ಬಂಟ್ವಾಳ: ನೇತ್ರಾವತಿ ನದಿಗೆ ಶಂಭೂರಿನಲ್ಲಿ ಎಎಂಆರ್ ಸಂಸ್ಥೆಯಿಂದ ನಿರ್ಮಿಸಲಾದ ಅಣೆಕಟ್ಟಿನಿಂದ ಸರಪಾಡಿ ಗ್ರಾ.ಪಂ. ವ್ಯಾಪ್ತಿಯ ಪೆರ್ಲ-ಬೀಯಪಾದೆಯಲ್ಲಿ ಹಲವಾರು ಸಮಸ್ಯೆಗಳು ಉಂಟಾಗಿದ್ದು, ರಸ್ತೆ ಮೊದಲಾದ ಮೂಲಭೂತ ಸೌಲಭ್ಯಗಳು ಸಹಿತ ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬಿದ್ದಿದೆ.
ಸರಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೂಪಾಡಿಕಟ್ಟೆಯಿಂದ ಸರಪಾಡಿಯನ್ನು ಸಂಪರ್ಕಿಸುವ ರಸ್ತೆ ನೇತ್ರಾವತಿ ನದಿ ಬದಿ ಹಾದು ಹೋಗಿದೆ. ಈ ರಸ್ತೆಯನ್ನು ಸಾವಿರಾರು ಜನರು ಅವಲಂಬಿಸಿದ್ದಾರೆ. ಆದರೆ ಅಣೆಕಟ್ಟಿನಿಂದಾಗಿ ನದಿ ನೀರು ಏರಿಕೆಯಾಗುತ್ತಿದ್ದು, ಮಳೆಗಾಲದಲ್ಲಂತೂ ಉಕ್ಕಿ ಹರಿಯುತ್ತದೆ. ನದಿ ನೀರು ಏರಿಕೆಯಾದಲ್ಲಿ ರಸ್ತೆಗೆ ಸಮರ್ಪಕವಾಗಿ ತಡೆಗೋಡೆ ನಿರ್ಮಿಸದಿರುವುದರಿಂದ ಗ್ರಾಮಸ್ಥರಿಗೆ ಸಂಚಾರಕ್ಕೆ ತೊಡಕಾಗಿದ್ದು ಈ ಭಾಗದ ಜನರಿಗೆ ಸಮಸ್ಯೆಯಾಗಿದೆ.
ಪ್ರಸ್ತುತ ಸಂಸ್ಥೆಯಿಂದ ರಸ್ತೆ ಬದಿಗೆ ರಸ್ತೆಯೆತ್ತರಕ್ಕೆ ಮಾತ್ರ ತಡೆಗೋಡೆ ನಿರ್ಮಿಸಲಾಗಿದ್ದು ಅದರ ಮೇಲೆ ತಡೆ ಬೇಲಿ ನಿರ್ಮಿಸದೇ ಇರುವುದರಿಂದ ಗ್ರಾಮಸ್ಥರ ಪಾಲಿಗೆ ಬಗಲಲ್ಲಿ ಅಪಾಯವನ್ನು ಕಟ್ಟಿಕೊಂಡಂತಾಗಿದೆ. ಎತ್ತರವಿಲ್ಲದ ತಡೆಗೋಡೆಯಿಂದಾಗಿ ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಮುಳುಗಡೆಯಾಗುತ್ತಿದ್ದು ಸಾರ್ವಜನಿಕರು ತೊಂದರೆ ಪಡುತ್ತಿದ್ದಾರೆ.


