- ಯಾದವ ಕುಲಾಲ್
ಬಿ.ಸಿ.ರೋಡು: ಮಂಡಾಡಿ ಅತಿ ಹೆಚ್ಚು ಜನ ವಸತಿ ಇರುವ ಪ್ರವೇಶ. ಇಲ್ಲಿ ಹತ್ತಿರ ಹತ್ತಿರ ಹಲವಾರು ಮನೆಗಳಿವೆ. 1974ರಲ್ಲಿ ಬಂದ ಭೀಕರ ಪ್ರವಾಹದಿಂದ ನಿರಾಶ್ರಿತರಾದವರಿಗೆ ಇಲ್ಲಿ ಜಾಗ ನೀಡಿದ ಕಾರಣ ಹೆಚ್ಚಿನವರು ಮನೆಯನ್ನು ಕಟ್ಟಿಕೊಂಡು ಇಲ್ಲಿ ವಾಸಿಸುತ್ತಿದ್ದಾರೆ. ಆದರೆ ಅಲ್ಲೇ ಹತ್ತಿರದಲ್ಲಿ ದೊಡ್ಡ ದೊಡ್ಡ ಮರಗಳ ನಡುವೆ 7 ಫೀಟ್ ಎತ್ತರದ ಕಾಂಪೌಂಡ್ ಇರುವ ಒಂದು ಮನೆಯು ಸಂಪೂರ್ಣ ಪೊದೆಯೊಳಗೆ ಮುಚ್ಚಿ ಹೋಗಿದೆ. ಕಷ್ಟಪಟ್ಟು ಹತ್ತಿರ ಹೋಗಿ ನೋಡಿದರೆ ಅದು ಜನ ಸಾಮಾನ್ಯರ ಮನೆಯಲ್ಲ. ಬದಲಾಗಿ ಸರಕಾರಕ್ಕೆ ಸೇರಿದ ಒಂದು ವಸತಿಗೃಹ.
ಕಾಂಕ್ರೀಟ್ ರಸ್ತೆಗೆ ತಾಗಿಯೇ ಆ ಮನೆ ಇದ್ದು ಮನೆಗೆ ಗೇಟಿನ ಮುಖಾಂತರ ಹೋಗಲು ಸಾಧ್ಯವೇ ಇಲ್ಲ. ಅಂತೂ ಹೋಗ ಬೇಕಿದ್ದರೆ ಎತ್ತರದ ಕಂಪೌಂಡ್ ಹಾರಿಯೇ ಮುಳ್ಳುಗಳ ನೋವು ತಿಂದೇ ಅದರ ಒಳಗೆ ಹೋಗಬೇಕು. ಸುಮಾರು 14 ಸೆಂಟ್ಸ್ ಜಾಗದಲ್ಲಿ ಸುಮಾರು 650 ಸ್ಕ್ಯಾರ್ ಫೀಟ್ ವಿಸ್ತೀರ್ಣದ ಮನೆ. ಹಾಲ್, ಅಡುಗೆ ಕೋಣೆ, ಬಚ್ಚಲು ಮನೆ ಹೀಗೆ ಒಂದು ಪುಟ್ಟ ಸಂಸಾರವನ್ನು ನೋಡಿಕೊಳ್ಳುವಂತಹ ಸುಸಜ್ಜಿತ ಮನೆಯಂತಿತ್ತು. ಬಂಟ್ವಾಳ ತಾಲೂಕಿನ ಕೃಷಿ ಇಲಾಖೆಗೆ ಸೇರಿದ ಈ ವಸತಿ ಗೃಹ. ಈಗ ಜನರ ವಾಸ್ತವ್ಯ ಇಲ್ಲದೇ ಮನೆಯ ಒಳ ಹಾಗೂ ಹೊರ ಸಂಪೂರ್ಣ ಮರಗಳ ಬೇರುಗಳಿಂದ ಕೂಡಿದ್ದು ಭೂತದ ಬಂಗಲೆಯಂತಾಗಿದೆ.
