Saturday, October 21, 2023

ಬೃಹತ್ ಉದ್ಯಮಿಗಳಿಗೆ ಲಾಭ ಮಾಡಿಕೊಟ್ಟಿರುವುದೇ ಕೇಂದ್ರ ಸರಕಾರದ ಸಾಧನೆ’-ಅಬ್ದುಲ್ ಮಜೀದ್ ಕೊಡ್ಲಿಪೇಟೆ

Must read

ವಿಟ್ಲ: ದೇಶದಲ್ಲಿ ಚೌಕಿದಾರ್ ಎಂದು ಹೇಳಿಕೊಳ್ಳುವ ಪ್ರಧಾನಿ ತಮ್ಮ ವಚನವನ್ನು ಪಾಲಿಸಿಲ್ಲ. ಬೃಹತ್ ಉದ್ಯಮಿಗಳಿಗೆ ಲಾಭ ಮಾಡಿಕೊಟ್ಟಿರುವುದೇ ಕೇಂದ್ರ ಸರಕಾರದ ಸಾಧನೆಯಾಗಿದ್ದು, ವಿಜಯ ಮಲ್ಯ, ನೀರವ್ ಮೋದಿಯರಂತಹ ವಂಚಕ ಉದ್ಯಮಿಗಳಿಗೆ ಈ ತನಕ ಯಾವೊಂದು ಶಿಕ್ಷೆಯೂ ಆಗಿಲ್ಲ. ಅಂಬಾನಿಯಂತಹ ಉದ್ಯಮಿಗೆ ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ 37, 584 ಕೋ. ರೂ. ಲಾಭ ಮಾಡಿಕೊಟ್ಟಿದ್ದಾರೆ. ಶೋಷಿತರು ಇಂದೂ ಸಹ ದೌರ್ಜನ್ಯ, ದಬ್ಬಾಳಿಕೆಗೆ ಒಳಗಾಗುತ್ತಿದ್ದಾರೆ. ಅಂತಹ ಜನರ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸಲು ಎಸ್‌ಡಿಪಿಐ ಪಣ ತೊಟ್ಟಿದ್ದು, ಈ ನಿಟ್ಟಿನಲ್ಲಿ ನಿರಂತರ ಆಂದೋಲನ ನಡೆಸಲಿದೆ. ಜನ ಜಾಗೃತಿ ಕೈಗೊಳ್ಳಲಿದೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್‍ಯದರ್ಶಿ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಹೇಳಿದರು.
ಅವರು ಪುಣಚ ಗ್ರಾಮದ ಅಜ್ಜಿನಡ್ಕದಲ್ಲಿ ಪುಣಚ ಗ್ರಾಮ ಎಸ್‌ಡಿಪಿಐ ವತಿಯಿಂದ ಭಾನುವಾರ ರಾತ್ರಿ ನಡೆದ ಜನಪರ ರಾಜಕೀಯ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಪ್ರಧಾನಮಂತ್ರಿ ಭೀಮಾ ಫಸಲ್ ಯೋಜನೆಯಲ್ಲಿ ಕೇಂದ್ರ ಸರಕಾರ ಅಂಬಾನಿ, ಅದಾನಿಯಂತಹ 13 ಪ್ರತಿಷ್ಠಿತ ಕಂಪೆನಿಗಳಿಗೆ 10 ಸಾವಿರ ಕೋ. ರೂ. ಲಾಭ ಮಾಡಿ ಕೊಟ್ಟಿದೆ. ಇದರ ಅರ್ಹ ಫಲಾನುಭವಿಗಳಿಗೆ ಪರಿಹಾರ ಸಹಾಯಧನ ಸರಿಯಾಗಿ ಮುಟ್ಟಲೇ ಇಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿಯವರ ಆಸ್ಪತ್ರೆಯೊಂದರಲ್ಲಿ ೩೨೫ಕ್ಕಿಂತಲೂ ಹೆಚ್ಚು ಮಕ್ಕಳು ಕೃತಕ ಆಮ್ಲಜನಕ ಕೊರತೆಯಿಂದ ಸತ್ತ ಸುದ್ದಿ ಪ್ರಚಾರಕ್ಕೇ ಬರಲೇ ಇಲ್ಲ ಎಂದು ಆಪಾದಿಸಿದ ಅವರು ಎಸ್‌ಡಿಪಿಐ ಒಂದೇ ಧರ್ಮ, ಜಾತಿ, ಮತಗಳ ಪರವಾಗಿ ನಿಲ್ಲದೇ ಅನ್ಯಾಯಕ್ಕೊಳಗಾದ ಜನರ ನ್ಯಾಯಕ್ಕಾಗಿ ಸದಾ ಶ್ರಮಿಸುತ್ತದೆ. ಹಸಿವು, ಭಯಮುಕ್ತ ಸಮಾಜ ನಿರ್‍ಮಾಣದ ಧ್ಯೇಯೋದ್ದೇಶ ಹೊಂದಿರುವ ಪಕ್ಷವನ್ನು ತಾವೆಲ್ಲರೂ ಬೆಂಬಲಿಸಬೇಕೆಂದು ತಿಳಿಸಿದರು.
