Monday, September 25, 2023
More

  ಲೋಕೇಶ್ ಮುಚ್ಚೂರುಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ

  Must read

  ಕಾರ್ಕಳ: ಕಟೀಲು ಮೇಳದ ಕಲಾವಿದ, ಪ್ರಸಿದ್ಧ ಪುಂಡು ವೇಷಧಾರಿ ಲೋಕೇಶ್ ಮುಚ್ಚೂರು ಅವರಿಗೆ ಈ ಬಾರಿಯ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಲಭಿಸಿದೆ. ಕಾರ್ಕಳ ಹಿರ್ಗಾನ ಶ್ರೀ ಕುಂದೇಶ್ವರ ದೇವಸ್ಥಾನ ಜಾತ್ರೆಯ ಸಂದರ್ಭ ಜ.23ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.
  ಇದೇ ಸಂದರ್ಭ ಹಿರಿಯ ಅರ್ಥಧಾರಿ ನಡಿಬೆಟ್ಟು ಧರ್ಮರಾಜ ಕಟ್ಟಡರಿಗೆ ಗೌರವ ಸನ್ಮಾನ ಮಾಡಲಾಗುವುದು. ಮೇರು ಭಾಗವತ ಬಲಿಪ ನಾರಾಯಣ ಭಾಗವತರು ಪ್ರಶಸ್ತಿ ಪ್ರದಾನ ಮಾಡುವರು ಎಂದು ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ತಿಳಿಸಿದ್ದಾರೆ.
  ಒಂದೇ ದೇಶ- ಒಂದೇ ಶಿಕ್ಷಣ ರಾಷ್ಟ್ರೀಯ ಅಭಿಯಾನದ ರೂವಾರಿ ಪ್ರಕಾಶ್ ಅಂಚನ್ ದಡ್ಡಲಕಾಡು ಅವರು ಅಧ್ಯಕ್ಷತೆ ವಹಿಸುವರು. ಶಾಸಕ ವಿ.ಸುನಿಲ್ ಕುಮಾರ್, ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಮೊಲಾದವರು ಭಾಗವಹಿಸುವರು.
  ಕರಾವಳಿಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ, ವೀರ ಅಭಿಮನ್ಯು ಮತ್ತು ಕದ್ರಿ ಬಾಲ ಯಕ್ಷಕೂಟದಿಂದ “ಶ್ರೀಕೃಷ್ಣಲೀಲೆ” ಯಕ್ಷಗಾನ ನಡೆಯಲಿದೆ.
  ಕಿಶೋರ್ ಡಿ. ಶೆಟ್ಟಿ ಯಜಮಾನಿಕೆಯ ಲಕುಮಿ ತಂಡ ಕಲಾವಿದರಿಂದ ಅರವಿಂದ ಬೋಳಾರ್ ಪ್ರಧಾನ ಪಾತ್ರದಲ್ಲಿ ಹಾಸ್ಯ ಮಯ ತುಳು ನಾಟಕ “ಮಂಗೆ ಮಲ್ಪೊಡ್ಚಿ” ಪ್ರದರ್ಶನಗೊಳ್ಳಲಿದೆ.
  ವರ್ಷಾವಧಿ ಜಾತ್ರೆ: ಜ.22ರಂದು ಜಾತ್ರೆ, ಅನ್ನಸಂತರ್ಪಣೆ, ರಂಗಪೂಜೆ ಉತ್ಸವ. ನೇಮೋತ್ಸವ, ಭೂತ ಬಲಿ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
  ಲೋಕೇಶ್ ಮುಚ್ಚೂರು
  ಬಡತನದಿಂದ ಪುಟಿದೆದ್ದ ಕಲಾ ಶ್ರೀಮಂತಿಕೆ