ಕೆಲವು ವರ್ಷಗಳ ಹಿಂದೆ ಇಲ್ಲಿ ಕೃಷಿ ಅಧಿಕಾರಿಗಳು ಇಲ್ಲಿ ವಾಸ್ತವ್ಯ ಹೂಡಿದ್ದರಿಂದ ಅದು ಉತ್ತಮ ರೀತಿಯಲ್ಲಿ ಇತ್ತು. ಮನೆಯ ಹಿಂದುಗಡೆ ತೆಂಗಿನಮರಗಳಿವೆ. ಆದರೆ ಕಾಲ ಕಳೆದಂತೆ ಕೃಷಿ ಇಲಾಖೆಗೆ ಸಂಬಂಧಪಟ್ಟ ಯಾವುದೇ ಅಧಿಕಾರಿಗಳು ಇಲ್ಲಿ ವಾಸ್ತವ್ಯ ಹೂಡದೇ ಇರುವ ಕಾರಣ ಈ ಅವ್ಯವಸ್ಥೆ ಬಂದೊದಗಿದೆ. ಈ ಊರಿನ ಜನತೆ ಈ ವಸತಿಗೃಹದ ಗೊಡವೆಗೇ ಹೋಗದೆ ಇರುವ ಕಾರಣ ಇಲ್ಲಿರುವ ಒಂದು ವಸ್ತುವೂ ಇಟ್ಟಲ್ಲಿಂದ ಕದಲದೆ ಅಲ್ಲಿಯೇ ಉಳಿದಿದೆ. ಮನೆಯ ಹಂಚು, ಕಾಂಪೌಂಡ್ ಗೇಟ್ ಎಲ್ಲವೂ ಸರಿಯಾದ ಸ್ಥಿತಿಯಲ್ಲೇ ಇದೆ.
ಈ ಸುಸಜ್ಜಿತ ಕಟ್ಟಡವನ್ನು ಈ ರೀತಿಯಾಗಿ ಪಾಳುಗೆಡವುದಕ್ಕಿಂತ ಅದನ್ನು ಬೇರೆ ರೀತಿಯಲ್ಲಿ ಉಪಯೋಗಿಸುವ ಪ್ರಯತ್ನವನ್ನು ಮಾಡದೇ ಇರುವುದು ವಿಪರ್ಯಾಸವೇ ಸರಿ. ಸರಕಾರಕ್ಕೆ ಸಂಬಂಧಪಟ್ಟ ಕೆಲವು ಇಲಾಖೆಗಳಿಗೆ ಸರಿಯಾದ ಕಚೇರಿಯೇ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಇದನ್ನು ಬಳಸುವ ಪ್ರಯತ್ನ ಮಾಡಬಹುದಲ್ವೇ. ಅದಲ್ಲದೆ ಹತ್ತಿರದಲ್ಲೇ ಇರುವ ಹಾಲಿನ ಡೈರಿಯವರು ಯಾರಿಗೂ ಬಳಕೆಯಾಗದ ಮನೆಯನ್ನು ತಮಗೆ ನೀಡಿದರೆ ಅವರು ಅಲ್ಲಿ ತಮ್ಮ ಹಾಲಿನ ಡೈರಿಯನ್ನು ಮಾಡಿ ಉತ್ತಮ ರೀತಿಯಲ್ಲಿ ಅದನ್ನು ಇಟ್ಟುಕೊಳ್ಳುವ ಜೊತೆಗೆ ಉತ್ತಮ ಸ್ಥಳಾವಕಾಶ ಇರುವ ಕಾರಣ ಅವರ ಕೆಲಸವೂ ಸಸೂತ್ರವಾಗಿ ನಡೆಯುತ್ತದೆ ಎಂದು ಮನವಿ ಮಾಡಿದ್ದರೂ ಅವರಿಗೆ ಯಾವ ಸ್ಪಂದನೆಯೂ ಸಿಕ್ಕಿದ್ದಿಲ್ಲ. ಅಲ್ಲದೆ ಪಕ್ಕದಲ್ಲೇ ಇರುವ ಅಂಗನವಾಡಿ ಶಾಲೆಯಲ್ಲಿ ಕೂಡ ಜಾಗದ ಕೊರತೆ ಇದ್ದು, ಅಂಗನವಾಡಿಗೆ ಅವಕಾಶ ದೊರೆತಿದ್ದರೂ ಪುಟ್ಟ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಆಟಪಾಠಗಳನ್ನು ಕಲಿಯಲು ಸಾಧ್ಯವಾಗುತ್ತಿತ್ತು. ಅಲ್ಲದೆ ಪರಿಸರವೂ ಸ್ವಚ್ಛವಾಗಿರುತ್ತಿತ್ತು. ಆದರೆ ಯಾವುದಕ್ಕೂ ಗಮನ ಕೊಡದೆ ಹಾಗೆಯೇ ಒಂದು ಕಟ್ಟಡವನ್ನು ಹಾಳು ಗೆಡವುತ್ತಿರುವುದು ನಿಜವಾಗಿಯೂ ದುರಂತವೇ ಸರಿ.