ಕರ್ನಾಟಕ ರಾಜ್ಯ ಪಿಎಫ್‌ಐ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಮಾತನಾಡಿ ದೇಶದ ಸೈನ್ಯ ಇಲ್ಲದಿದ್ದರೂ ಸಹ ನಮ್ಮ ಕಾರ್‍ಯಕರ್ತರು ದೇಶವನ್ನು ರಕ್ಷಿಸಿಕೊಳ್ಳುವಷ್ಟು ಸಮರ್ಥರು ಎಂದು ಆರ್‌ಎಸ್‌ಎಸ್ ಹಿರಿಯ ಮೋಹನ ಭಾಗವತರ್ ಅಹಂಕಾರದಿಂದ ಹೇಳುತ್ತಾರೆ. ತ್ರಿವಳಿ ತಲಾಖ್ ಮುಸ್ಲಿಂ ಸಮುದಾಯಕ್ಕೆ ಯಾವೊಂದು ಸಮಸ್ಯೆಯನ್ನೂ ಉಂಟು ಮಾಡಿಲ್ಲ. ರಾಜಕೀಯ ಲಾಭವನ್ನಿಟ್ಟುಕೊಂಡೇ ಈ ವಿಧೇಯಕವನ್ನು ವಿರೋಧದ ಮಧ್ಯೆಯೂ ಮಂಡಿಸಿದ್ದಾರೆ ಎಂದು ಆರೋಪಿಸಿದರು.
ಸಮಾರಂಭದಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಕಾರ್‍ಯದರ್ಶಿ ಅಲ್ಫಾನ್ಸೋ ಫ್ರಾಂಕೋ, ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ, ದ.ಕ ಜಿಲ್ಲಾಧ್ಯಕ್ಷ ಅತ್ತಾವುಲ್ಲ ಜೋಕಟ್ಟೆ, ಕಾರ್‍ಯದರ್ಶಿ ಅಶ್ರಫ್ ಮಂಚಿ, ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಬೂಕ್ಕರ್ ಸಿದ್ದೀಕ್, ಜಿಲ್ಲಾ ಸಮಿತಿ ಸದಸ್ಯ ಆನಂದ ಮಿತ್ತಬೈಲು, ಜಾಬಿರ್ ಅರಿಯಡ್ಕ, ಬಂಟ್ವಾಳ ವಿಧಾನಸಭಾ ಉಪಾಧ್ಯಕ್ಷ ಕಲಂದರ್ ಪರ್ತಿಪ್ಪಾಡಿ, ಪುತ್ತೂರು ನಗರ ಸಮಿತಿ ಅಧ್ಯಕ್ಷ ಬಶೀರ್ ಪುತ್ತೂರು, ವಿಟ್ಲ ವಿಭಾಗದ ಪಿಎಫ್‌ಐ ಅಧ್ಯಕ್ಷ ಕಮರುದ್ದೀನ್ ಪರಿಯಾಲು, ಎಸ್‌ಡಿಪಿಐ ವಿಟ್ಲ ವಲಯ ಅಧ್ಯಕ್ಷ ರಹೀಂ ಕುಂಡಡ್ಕ, ಬುಳೇರಿಕಟ್ಟೆ ಗ್ರಾಮ ಸಮಿತಿ ಅಧ್ಯಕ್ಷ ಹೆಚ್.ಅಶ್ರಫ್ ಸಾಜ, ಕೆ.ಪಿ.ಇಸ್ಮಾಯಿಲ್ ಹಾಜಿ, ಪಕ್ರುದ್ದೀನ್ ಹಾಜಿ ಪಟಿಕಲ್ಲು, ಎಸ್‌ಡಿಪಿಐ ಪುಣಚ ಗ್ರಾಮ ಸಮಿತಿ ಅಧ್ಯಕ್ಷ ಇಬ್ರಾಹಿಂ ಕರೀಂ ಉಪಸ್ಥಿತರಿದ್ದರು.
ಎಸ್‌ಡಿಪಿಐ ಪುತ್ತೂರು ವಿಧಾನ ಸಭಾ ಸಮಿತಿ ಸದಸ್ಯ ಶಾಕೀರ್ ಅಳಕೆಮಜಲು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮುನೀರ್ ಮೂಡಾಬೆಟ್ಟು ವಂದಿಸಿದರು. ಶಾಫಿ ಪುಣಚ ಕಾರ್‍ಯಕ್ರಮ ನಿರೂಪಿಸಿದರು.

More articles

Latest article