ಪ್ರತಿ ತಿಂಗಳ ಮೊದಲ ಶನಿವಾರ ಮಹಾಕಾವ್ಯದ ಸರಣಿ ಕಾರ್ಯಕ್ರಮ
ಮುಂಬಯಿ (ಮಂಗಳೂರು): ತುಳು ವಾಲ್ಮೀಕಿ ಮಂದಾರ ಕೇಶವ ಭಟ್ಟರ ‘ಮಂದಾರ ರಾಮಾಯಣ’ ತುಳು ಮಹಾಕಾವ್ಯದ ಸರಣಿ ಕಾರ್ಯಕ್ರಮ ಪ್ರತಿ ತಿಂಗಳ ಮೊದಲ ಶನಿವಾರ ಬೆಳಿಗ್ಗೆ 11.30 ಗಂಟೆಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಕಾವ್ಯರೂಪಕವನ್ನು ದ.ಕ.ಜಿಲ್ಲೆಯ ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ಪ್ರಸ್ತುತಪಡಿಸುತ್ತಿದೆ.

ಹೊಸ ಪರಿಕಲ್ಪನೆಯೊಂದಿಗೆ ಮೂಡಿಬರುವ ’ಮಂದಾರ ರಾಮಾಯಣ’ ತುಳು ಕಾವ್ಯರೂಪಕದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಕವಿ-ಲೇಖಕ ಮತ್ತು ಯಕ್ಷಗಾನ ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕೃತಿ ಪರಿಚಯದೊಂದಿಗೆ ವ್ಯಾಖ್ಯಾನ ನೀಡುವರು. ಖ್ಯಾತ ಗಾಯಕ ಮತ್ತು ಹರಿದಾಸ ತೋನ್ಸೆ ಪುಷ್ಕಳಕುಮಾರ್ ಕಾವ್ಯವಾಚನ ಮಾಡುವರು. ಅಲ್ಲದೆ ವಿಶೇಷವಾಗಿ ಶ್ರೀಧರ ರೈ ಕಾಸರಗೋಡು ಅವರ ಮೃದಂಗ ಹಾಗೂ ಬೆಂಗಳೂರಿನ ರಾಜೀವ ಲೋಚನ ಎಂ.ಎಸ್ ಅವರ ಪಿಟೀಲು ವಾದನದ ಹಿಮ್ಮೇಳವೂ ಇದೆ.

ಕೊಣಾಜೆ ನೃತ್ಯ ಲಹರಿ ನಾಟ್ಯಾಲಯದ ವಿದುಷಿ ರೇಷ್ಮಾ ನಿರ್ಮಲ್ ಭಟ್ ಅವರ ನೃತ್ಯ ನಿರ್ದೇಶನದಲ್ಲಿ ರೂಪಕಕ್ಕೆ ದೃಶ್ಯ ಸಂಯೋಜನೆ ಮಾಡಲಾಗಿದೆ. ರೇಶ್ಮಾ ನಿರ್ಮಲ್, ದೀಪಿಕಾ ಭಟ್, ಶ್ರೀರಕ್ಷಾ, ರೇಷ್ಮಾ, ಭಾಗ್ಯ, ರಶ್ಮಿ, ಸೌಮ್ಯ, ಯಶಸ್ ಭಟ್ ಮತ್ತು ಶ್ರೇಯಾ ರಾಮಾಯಣದ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದೂರದರ್ಶನದ ಎಂ.ಆರ್.ಸುಜಾತ ಅವರ ತಾಂತ್ರಿಕ ನಿರ್ದೇಶನದಲ್ಲಿ ತುಳು ವಿಭಾಗದ ಲಕ್ಷಿ ಕಾರಂತ್ ಎಂ.ಎಸ್ ಈ ಕಾರ್ಯಕ್ರಮವನ್ನು ನಿರ್ಮಿಸಿ ಪ್ರಸಾರಕ್ಕೆ ಅಣಿಗೊಳಿಸಿದ್ದಾರೆ.

ಮಂದಾರ ರಾಮಾಯಣದ ಆರಂಭದಲ್ಲಿ ಬರುವ ಪುಂಚದ ಬಾಲೆ, ಬಂಗಾರ್ದ ತೊಟ್ಟಿಲ್, ಅಜ್ಜೇರೆ ಸಾಲೆ, ಮದಿಮೆದ ದೊಂಪ, ಸೇಲೆದ ಸೋಲು ಈ ಐದು ಅಧ್ಯಾಯಗಳನ್ನು 13 ಕಂತುಗಳಲ್ಲಿ ಚಿತ್ರೀಕರಿಸಿ ಕೊಳ್ಳಲಾಗಿದ್ದು ಅದು ಸರಣಿ ರೂಪದಲ್ಲಿ ಪ್ರತಿ ತಿಂಗಳ ಮೊದಲ ಶನಿವಾರ ದೂರದರ್ಶನದಲ್ಲಿ ಪ್ರಸಾರವಾಗುವುದು.

ಇದೇ ಜ.5 ರಂದು ಶನಿವಾರ ಬೆಳಿಗ್ಗೆ 11.30 ಗಂಟೆಗೆ ಬೆಂಗಳೂರು ದೂರದರ್ಶನದ ಚಂದನ ವಾಹಿನಿಯಲ್ಲಿ ಸರಣಿಯ ಪ್ರಥಮ ಕಂತು ಪ್ರಸಾರ ಆರಂಭಿಸಿತು. ಕವಿ ದಿ| ಮಂದಾರ ಕೇಶವ ಭಟ್ಟರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ಈ ಕಾರ್ಯಕ್ರಮ ಸಂಯೋಜಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here