********
ಸರಕಾರಿ ಉದ್ಯೋಗಿಗಳಿಗೆ ಅವಕಾಶ
ಯಾರೂ ವಾಸ್ತವ್ಯ ಇಲ್ಲದ ಕಾರಣ ನಮ್ಮ ಇಲಾಖೆಗೆ ಸೇರಿದ ಸರಕಾರಿ ವಸತಿ ನಿಲಯ ಪಾಳು ಬಿದ್ದಂತಾಗಿದೆ. ಯಾರಾದರೂ ಸರಕಾರಿ ಉದ್ಯೋಗಿಗಳು ಉಳಕೊಳ್ಳಲು ವಸತಿ ನಿಲಯ ಬೇಕಿದ್ದರೇ ಸರಕಾರಿ ನಿಯಮದಂತೆ ನೀಡಲಾಗುವುದು. ಇಲ್ಲಿ ಯಾವುದೇ ತೊಂದರೆ ಇಲ್ಲ, ಮನೆ ಬಾಗಿಲಿನವರೆಗೆ ರಸ್ತೆ, ಕಂಪೌಂಡು ಬದಿಯಲ್ಲೇ ನೀರಿನ ಬೋರ್‌ವೆಲ್ ವ್ಯವಸ್ಥೆ, ಹತ್ತಿರದಲ್ಲೇ ಶಾಲೆ, ಅಂಗನವಾಡಿ, ಕಾಲೇಜು ಹೀಗೆ ಎಲ್ಲಾ ಇದರ ಸುತ್ತಮುತ್ತಲೇ ಇದೆ.
– ಕೃಷಿ ಅಧಿಕಾರಿ, ಬಂಟ್ವಾಳ ಕೃಷಿ ಇಲಾಖೆ
********
ಸರಕಾರಿ ನಿಲಯ ಪಾಳು ಬಿದ್ದಿರುವುದು ತುಂಬಾ ಬೇಸರದ ಸಂಗತಿ. ಮನೆಗಳು ಇಲ್ಲದೇ ಕೆಲವರು ಈಗಲೂ ಒದ್ದಾಡುತ್ತಿದ್ದಾರೆ. ಆದರೆ ಇದೊಂದು ನೋಡಲಿಕ್ಕೆ ಭೂತದ ಬಂಗಲೆಯಂತಾಗಿದೆ. ಸರಕಾರಿ ಅಧಿಕಾರಿಗಳಿಗೆ ಮನವರಿಕೆ ಮಾಡಿ ಮುಂದಿನ ದಿನಗಳಲ್ಲಿ ಯಾವುದೇ ಸರಕಾರಿ ಇಲಾಖೆಗೆ ಸೇರಿದವರಿಗೆ ಉಳಕೊಳ್ಳುವ ವ್ಯವಸ್ಥೆಯನ್ನು ಮಾಡಲು ಪ್ರಯತ್ನಿಸುತ್ತೇನೆ.
– ಗಂಗಾಧರ, ಪುರಸಭಾ ಸದಸ್ಯರು