ವಿಟ್ಲ: ಸಂಘಟಿತರಾಗಿ ಕೆಲಸ ಮಾಡಿದಾಗ ಧರ್ಮಕೇಂದ್ರಗಳ ಬೆಳವಣಿಗೆಯಾಗುತ್ತದೆ. ಎಲ್ಲರೂ ಒಂದೇ ಮನಸ್ಸಿನಿಂದ ಒಟ್ಟು ಸೇರಿ ಕೆಲಸ ಮಾಡಿದಾಗ ಯಶಸ್ಸು ಗಳಿಸಬಹುದು ಎಂದು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಸಲ್ದಾನಾ ಹೇಳಿದರು.
ಅವರು ಭಾನುವಾರ ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದಲ್ಲಿ ಸಮುದಾಯ ದಿನ ಆಚರಣೆ, ನವೀಕರಣಗೊಂಡ ನೂತನ ಸ್ಮಶಾನ ಹಾಗೂ ತೆರೆದ ಸಭಾಂಗಣ ಲೋಕಾರ್ಪಣೆಗೊಳಿಸಿ, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ನಾನು ಹಿಂದೆ ಇಲ್ಲಿ ಸೇವೆ ಸಲ್ಲಿಸುವ ವೇಳೆ ಸಿಕ್ಕಿದ ಅನುಭವಗಳು ಉತ್ತಮವಾಗಿತ್ತು. ಆ ಅನುಭವಗಳನ್ನು ಎಲ್ಲಾ ಕಡೆ ಹೇಳುತ್ತಿದ್ದೇನೆ. ಇದು ಎಲ್ಲರಿಗೂ ಪ್ರೇರಣೆಯಾಗಿದೆ. ಪೆರುವಾಯಿ ಧರ್ಮ ಕೇಂದ್ರ ಎಲ್ಲರಿಗೂ ಮಾದರಿಯಾಗಿ ಕೆಲಸ ಮಾಡುತ್ತಿದೆ ಪೆರುವಾಯಿ ವ್ಯಾಪ್ತಿಯಲ್ಲಿ ಹಲವು ಬಡವರಿದ್ದರೂ ಕೂಡಾ ಅವರು ಉದಾರ ಮನಸ್ಸು ಹೊಂದಿದವರು ಎಂದು ಹೇಳಿದರು.
ಸಭಾ ಕಾರ್‍ಯಕ್ರಮದಲ್ಲಿ ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಸಲ್ದಾನಾ ಹಾಗೂ ಪೆರುವಾಯಿ ಫಾತಿಮಾ ಮಾತೆಯ ಧರ್ಮ ಗುರುಗಳನ್ನು ಸನ್ಮಾನಿಸಲಾಯಿತು. ಚರ್ಚ್‌ಗೆ ಸಹಕಾರ ನೀಡಿದ ಭಕ್ತರನ್ನು ಇದೇ ಸಂದರ್ಭ ಗೌರವಿಸಲಾಯಿತು. ನಾನಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು.
ನಿವೃತ್ತ ಧರ್ಮಗುರುಗಳಾದ ಪೀಟರ್ ಸೆರಾವೊ, ಅಲೋಶಿಯಸ್ ಡಿಸೋಜ, ಧರ್ಮಗುರು ಜೀವನ್ ಲೋಬೋ, ಮಂಗಳೂರು ಮಾಜಿ ಶಾಸಕ ಜೆ.ಆರ್ ಲೋಬೋ, ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಲ್ಫ್ ಡಿ’ಸೋಜ, ಸಾರಿಗೆ ಅಧಿಕಾರಿ ಜಾನ್ ಮಿಸ್ಕೀತ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ಸನ್ ಮೊಂತೆರೋ, ಕಾರ್‍ಯದರ್ಶಿ ವಿಲಿಯಂ ಡಿ’ಸೋಜ ಉಪಸ್ಥಿತರಿದ್ದರು.
ಧರ್ಮಗುರು ವಿಶಾಲ್ ಮೋನಿಸ್ ಸ್ವಾಗತಿಸಿದರು. ಕಾರ್‍ಯಕ್ರಮದ ಸಂಚಾಲಕ ವಿನ್ಸೆಂಟ್ ಡಿ’ಸೋಜ ವಂದಿಸಿದರು. ಸಂತೋಷ್ ಮೊಂತೆರೋ ಹಾಗೂ ಸೀಮಾ ಕಾರ್‍ಯಕ್ರಮ ನಿರೂಪಿಸಿದರು.


