ವಿಟ್ಲ: ಪಾಪ ಮತ್ತು ಪುಣ್ಯ ಸಂಪಾದನೆಯ ಸಂಘರ್ಷದಲ್ಲಿ ಜೀವನ ಸಾಗುತ್ತದೆ. ಉಸಿರಿನೊಂದಿಗೆ ಒಳ್ಳೆಯ ಹೆಸರು ಉಳಿದಾಗ ಮಾತ್ರ ನಾವು ಪಡೆದ ಮನುಷ್ಯ ಜನ್ಮ ಸಾರ್ಥಕತೆಯನ್ನು ಪಡೆಯುತ್ತದೆ. ನಮ್ಮ ಸಾಮಾನ್ಯ ಅರಿವನ್ನು ಮೀರಿದ ದೇವರು ಎಂಬ ವಿಭಿನ್ನ ಶಕ್ತಿಯ ಬಗೆಗಿನ ತಿಳಿವಿನ ಕೊರತೆಯಿಂದ ಅನರ್ಥಗಳು ಘಟಿಸುತ್ತಿವೆ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಅವರು ಮಾಣಿಲ ಶ್ರೀಧಾಮಧ ಶ್ರೀ ಮಹಾಲಕ್ಷ್ಮೀ ಕೇತ್ರದಲ್ಲಿ ಶನಿವಾರ ರಾತ್ರಿ ಶ್ರೀ ದೈವಗಳ ನೇಮೋತ್ಸವದ ಸಂದರ್ಭದಲ್ಲಿ ಉಮೇಶ್ ಬೊಮ್ಮಸಂದ್ರ ಹೊರ ತಂದ 2019 ವರ್ಷದ ಕ್ಯಾಲೆಂಡರ್ ಅನಾವರಣಗೊಳಿಸಿ ಮಾತನಾಡಿದರು. ಕ್ಯಾಲೆಂಡರಿನ ಪುಟಗಳಂತೆ ನಮ್ಮ ಜೀವನದ ಕ್ಷಣಗಳು ಕಳೆಯುತ್ತಿರುತ್ತವೆ. ಇದರ ಮಧ್ಯೆ ನಾವು ಪ್ರೀತಿಬಾಂಧವ್ಯದ ಮೂಲಕ ನಮ್ಮತನದಿಂದ ಬಾಳಬೇಕು ಎಂದರು.
ಸಮಾರಂಭದಲ್ಲಿ ಉದ್ಯಮಿಗಳಾದ ಭಾಸ್ಕರ ಶೆಟ್ಟಿ ಪುಣೆ, ದಯಾಂದ ಬಂಗೇರ ಮುಂಬೈ, ರಾಜೇಶ್ ಪಾಟೀಲ್ ಮುಂಬೈ, ಪ್ರಕಾಶ್ ಬೆಂಗಳೂರು, ಉಮೇಶ್ ಬೊಮ್ಮಸಂದ್ರ, ಮಹೇಶ್ ಮೂಲ್ಯ ಬೆಂಗಳೂರು, ತಿಮ್ಮಪ್ಪ ಬಿಡದಿ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಟ್ರಸ್ಟಿ ಚಂದ್ರಶೇಖರ್ ತುಂಬೆ ಇನ್ನಿತರರು ಉಪಸ್ಥಿತರಿದ್ದರು.
ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಟ್ರಸ್ಟಿ ಟಿ.ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿಯ ಅಧ್ಯಕ್ಷೆ ವನಿತಾ ವಿ. ಶೆಟ್ಟಿ ವಂದಿಸಿದರು. ಟ್ರಸ್ಟಿ ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಬಳಿಕ ಶ್ರೀ ಅಣ್ಣಪ್ಪ ಪಂಜುರ್ಲಿ ಹಾಗೂ ಶ್ರೀ ಕಲ್ಲುರ್ಟಿ ದೈವಗಳ ನೇಮೋತ್ಸವ ನಡೆಯಿತು.
ಮಾಣಿಲಶ್ರೀಧಾಮದಲ್ಲಿ ಶ್ರೀ ಅಣ್ಣಪ್ಪ ಪಂಜುರ್ಲಿ ಮತ್ತು ಶ್ರೀ ಕಲ್ಲುರ್ಟಿ ದೈವಗಳ ನೇಮೋತ್ಸವ ಸಂದರ್ಭದಲ್ಲಿ ಮಾಣಿಲಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರಿಂದ ಕ್ಯಾಲೆಂಡರ್ ಬಿಡುಗಡೆಗೊಂಡಿತು.
