಥಿಸಿದರು.

More articles

Latest article