  ಯಕ್ಷಗಾನ ಬಯಲಾಟಗಳು ನಡೆಯುತ್ತಿದ್ದಾಗ ತಂದೆಯ ಜತೆ ಸಂತೆಯಲ್ಲಿ ಕಡ್ಲೆ ಮಾರಾಟ ಮಾಡುತ್ತಿದ್ದ ಪುಟ್ಟ ಬಾಲಕನೊಬ್ಬ ಪ್ರಸ್ತುತ ಕಟೀಲು ಮೇಳದಲ್ಲಿ ಜನಮನ್ನಣೆ ಗಳಿಸಿರುವ ಪುಂಡು ವೇಷಧಾರಿ ಲೋಕೇಶ್ ಮುಚ್ಚೂರು.
  ಅವರಿಗೆ ಈ ಬಾರಿ ಅರ್ಹವಾಗಿಯೇ ಕಾರ್ಕಳ ಹಿರ್ಗಾನ ಶ್ರಿ ಕುಂದೇಶ್ವರ ಕ್ಷೇತ್ರದಿಂದ ದಿ.ರಾಘವೇಂದ್ರ ಭಟ್ಟರ ನೆನಪಲ್ಲಿ ನೀಡುವ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಅರ್ಹವಾಗಿಯೇ ಲಭಿಸಿದೆ. ತೀರಾ ಹಿಂದುಳಿದ ಕುಡುಬಿ ಸಮುದಾಯದಲ್ಲಿ ಹುಟ್ಟಿ ಕಡು ಬಡತನದಲ್ಲಿ ಬದುಕು ಸಾಗಿಸುತ್ತಿದ್ದ ಲೋಕೇಶ್‍ಗೆ ಯಕ್ಷ ಪರಂಪರೆ, ಕಲೆಯ ಸೋಂಕಿಲ್ಲ. ಆದರೆ ಕುಡುಬಿ ಜನಪದ ಸಂಸ್ಕøತಿಯ ರಕ್ತಗತವಾಗಿತ್ತು. ಎಷ್ಟೇ ಸಂಕಷ್ಟಗಳಿದ್ದರೂ ಸ್ವಂತ ಪರಿಶ್ರಮದಲ್ಲಿ ದೊಡ್ಡ ಕಲಾವಿದನಾಗಿ ಸಾಧನೆ ಮಾಡಬಹುದು ಎನ್ನುವುದಕ್ಕೆ ಲೋಕೇಶ್ ಮುಚ್ಚೂರು ಜ್ವಲಂತ ಉದಾಹರಣೆ.
  ತಂದೆ ರಾಮೇಗೌಡರು ಬಯಲಾಟಗಳು ನಡೆಯುವಲ್ಲಿಗೆ ಸಂತೆ ತೆಗೆದುಕೊಂಡು ಹೋಗಿ, ಅಲ್ಲಿ ಕಡ್ಲೆ, ನೆಲಗಡ್ಲೆ ಮಾರುತ್ತಿದ್ದರು. ತಂದೆಯ ಜತೆ  ಕಡ್ಲೆ ಮಾರಾಟಕ್ಕೆ ಹೋಗುತ್ತಿದ್ದ ಪುಟ್ಟ ಬಾಲಕ, ಯಕ್ಷಗಾನ ನೋಡುವುದು ಕ್ರಮೇಣ ಗೀಳಾಗಿತ್ತು. ಇದನ್ನು ನೋಡಿದ ತಂದೆಯೇ ಧರ್ಮಸ್ಥಳದ ಯಕ್ಷಗಾನ ಕೇಂದ್ರ ನಡೆಸುವ ಕಲಿಕಾ ಕೇಂದ್ರಕ್ಕೆ ಸೇರಿಸಿದರು. ಅಲ್ಲಿ 6 ತಿಂಗಳು ಪ್ರಾಥಮಿಕ ಕುಣಿತ ಕಲಿತರು.
  ಅಲ್ಲಿಂದ 6 ವರ್ಷಗಳ ಕಾಲ ಕಟೀಲು ಮೇಳದಲ್ಲಿ ಬಾಲಗೋಪಾಲ ವೇಷ ಮಾಡಿದರು. ಬಳಿಕ ಪೀಠಿಕೆ ಸ್ತ್ರೀವೇಷ, ದೇವೇಂದ್ರ ಬಲ ಮಾಡತೊಡಗಿದರು.
  ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಶಿಕ್ಷಣ, ದಿವಾಣ ಶಿವಶಂಕರ ಭಟ್ ಅವರ ಗರಡಿಯಲ್ಲಿ ಪಳಗಿದ ಲೋಕೇಶ್ ಇದೀಗ ಜನ ಮೆಚ್ಚುವ ಕಲಾವಿದೆ. 13ರ ಹರೆಯದಲ್ಲಿ ಕಟೀಲು ಮೇಳ ಸೇರಿದ ಲೋಕೇಶ್‍ಗೆ 15ವರ್ಷಗಳ ಅನುಭವ.   ಈಗ ಸ್ಟಾರ್ ಕಲಾವಿದೆ. ಲೋಹಿತಾಶ್ವ, ಧ್ರುವ, ಅಭಿಮನ್ಯು, ಕಾಳಿಂಗ ಮರ್ದನದ ಕೃಷ್ಣ ಅತ್ಯಂತ ಜನಪ್ರಿಯತೆ ತಂಡು ಕೊಟ್ಟ ಪಾತ್ರಗಳು. ಈಗ ದೇವಿ ಮಹಾತ್ಮೆಯ ಚಂಡ ಮುಂಡರಲ್ಲಿ ಮುಂಡಾಸುರನಾಗಿ ಜನರ ಹೃದಯದಲ್ಲಿ ಅಚ್ಚಳಿಯದೆ ಕುಳಿತಿದ್ದಾರೆ.
