Thursday, October 19, 2023

ಶಾಂತಿವನ ಟ್ರಸ್ಟ್: ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಪುರಸ್ಕಾರ ಸಮಾರಂಭ

Must read

ಉಜಿರೆ: ಹಿಂದೆ ನಮಗೆ ಆರ್ಥಿಕ ಬಡತನವಿದ್ದರೂ , ಸಾಂಸ್ಕೃತಿಕವಾಗಿ ಶ್ರೀಮಂತರಾಗಿದ್ದೆವು. ಆದರೆ ಈಗ ಆರ್ಥಿಕವಾಗಿ ಶ್ರೀಮಂತರಾಗಿದ್ದೇವೆ. ಸಾಂಸ್ಕೃತಿಕವಾಗಿ ಬಡವರಾಗಿದ್ದೇವೆ ಎಂದು ಹಾಸ್ಯ ಸಾಹಿತಿ ಎಚ್. ದುಂಡಿರಾಜ್ ಹೇಳಿದರು.
ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್‌ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ಆಶ್ರಯದಲ್ಲಿ ಜ್ಞಾನ ಗಂಗೆ ಮತ್ತು ಜ್ಞಾನ ತುಂಗೆ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ಸ್ಪರ್ಧೆಗಳ ವಿಜೇತರಿಗೆ ಪುರಸ್ಕಾರ ನೀಡುವ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು.

ಸಹಜವಾಗಿ ಬರೆದರೆ ಕಾವ್ಯಮಯವಾಗುತ್ತದೆ. ಒತ್ತಾಯಕ್ಕೆ ಬರೆದರೆ ಕಾವ್ಯ ಮಾಯವಾಗುತ್ತದೆ!
ಪ್ರಾಥಮಿಕ ಶಾಲಾ ಹಂತದಲ್ಲೇ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಓದುವ, ಬರೆಯುವ ಆಸಕ್ತಿ ಹೊಂದಿರಬೇಕು. ಪ್ರಾಸ, ರಾಗ, ತಾಳ, ಲಯದ ಬಗ್ಯೆ ತಿಳುವಳಿಕೆ ಇದ್ದರೆ ಸುಲಭದಲ್ಲಿ ಕವನಗಳನ್ನು, ಚುಟುಕಗಳನ್ನು ರಚಿಸಬಹುದು.
ಅಂಕಗಳಿಕೆ, ಉದ್ಯೋಗಕ್ಕಾಗಿ ಮಕ್ಕಳ ಮೇಲೆ ಒತ್ತಡ ಹಾಕಬಾರದು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೂ ಶಿಕ್ಷಕರು ಮತ್ತು ರಕ್ಷಕರು ಪ್ರೋತ್ಸಾಹ ನೀಡಬೇಕು. ನೈತಿಕ ಮೌಲ್ಯಾಧಾರಿತ ಪುಸ್ತಕಗಳ ವಿತರಣೆ ಮೂಲಕ ಹೆಗ್ಗಡೆಯವರು ಶಿಕ್ಷಣದ ಮೂಲಕ ಸಭ್ಯ, ಸುಸಂಸ್ಕೃತ ನಾಗರಿಕರನ್ನು ರೂಪಿಸುತ್ತಿದ್ದಾರೆ. ಸರ್ಕಾರ ಮಾಡಬೇಕಾದ ಕಾರ್ಯವನ್ನು ಹೆಗ್ಗಡೆಯವರು ಮಾಡುತ್ತಿರವುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಸಿ ಹಂಚಿದರೆ ವನಮಹೋತ್ಸವ. ಖುಷಿ ಹಂಚಿದರೆ ಜೀವನ ಮಹೋತ್ಸ. ಆದುದರಿಂದ ಕಲೆ, ಸಂಸ್ಕೃತಿ ಮೂಲಕ ಖುಷಿ ಹಂಚೋಣ. ಶಾಂತಿ, ನೆಮ್ಮದಿಯ ಜೀವನ ನಡೆಸೋಣ ಎಂದು ಅವರು ಹಾರೈಸಿದರು.

       
ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಶಿಕ್ಷಣದ ಮೂಲಕ ಜ್ಞಾನ ವೃದ್ಧಿಸಿಕೊಂಡು ಆದರ್ಶ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳ ಭವಿಷ್ಯವೇ ದೇಶದ ಭಾಗ್ಯವಾಗಿದೆ. ಕೆಟ್ಟ ಗುಣಗಳನ್ನು ತ್ಯಜಿಸಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಮಾನವರಾಗಬೇಕು. ವಿಶ್ವಮಾನವರಾಗಬೇಕು. ಶಿಕ್ಷಣದ ಜೊತೆಗೆ ಬದುಕಿನ ಪಾಠವನ್ನೂ ಕಲಿಯಬೇಕು ಎಂದು ಹೆಗ್ಗಡೆಯವರು ಕಿವಿಮಾತು ಹೇಳಿದರು.
ಶ್ರದ್ಧಾ ಅಮಿತ್, ಭಾರತಿ ದುಂಡಿರಾಜ್, ಮತ್ತು ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಮಧುಕರ್ ಮತ್ತು ಚಂದ್ರಶೇಖರ ಕೆದಿಲಾಯ ಉಪಸ್ಥಿತರಿದ್ದರು.
ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಶಶಿಕಾಂತ ಜೈನ್ ಸ್ವಾಗತಿಸಿದರು. ಉಡುಪಿ ಜಿಲ್ಲಾ ಸಂಘಟಕ ಅಶೋಕ ಸಿ. ಪೂಜಾರಿ ಧನ್ಯವಾದವಿತ್ತರು. ಬಂಟ್ವಾಳದ ಸದಾಶಿವ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

More articles

Latest article