Wednesday, October 18, 2023

ಪೆರುವಾಯಿ: ಕ್ರಿಸ್‌ಮಸ್ ಸೌಹಾರ್ದ ಕ್ರಿಕೆಟ್ ಪಂದ್ಯಾಟ

Must read

ವಿಟ್ಲ: ಭಗವಂತ ಸಾಮ್ರಾಜ್ಯದಲ್ಲಿ ಬದುಕಲು ಎಲ್ಲರಿಗೂ ಹಕ್ಕಿದೆ. ಇಲ್ಲಿ ಎಲ್ಲರೂ ಒಗ್ಗಟ್ಟಿನಲ್ಲಿ ಜೀವನ ನಡೆಸಬೇಕು. ಇದರಿಂದ ಜೀವನ ಸಾರ್ಥಕವಾಗುತ್ತದೆ. ಪ್ರಕೃತಿಯನ್ನು ದೇವರು ಸೃಷ್ಟಿಸಿದ್ದಾಗಿದ್ದು, ಅದಕ್ಕೆ ಜಾತಿ, ಧರ್ಮ ಪಂಥ ಯಾವುದೇ ಬೇಧವಿಲ್ಲ. ಆದರೆ ಜನರು ಮಾತ್ರ ಅಜ್ಞಾನಿಗಳಂತೆ ವರ್ತಿಸುತ್ತಿದ್ದಾರೆ ಎಂದು ಶ್ರೀಧಾಮ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ವತಿಯಿಂದ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಭಾನುವಾರ ನಡೆದ ಬಂಧುತ್ವ ಹಾಗೂ ಕ್ರಿಸ್‌ಮಸ್ ಸೌಹಾರ್ದ ಕ್ರಿಕೆಟ್ ಪಂದ್ಯಾಟದಲ್ಲಿ ಆಶೀರ್ವಚನ ನೀಡಿದರು.
ಪೆರುವಾಯಿ ಹಾಗೂ ಮಾಣಿಲ ಗ್ರಾಮ ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಹಿಂದೂ-ಮುಸ್ಲಿಂ-ಕ್ರೈಸ್ತ ಸಮುದಾಯದಿಂದ ಯಾರಿಗೂ ನೋವು ಆಗಬಾರದು ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದೇನೆ. ಪ್ರೀತಿ ವಿಶ್ವಾಸ ಯುವಕರಲ್ಲಿ ಬಂದಾಗ ರಾಮರಾಜ್ಯ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಶಾಂತಿ ಸೌಹಾರ್ದತೆ ಎಲ್ಲರಲ್ಲಿಯೂ ಬೆಳಗಲಿ ಎಂದು ಶುಭ ಹಾರೈಸಿದರು.
ಕನ್ಯಾನ ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಡಾ. ಶ್ರೀಶಶಿಕಾಂತಮಣಿ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ ಪರಿಸರ ಹಾಳು ಆಗಿಲ್ಲ. ನಮ್ಮ ಚಿಂತನೆ ಹಾಳಾಗಿದೆ. ಪರಸ್ಪರ ಪ್ರೀತಿ ವಿಶ್ವಾಸ ಇದ್ದಾಗ ಯಾವುದೇ ಸಮಸ್ಯೆಗಳು ಬರುವುದಿಲ್ಲ. ರಾಜಕೀಯ ಹಾಗೂ ಸ್ವಾರ್ಥದ ಉದ್ದೇಶಕ್ಕಾಗಿ ಜನರ ನಡುವೆ ಬೇಧಭಾವಗಳು ಉಂಟಾಗುತ್ತಿದೆ. ಸೌಹಾರ್ದತೆಯಿಂದ ಪ್ರಾರ್ಥನಾ ಕೇಂದ್ರಗಳು ಕಾರ್‍ಯಾಚರಿಸುವ ಅನಿವಾರ್‍ಯತೆ ಇದೆ ಎಂದು ಹೇಳಿದರು.
ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ವಿಶಾಲ್ ಮೋನಿಸ್ ಮಾತನಾಡಿ ದೇವರ ಸ್ಥಳದಲ್ಲಿ ಸೌಹಾರ್ದತೆ ಬೇಕು. ಸಮಾಜದಲ್ಲಿ ರಾಜಕೀಯ ಧರ್ಮ ದೊಡ್ಡದು ಎಂದು ತಿಳಿದುಕೊಂಡಾಗ ಅದು ಸಮಾಜವಾಗುವುದಿಲ್ಲ. ಸಮಾಜದಲ್ಲಿ ಎಲ್ಲವೂ ಇದ್ದಾಗ ಅದಕ್ಕೆ ಅರ್ಥ ಬರುತ್ತದೆ. ಬಣ್ಣ, ಭಾಷೆ, ಧರ್ಮದ ವಿಷಯದಲ್ಲಿ ನಾವು ಬೇರೆ ಬೇರೆ ಆಗುವುದು ಬೇಡ ಎಲ್ಲರೂ ಒಂದಾಗಿ ಮುನ್ನಡೆಯಬೇಕು. ಇದರಿಂದ ಉತ್ತಮ ಸಮಾಜ ನಿರ್‍ಮಾಣಗೊಳ್ಳುತ್ತದೆ ಎಂದು ಕರೆ ನೀಡಿದರು.
ಕುಕ್ಕಾಜೆ ಕಾಳಿಕಾಂಬಾ ಕ್ಷೇತ್ರದ ಧರ್ಮದರ್ಶಿ ಶ್ರೀ ಕೃಷ್ಣ ಗುರೂಜಿ, ಪೆರುವಾಯಿ ಬದ್ರಿಯಾ ಜುಮಾ ಮಸೀದಿ ಖತೀಬು ಮುಹಮ್ಮದ್ ಶರೀಫ್ ಮದನಿ, ಪೆರುವಾಯಿ ಮುಹಿಯ್ಯುದ್ದೀನ್ ಜುಮಾ ಮಸೀದಿಯ ಅಬ್ದುಲ್ ಗಫೂರ್ ಹನೀಫಿ, ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಚರ್ಚ್ ಪಾಲನ ಉಪಾಧ್ಯಕ್ಷ ಜೋನ್ಸನ್ ಮೊಂತೇರೊ, ಕಾರ್ಯದರ್ಶಿ ವಿಲಿಯಂ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.
ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಲ್ಫ್ ಡಿ’ಸೋಜ ಸ್ವಾಗತಿಸಿದರು. ದೀಕ್ಷಿತಾ ನಿರೂಪಿಸಿದರು. ರಾಕೇಶ್ ವಂದಿಸಿದರು.

More articles

Latest article