ಪೆರ್ಲ ಬೀಯಪಾದೆಯಲ್ಲಿ ರಸ್ತೆ ಬದಿಯವರೆಗೆ ನೀರು ತುಂಬುವುದರಿಂದ ಸಂಚಾರ ಅಪಾಯಕಾರಿಯಾಗಿದೆ ಎಂದು ಸಾರ್ವಜನಿಕರು ಆಗಾಗ ಪ್ರತಿಭಟನೆ ನಡೆಸುತ್ತಿದ್ದರು. ಬೀಯಪಾದೆಯಿಂದ ಹಾದು ಹೋಗುವ ಈ ರಸ್ತೆ ಸರಪಾಡಿ ಮೂಲಕ ಉಪ್ಪಿನಂಗಡಿಗೆ ಸಂಪರ್ಕಿಸುತ್ತದೆ. ಇಲ್ಲಿ ಅಂಗನವಾಡಿ ಕೇಂದ್ರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಸೀದಿ ಇದ್ದು ಇಲ್ಲಿಗೆ ಬರುವ ಮಕ್ಕಳು ಎತ್ತರವಿಲ್ಲದ ತಡೆಗೋಡೆಯ ಮೇಲೆ ನಡೆದುಕೊಂಡು ಹೋಗುವುದರಿಂದ ಅಪಾಯ ಸಂಭವಿನಿಯತೆಯ ಬಗ್ಗೆ ನಿರ್ಲಕ್ಷಿಸುವಂತಿಲ್ಲ. ನಿತ್ಯ ಹಲವಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವುದರಿಂದ ಚಾಲಕ ಸ್ವಲ್ಪ ಎಡವಿದರೂ ವಾಹನ ಸಹಿತ ಪ್ರಯಾಣಿಕರು ನದಿ ಪಾಲಾಗುವುದು ಗ್ಯಾರಂಟಿ.
ಅಲ್ಲದೆ ಕೇವಲ ಒಂದು ಭಾಗಕ್ಕೆ ಮಾತ್ರ ಕಂಪೆನಿ ತಡೆಗೋಡೆ ನಿರ್ಮಿಸಿದೆ. ಇನ್ನೊಂದು ಭಾಗದಲ್ಲಿ ಕಲ್ಲು ಮಣ್ಣನ್ನು ತುಂಬಲಾಗಿದೆ. ಮಳೆಗಾಲದಲ್ಲಿ ನೀರಿನ ಅಲೆಗಳು ಬಡಿಯುವುದರಿಂದ ಮಣ್ಣಿನ ಸವೆತ ಉಂಟಾಗುತ್ತಿದೆ. ಕಳೆದ ಕೆಲವು ಸಮಯಗಳ ಹಿಂದೆ ಇದೇ ಸ್ಥಳದಲ್ಲಿ ಟ್ಯಾಂಕರೊಂದು ಉರುಳಿ ಬಿದ್ದು ಅವಘಡ ಸಂಭವಿಸಿದ್ದು ತಡೆಗೋಡೆ ನಿರ್ಮಿಸದಿರುವುದೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಸಮಸ್ಯೆಯ ಬಗ್ಗೆ ಹಲವು ಬಾರಿ ಕಂಪೆನಿಯ ಅಧಿಕಾರಿಗಳಿಗೆ ತಿಳಿಸಲಾಗಿದ್ದರೂ ಕಂಪೆನಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ .
ಸಾರ್ವಜನಿಕರು ಈ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳ ಗಮನ ಸೆಳೆದಿದ್ದರು. ಬೀಯಪಾದೆಗೆ ಸರ್ವಋತು ರಸ್ತೆ ನಿರ್ಮಾಣ, ಈಗಿರುವ ತಡೆಗೋಡೆಯನ್ನು ಎತ್ತರಕ್ಕೇರಿಸಬೇಕು ಅಥವಾ ಅಪಾಯ ಸಂಭವಿಸದಂತೆ ಸುರಕ್ಷ ಬೇಲಿ ಹಾಕಬೇಕು. ಜೊತೆಗೆ ಇನ್ನೊಂದು ಭಾಗಕ್ಕೂ ತಡೆಗೋಡೆಯನ್ನು ನಿರ್ಮಿಸಿಕೊಡಬೇಕು ಎನ್ನುವುದು ಗ್ರಾಮದ ಜನತೆಯ ಆಗ್ರಹವಾಗಿದೆ.


ಜ. 6: ಶಾಸಕರಿಂದ ಪರಿಶೀಲನೆ : ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಲ್ಲಿ ಈ ಸಮಸ್ಯೆ ಬಗ್ಗೆ ಮನವಿ ಮಾಡಲಾಗಿದ್ದು, ಜ. 6ರಂದು ಬೆಳಗ್ಗೆ 10 ಗಂಟೆಗೆ ಪೆರ್ಲ-ಬೀಯಪಾದೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿರುವರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here