ವಿಟ್ಲ: ವಿಟ್ಲದ ವಿಠಲ ವಿದ್ಯಾ ಸಂಘದ ಹಿರಿಯ ವಿದ್ಯಾರ್ಥಿಗಳನ್ನು ಒಂದೇ ಸೂರಿನಡಿ ಸೇರಿಸಿ ಸಕುಟುಂಬ ಸ್ನೇಹಮಿಲನ-2019 ಕಾರ್ಯಕ್ರಮ ಜ.20ರಂದು ಬೆಳಗ್ಗೆ ನಡೆಯಲಿದೆ ಎಂದು ವಿಠಲ ವಿದ್ಯಾ ಸಂಘದ ಸಂಚಾಲಕ ಎಲ್.ಎನ್ ಕೂಡೂರು ತಿಳಿಸಿದರು.
ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ಕಾರ್ಯಕ್ರಮದಲ್ಲಿ ವಿಠಲ ಪ್ರೌಢ ಶಾಲೆ, ವಿಠಲ ಪದವಿಪೂರ್ವ ಕಾಲೇಜು, ವಿಠಲ ಸುಪ್ರಜಿತ್ ಐಟಿಐ ನ ಹಿರಿಯ ವಿದ್ಯಾರ್ಥಿಗಳು, ತಮ್ಮ ಬದುಕು ರೂಪಿಸಿದ ನಿವೃತ್ತ ಶಿಕ್ಷಕ, ಶಿಕ್ಷಕೇತರ ಉಪಸ್ಥಿತಿಯಲ್ಲಿ ಒಂದು ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ವಿಟ್ಲ ಅರಮನೆಯ ರವಿವರ್ಮ ಕೃಷ್ಣರಾಜರು ಸುಮಾರು ಐದು ಎಕರೆಯಷ್ಟು ಸ್ಥಳದಾನ ಮಾಡಿದ್ದರು. ಅವರ ಅಧ್ಯಕ್ಷತೆಯಲ್ಲಿ ವಿಠಲ ವಿದ್ಯಾ ಸಂಘ ಆರಂಭಗೊಂಡಿತ್ತು. ದೇವಸ್ಯ ನಾರಾಯಣ ಭಟ್ಟರು ಸಂಚಾಲಕರಾಗಿ ಮುನ್ನಡೆಸಿದ್ದು, ಇವರಿಗೆ ಪ್ರೇರಕ ಶಕ್ತಿಯಾಗಿದ್ದ ಜಿಲ್ಲಾ ಸಹಕಾರಿ ಪಿತಾಮಹವೆನಿಸಿದ್ದ ಮೊಳಹಳ್ಳಿ ಶಿವರಾಯರು, ಪ್ರಥಮ ಮುಖ್ಯೋಪಾಧ್ಯಾಯರಾಗಿದ್ದ ಮಡಿಯಾಲ ನಾರಾಯಣ ಭಟ್ 1954ರಲ್ಲಿ ಚೊಚ್ಚಲ ಎಸ್ಎಸ್ಎಲ್ಸಿ ತಂಡ ಹೊರ ತಂದಾಗಿನಿಂದ ವಿಠಲ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘ ಹುಟ್ಟಿಕೊಂಡಿತ್ತು. ವಿಠಲ ಹೈಸ್ಕೂಲ್ನ ಹಳೆ ವಿದ್ಯಾರ್ಥಿ ಸಂಘದ ಪ್ರಥಮ ಅಧ್ಯಕ್ಷ, ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಪದ್ಮನಾಭ ಕೆದಿಲಾಯ ಅವರ ಅಧ್ಯಕ್ಷತೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಕುಟುಂಬ ಮಿಲನ ಕಾರ್ಯಕ್ರಮ ಆಯೋಸಲಾಗಿದೆ. ಪ್ರಸ್ತುತ ಈ ಸಂಸ್ಥೆಯಲ್ಲಿ 1600 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕ್ರೀಡೆ ಸೇರಿದಂತೆ ನಾನಾ ಚಟುವಟಿಕೆಯಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಬೆಳಗ್ಗೆ ಉಪಾಹಾರ ಹಾಗೂ ಸ್ನೇಹಮಿಲನ, ಬದುಕು ರೂಪಿಸಿದ ಹಿರಿಯರಿಗೆ ನಮನ ಸಲ್ಲಿಕೆ, ಸಾಧಕರ ಅನಿಸಿಕೆ, ಸಂವಾದ, ಭೋಜನದ ಬಳಿಕ ಮನರಂಜನಾ ಕಾರ್ಯಕ್ರಮ ಹಾಗೂ ಫನ್ ಗೇಮ್ಸ್ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರು ಸುಪ್ರಜಿತ್ ಎಂಜಿನಿಯರ್ ಲಿಮಿಟೆಡ್ನ ಆಡಳಿತ ನಿರ್ದೇಶಕ ಅಜಿತ್ ಕುಮಾರ್ ರೈ, ಬೆಂಗಳೂರು ಕೆಇಬಿ ನಿವೃತ್ತ ಎಂಜಿನಿಯರ್ ಪದ್ಮನಾಭ ಭಟ್, ಕನ್ನಡ ಚಲನಚಿತ್ರ ಸಂಗೀತ ನಿರ್ದೇಶಕ ವಿ. ಮನೋಹರ್, ನಿವೃತ್ತ ಪ್ರಾಧ್ಯಾಪಕಿ ಡಾ. ಪಾರ್ವತಿ ಜಿ ಐತಾಳ್, ಮುಂಬಾಯಿ ಮೆಝ್ಗಾನ್ ಡಾಕ್ ಶಿಪ್ ಬಿಲ್ಡರ್ಸ್ನ ನಿವೃತ್ತ ಜನರಲ್ ಮೆನೇಜರ್ ಅಲ್ಫೋನ್ಸ್ ಸಿಲೆಸ್ಟರ್ ಮಸ್ಕರೇಂಞಸ್, ಪಣಂಬೂರು ಪೊಲೀಸ್ ಇನ್ಸ್ಪೆಕ್ಟರ್ ರಫೀಕ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಠಲ ವಿದ್ಯಾ ಸಂಘದ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ಕಾಲೇಜು ಪ್ರಿನ್ಸಿಪಾಲ್ ಆದರ್ಶ ಚೊಕ್ಕಾಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿಪ್ರಕಾಶ್, ಸಂಚಲನ ಸಮಿತಿ ಗೌರವಾಧ್ಯಕ್ಷ ಎಚ್. ಸುಬ್ರಹ್ಮಣ್ಯ ಭಟ್, ಅಧ್ಯಕ್ಷ ರಾಧಾಕೃಷ್ಣ ನಾಯಕ್ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here