  ಧಿಗಿಣದಲ್ಲಿ ದಾಖಲೆ: 
  ಸದ್ಯದ ಪರಿಸ್ಥಿತಿಯಲ್ಲಿ ಅತಿ ಹೆಚ್ಚು ಧಿಗಿಣ ಮಾಡಿದ ದಾಖಲೆ ಲೋಕೇಶ್ ಮುಚ್ಚೂರು ಅವರದ್ದು. ಒಮ್ಮೆಗೆ ಸುಮಾರು 200 ಧಿಗಿಣ ಹಾಕಿದ ದಾಖಲೆ ಇದೆ. 160 ಕ್ಕಿಂತ ಹೆಚ್ಚು ಧಿಗಿಣ ಹಾಕಿರುವುದು ಅನೇಕ ಬಾರಿ ವೀಡಿಯೋಗಳಲ್ಲಿ ದಾಖಲೆಯಾಗಿ ಉಳಿದಿದೆ.
  ಕೌಟುಂಬಿಕ ಹಿನ್ನೆಲೆ: 
  ಮಂಗೆಬೆಟ್ಟು ರಾಮೇಗೌಡ, ರಾಜೀವಿ ಅವರ ಮೊದಲ ಮಗ ಲೋಕೇಶ್. 1993 ಮೇ 24ರಂದು ಜನನ. ಹಣಕಾಸು ಮುಗ್ಗಟ್ಟು ಮತ್ತು ದುಡಿಯುವ ಅನಿವಾರ್ಯತೆಯಿಂದಾಗಿ ಲೋಕೇಶ್ 7ನೇ ತರಗತಿಗೆ ಶಿಕ್ಷಣ ಮೊಟಕುಗೊಳಸಬೇಕಾಯಿತು. ತಂಗಿ, ತಮ್ಮಂದಿರ ಶಿಕ್ಷಣ ಮತ್ತು ಕುಟುಂಬದ ಹೊಟ್ಟೆ ಪೊರೆಯುವ ಹೊಣೆ ಹೆಗಲಿಗೆ ಬಿತ್ತು. ಯಕ್ಷಗಾನವನ್ನು ನೆಚ್ಚಿಕೊಂಡು, ತಾನು ದುಡಿದು ಸಹೋದರನ್ನು ಚೆನ್ನಾಗಿ ಓದಿಸಿ ಅವರಿಬ್ಬರಿಗೂ ಕೆಲಸ ತೆಗೆಸಿಕೊಟ್ಟಿದ್ದಾರೆ.
  ಕಟೀಲು ಭ್ರಮರಾಂಬಿಕೆಯ ಸೇವೆ ಮಾಡಿದ ಬಳಿಕ ನಾನು ದಿನದಿಂದ ದಿನಕ್ಕೆ ಶ್ರೇಯಸ್ಸೇ ಆಗುತ್ತಿದೆ. ಇಂಥ ಮೇಳಕ್ಕೆ ಸೇರಿದ್ದು ನನ್ನ ಪುಣ್ಯ.
  ಮೇಳದಲ್ಲಿ ರವಿಶಂಕರ ಭಟ್. ವಿಷ್ಣು ಶರ್ಮ, ತೋಡಿಕಾನ, ವಿಶ್ವನಾಥ, ಸುಬ್ರಾಯ ಹೊಳ್ಳ, ಮುಂತಾದ ಹಿರಿಯರು ಸಹಕರಿಸಿದ್ದರಿಂದ ತೃಪ್ತಿಯಿಂದ ಸೇವೆ ಮಾಡಲು ಸಾಧ್ಯವಾಯಿತು ಎನ್ನುತ್ತಾರೆ ಲೋಕೇಶ್ ಮುಚ್ಚೂರು.
  ಇಂತಹ ಸರಳತೆ, ವಿಧೇಯ ವಿಶಿಷ್ಟ ಕಲಾವಿದನಿಗೆ ಕಾರ್ಕಳ ಹಿರ್ಗಾನದ ಶ್ರೀ ಕುಂದೇಶ್ವರ ಕ್ಷೇತ್ರದಲ್ಲಿ ಜ.23ರಂದು ರಾತ್ರಿ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ ನಡೆಯಲಿದೆ.

  More articles

  LEAVE A REPLY

  Please enter your comment!
  Please enter your name here

  Latest article